×
Ad

ಚಾಮರಾಜನಗರ | ಅಡುಗೆ ಸಿಬ್ಬಂದಿ ದಲಿತ ಮಹಿಳೆ ಕಾರಣಕ್ಕೆ ಶಾಲೆ ತೊರೆದ ಮಕ್ಕಳು: ಅಧಿಕಾರಿಗಳ ಭೇಟಿ ಬಳಿಕ ಪ್ರಕರಣ ಸುಖಾಂತ್ಯ

Update: 2025-06-25 16:32 IST

ಚಾಮರಾಜನಗರ : ಶಾಲೆಯಲ್ಲಿ ದಲಿತ ಮಹಿಳೆ ಅಡುಗೆ ಮಾಡಿದ್ದನ್ನು ಸೇವಿಸದ ವಿದ್ಯಾರ್ಥಿಗಳ ಪ್ರಕರಣವು ಅಧಿಕಾರಿಗಳ ಮತ್ತು ಮಕ್ಕಳ ಪೋಷಕರ ನಡುವೆ ನಡೆದ ಮಾತುಕತೆಯ ಮೂಲಕ ಸುಖಾಂತ್ಯ ಕಂಡಿದೆ.

ಚಾಮರಾಜನಗರ ತಾಲ್ಲೂಕಿನ ಹೊಮ್ಮ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ದಲಿತ ಮಹಿಳೆಯೊಬ್ಬರು ಅಡುಗೆ ಮಾಡಿದ್ದನ್ನು ಮಕ್ಕಳು ಸೇವನೆ ಮಾಡದೇ, ಶಾಲೆಯಿಂದಲೇ ವರ್ಗಾವಣೆ ಪತ್ರ ಪಡೆಯುತ್ತಿರುವ ಬಗ್ಗೆ ವರದಿಯಾಗಿತ್ತು.

ಈ ವಿಷಯ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ, ಸಮಾಜ ಕಲ್ಯಾಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ಧೇಶಕ ರಾಮಚಂದ್ರರಾಜೇ ಅರಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಶಾಲೆಯ ಕೊಠಡಿಯಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.

ಪ್ರಸ್ತುತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಸರಿಯಾಗಿ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿರಲಿಲ್ಲ, ಈ ಬಗ್ಗೆ ಹಲವಾರು ಬಾರಿ ಶಾಲೆಯಲ್ಲಿ ಪೋಷಕರು ಪ್ರತಿಭಟನೆ ನಡೆಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗೂ ಕಳೆದ ಆರೇಳು ತಿಂಗಳ ಹಿಂದೆ ಅಡುಗೆಯವರಲ್ಲಿ ಒಬ್ಬರೇ ಕೆಲಸ ಮಾಡುವ ಪರಿಸ್ಥಿತಿ ಇತ್ತು. ಪ್ರಸ್ತುತ ದಲಿತ ಮಹಿಳೆಯೇ ಅಡುಗೆ ಮಾಡುತ್ತಿದ್ದರು. ಇದನ್ನೇ ನೆಪ ಮಾಡಿಕೊಂಡ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಶಾಲೆಯಲ್ಲಿನ ಸ್ಥಿತಿಗತಿಯ ಬಗ್ಗೆ ಮಾದ್ಯಮಗಳಲ್ಲಿ ಪ್ರಸಾರವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್ ರವರು ಶಾಲೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಪೋಷಕರೊಂದಿಗೆ ಮತ್ತು ಅಡುಗೆಯವರೊಂದಿಗೆ ಚರ್ಚೆ ನಡೆಸಿದ ಫಲವಾಗಿ ಶಾಲೆಯಿಂದ ಬೇರೆ ಶಾಲೆಗೆ ದಾಖಲಾಗಿದ್ದ 8 ಮಕ್ಕಳು ಪುನಃ ಶಾಲೆಗೆ ದಾಖಲಾದರು.

ಅಧಿಕಾರಿಗಳು ಮತ್ತು ಶಾಲೆಯ ಮಕ್ಕಳು ಸಾಮೂಹಿಕವಾಗಿ ಕುಳಿತು ದಲಿತ ಮಹಿಳೆ ಸಿದ್ದಪಡಿಸಿದ ಬಿಸಿಯೂಟವನ್ನುಸವಿದರು. ಹಾಗೂ ಗುಣಮಟ್ಟದಲ್ಲಿ ಅಡುಗೆ ಸಿದ್ದಪಡಿಸುವಂತೆ ಸೂಚಿಸಲಾಯಿತು.

ಶಾಲೆಯಲ್ಲಿ ಇಬ್ಬರು ಶಿಕ್ಷರಿದ್ದರು ಅವರು ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಪ್ರತಿಭಟನೆ ಮಾಡಿದ್ದೆವು, ಆಗ ಅಧಿಕಾರಿಗಳು ತಾತ್ಕಾಲಿಕವಾಗಿ ಅವರನ್ನು ಬದಲಾಯಿಸುತ್ತಿದ್ದರು. ಆದರೆ ಈಗ ಶಿಕ್ಷಕರನ್ನು ಬದಲಾಯಿಸಿದ ಬಳಿಕ ಮಕ್ಕಳನ್ನು ಶಾಲೆಗೆ ಸೇರಿಸಿ ಗ್ರಾಮದಲ್ಲಿರುವ ಶಾಲೆಯನ್ನುಉಳಿಸಲು ನಾವೆಲ್ಲರೂ ಮುಂದಾಗಿದ್ದೇವೆ.

ಲೋಕೇಶ್, ಗ್ರಾಮಸ್ಥರು ಹೊಮ್ಮ ಗ್ರಾಮ

ಪೋಷಕರು ಮತ್ತು ಅಡುಗೆಯವರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ, ಶಾಲೆಗೆ ಮಕ್ಕಳನ್ನು ದಾಖಲು ಮಾಡಲು ಪೋಷಕರು ಒಪ್ಪಿಕೊಂಡಿದ್ದಾರೆ. ಹಾಗೂ ಪ್ರಸ್ತುತ ಶಾಲೆಗೆ ಮೂವರು ಶಿಕ್ಷಕರನ್ನು ನಿಯೋಜನೆ ಮಾಡಲಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಸೂಚನೆ ನೀಡಲಾಗಿದೆ. ಹಾಗೂ ಶಿಕ್ಷಣ ಇಲಾಖೆಯಿಂದ 15 ದಿನಗಳ ತನಕ ಮಾನಿಟರಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ.

ಮೋನಾರೋತ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಚಾಮರಾಜನಗರ

ಹಿಂದೆ ಮೂವರು ಅಡುಗೆಯವರಿದ್ದರು, ಈಗ ಒಬ್ಬರೇ ಅಡುಗೆಯವರು ಇದ್ದಾರೆ. ಅಡುಗೆ ಸಿದ್ದಪಡಿಸಲು ಪರಿಣಿತರಾಗಿಲ್ಲ ಎನ್ನುವ ಆತಂಕ ಗ್ರಾಮಸ್ಥರದ್ದಾಗಿದೆ. ಪ್ರಸ್ತುತ ಅಡುಗೆ ಸಿದ್ದಪಡಿಸುವ ದಲಿತ ಮಹಿಳೆಗೆ ಸರಿಯಾಗಿ ಆಡುಗೆ ಮಾಡಲು ಬರುತ್ತಿರಲಿಲ್ಲ ಎನ್ನುವ ದೂರಗಳಿದ್ದು, ಇವರು 26 ವರ್ಷಗಳಿಂದ ಅಡುಗೆ ಮಾಡುತ್ತಿದ್ದಾರೆ. ನೊಂದಿರುವ ಮಹಿಳೆ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ.

ಡಾ. ಕವಿತಾ, ಪೊಲೀಸ್ ವರಿಸ್ಠಾಧಿಕಾರಿಗಳು ಚಾಮರಾಜನಗರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News