×
Ad

ಚಾಮರಾಜನಗರ | 50 ಸಾವಿರ ರೂ.ಗೆ ಹೆಣ್ಣು ಮಗು ಮಾರಾಟ ಪ್ರಕರಣ : ತಂದೆ, ತಾಯಿ ಸೇರಿ ಐವರ ಬಂಧನ

Update: 2026-01-26 12:12 IST

 ಸಾಂದರ್ಭಿಕ ಚಿತ್ರ

ಚಾಮರಾಜನಗರ: ಕಳೆದ ವರ್ಷ ನವಜಾತ ಹೆಣ್ಣುಮಗು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೋಷಕರು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.

ಚಾಮರಾಜನಗರ ಪಟ್ಟಣದ ರಾಮಸಮುದ್ರ ನಿವಾಸಿಗಳಾದ ಸಿಂಧು ಮತ್ತು ಮಂಜುನಾಯಕ ದಂಪತಿಗೆ 2025ರ ಜು.26ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿತ್ತು. ಆದರೆ ನವಜಾತ ಶಿಶು ಪೋಷಕರ ವಶದಲ್ಲಿಲ್ಲ ಎಂಬುದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ 2025ರ ಸೆ.15ರಂದು ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಜ.23ರಂದು ಸಿಂಧು ಮತ್ತು ಮಂಜುನಾಯಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರಳಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತ ಎಂಬುವರ ಮಧ್ಯವರ್ತಿತ್ವದಲ್ಲಿ, ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕೊಣನೂರು ಗ್ರಾಮದ ಜವರಯ್ಯ ಮತ್ತು ನೇತ್ರಾ ದಂಪತಿಗೆ ನವಜಾತ ಶಿಶುವನ್ನು 50,000 ರೂ. ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ತನಿಖೆ ವೇಳೆ ಸುಮಾರು ಆರು ತಿಂಗಳಿಂದ ಜವರಯ್ಯ ಮತ್ತು ನೇತ್ರಾ ದಂಪತಿಯ ಆಶ್ರಯದಲ್ಲಿದ್ದ ಶಿಶುವನ್ನು ಪೊಲೀಸರು ರಕ್ಷಿಸಿ, ಶಿಶು ಅಭಿವೃದ್ಧಿ ಇಲಾಖೆಯ ವಶಕ್ಕೆ ಒಪ್ಪಿಸಿದ್ದು, ಮಗು ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಆರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ವಿಧಾನಗಳ ಮೂಲಕ ಪತ್ತೆಹಚ್ಚಲಾಗಿದ್ದು, ಮಗುವಿನ ತಂದೆ ಮಂಜುನಾಯಕ, ತಾಯಿ ಸಿಂಧು, ಮಧ್ಯವರ್ತಿಯಾದ ಶಾಂತ ಹಾಗೂ ಅಕ್ರಮವಾಗಿ ಮಗುವನ್ನು ಪಡೆದ ಜವರಯ್ಯ ಮತ್ತು ನೇತ್ರಾ ದಂಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಮಗುವಿನ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್ ಎನ್. ಅವರ ಮಾರ್ಗದರ್ಶನದಲ್ಲಿ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಜಗದೀಶ, ಸಬ್‌ ಇನ್ಸ್‌ಪೆಕ್ಟರ್ ಆರ್.ಮಂಜುನಾಥ್ ಹಾಗೂ ಸಿಬ್ಬಂದಿವರ್ಗದವರು ತನಿಖೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News