ಚಾಮರಾಜನಗರ | ಜಮೀನಿನಲ್ಲಿ ಕನ್ನಡ, ತಮಿಳು ಬಾಷೆಯ 10ನೇ ಶತಮಾನದ ಶಾಸನಗಳು ಪತ್ತೆ
ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹೋಬಳಿಯ ಯಣಗುಂಬದಲ್ಲಿ 10 ನೇ ಶತಮಾನದ್ದು ಎನ್ನಲಾಗಿರುವ ಶಾಸನ, ವೀರಗಲ್ಲುಗಳು ಪತ್ತೆಯಾಗಿದ್ದು, ತಮಿಳು ಮತ್ತು ಕನ್ನಡ ಭಾಷೆಯ ಶಾಸನಗಳು ಇವಾಗಿವೆ.
ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮದ ಮಂಜುನಾಥ್ ಎಂಬವರ ಜಮೀನು ಮತ್ತು ಜಮೀನಿನ ಸುತ್ತಮುತ್ತಲು ತುರುಗೋಲು ಶಾಸನಗಳು ಪತ್ತೆಯಾಗಿದ್ದು, 2 ಶಾಸನಗಳಲ್ಲಿ ತಮಿಳು, 5 ಶಾಸನಗಳಲ್ಲಿ ಕನ್ನಡ ಭಾಷೆಯ ಲಿಪಿಗಳಿಂದ ಕೂಡಿದೆ.
ಚಾಮರಾಜನಗರ ತಾಲೂಕಿನ ಯಣಗುಂಬ ಗ್ರಾಮವನ್ನು ಕನ್ನಡ ಶಾಸನದಲ್ಲಿ ಯರಮಗುಂಬ ಎಂದು ಉಲ್ಲೇಖಿಸಿದ್ದು, ತಮಿಳು ಶಾಸನದಲ್ಲಿ ಯರಮೈಗುಂಬ ಎಂದಿದೆ. ಯಣಗುಂಬ ಸಮೀಪದ ಮೇಳೂರನ್ನು ಮೋಳೂರು ಎಂದಿದ್ದು, ಆಗಿನ ಕಾಲದಲ್ಲಿ ಎಮ್ಮೆ ಸಾಕಾಣಿಕೆ ಈ ಭಾಗದಲ್ಲಿ ಹೆಚ್ಚಿದಿದ್ದು ಶಾಸನದಿಂದ ತಿಳಿದು ಬಂದಿದೆ.
ಭಾರತೀಯ ಪುರಾತ್ವ ಇಲಾಖೆಯ ಕನ್ನಡ ಶಾಸನ ತಜ್ಞ ಡಾ. ಅನಿಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ʼಒಂದು ಶಾಸನದಲ್ಲಿ ಭೂದಾನ ಕೊಟ್ಟ ಬಗ್ಗೆ ಮಾಹಿತಿ ಇದೆ. ಮತ್ತೊಂದರಲ್ಲಿ ಕೇಸಣ್ಣ ಎಂಬಾತ ಹಸುಗಳನ್ನು ಕದ್ದೊಯ್ಯುವಾಗ ಯರಮಗುಂಬದ ಕಾಳ ಎಂಬಾತ ಹೋರಾಡಿ ವೀರ ಮರಣವನ್ನಪ್ಪಿದ ಮಾಹಿತಿ, ತಮಿಳು ಶಾಸನದಲ್ಲಿ ಮುನಿವರ ಕಂದಾಚಾರಿ ಎಂಬಾತನ ಮಗ ಕೊಲನ್ ಎಂಬ ವೀರನ ಬಗ್ಗೆ ಮಾಹಿತಿ ಇದೆ. ಇನ್ನೊಂದು ಶಾಸನದಲ್ಲಿ ರಾಜ ಲಾಂಛನ, ಛತ್ರಿ- ಕುದುರೆಗಳಿದ್ದು, ಓದಲು ಅಸ್ಪಷ್ಟವಾಗಿದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದು. ತಮಿಳು ಶಾಸನಗಳನ್ನು ಡಾ.ಬಾಲಮುರುಗನ್ ಎಂಬವರು ಅಧ್ಯಯನ ಮಾಡುತ್ತಿದ್ದು, ನಾಗೇಂದ್ರ, ಗೌರವ್ ಎಂಬವರು ನಮ್ಮ ತಂಡದಲ್ಲಿದ್ದಾರೆ' ಎಂದು ತಿಳಿಸಿದ್ದಾರೆ.
ಜಮೀನಿನ ಮಾಲೀಕ ಮಂಜುನಾಥ್ ಈ ಬಗ್ಗೆ ಮಾಹಿತಿ ನೀಡಿ, ʼಜಮೀನಿನಲ್ಲಿ ಕೆಲಸ ನಿರ್ವಹಿಸುವಾಗ ಭೂ ಗರ್ಭದಲ್ಲಿ ಹುದುಗಿದ್ದ ಶಾಸನಗಳು ಪತ್ತೆಯಾದವು. ಶಿವನ ಸಣ್ಣ ಗುಡಿ ಕೂಡ ನಮ್ಮ ಜಮೀನಿನಲ್ಲಿದ್ದು, ಅದೂ ಕೂಡ ಬೇಲಿಗಳಿಂದ ಮುಚ್ಚಿಹೋಗಿತ್ತು. ಅದನ್ನು ತೆರವು ಮಾಡಿದ ಬಳಿಕ ಭೂದಾನ ಶಾಸನ ದೊರಕಿದೆ. ನಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅಧ್ಯಯನ ನಡೆಸಿ ಶಾಸನ ಮತ್ತು ವೀರಗಲ್ಲುಗಳನ್ನು ಸಂರಕ್ಷಿಸಬೇಕು' ಎಂದು ಅವರು ಒತ್ತಾಯಿಸಿದ್ದಾರೆ.