ಚಾಮರಾಜನಗರ: ಅಗ್ನಿ ಆಕಸ್ಮಿಕ; ಏಳು ಅಂಗಡಿಗಳು ಸಂಪೂರ್ಣ ಭಸ್ಮ
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಏಳು ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಗಿವೆ.
ಯಳಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಶುಕ್ರವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಬಿಳಿಗಿರಿರಂಗನ ಬೆಟ್ಟದ ಸರ್ಕಲ್ ಪ್ರದೇಶದಲ್ಲಿರುವ ಅಂಗಡಿಗಳಿಗೆ ಈ ಬೆಂಕಿ ವ್ಯಾಪಿಸಿದ್ದು, ಏಳು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ.
ಅಂಗಡಿಗಳಲ್ಲಿ ಅನಿಲ ಸಿಲಿಂಡರ್‌ಗಳು ಇದ್ದ ಕಾರಣ ಬೆಂಕಿಯನ್ನು ತಕ್ಷಣ ನಂದಿಸಲು ಸಾಧ್ಯವಾಗಲಿಲ್ಲ. ಜೊತೆಗೆ ರಾತ್ರಿ ಸಮಯದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದ್ದರಿಂದ ನೀರು ತರಲು ಸಾಧ್ಯವಾಗದೆ, ಬೆಂಕಿ ಇನ್ನಷ್ಟು ವ್ಯಾಪಿಸಲು ಕಾರಣವಾಯಿತು.
ಬೆಂಕಿಯ ಕೆನ್ನಾಲಿಗೆಗೆ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.