Chamarajanagar | ಹೊನ್ನಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ
Update: 2026-06-11 17:56 IST
ಚಾಮರಾಜನಗರ : ಕಾಡಿನಿಂದ ಗ್ರಾಮಕ್ಕೆ ಬಂದು ಜಾನುವಾರುಗಳ ಮೇಲೆ ದಾಳಿ ನಡೆಸಿ ಗ್ರಾಮಸ್ಥರಿಗೆ ತಲೆ ನೋವಾಗಿದ್ದ ಚಿರತೆಯು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದ ಘಟನೆ ಚಾಮರಾಜನಗರ ತಾಲ್ಲೂಕಿನ ಹೊನ್ನಹಳ್ಳಿಯಲ್ಲಿ ನಡೆದಿದೆ.
ಹೊನ್ನಹಳ್ಳಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಕಾಡಿನಿಂದ ಗ್ರಾಮಕ್ಕೆ ಬಂದ ಚಿರತೆಯು ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು.
ಗ್ರಾಮದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಒತ್ತಾಯಿಸಿದ್ದರಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನಿಟ್ಟರು. ಗುರುವಾರ ಮುಂಜಾನೆ 6 ವರ್ಷದ ಗಂಡು ಚಿರತೆಯು ಬೋನಿಗೆ ಬಿದಿದ್ದು, ಇದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.