Chamarajanagar | ನಂಜೇದೇವನಪುರದಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಚಾಮರಾಜನಗರ : ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮದ ಹೊರವಲಯಲ್ಲಿರುವ ತೋಟದ ಮುಂದೆ ಶುಕ್ರವಾರ ಮುಂಜಾನೆ ಹುಲಿಯೊಂದು ಸಾಗಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗ್ರಾಮದ ಹೊರವಲಯದಲ್ಲಿರುವ ಪ್ರಶಾಂತ್ ಮತ್ತು ಕುಮಾರ್ ಎಂಬುವರ ತೋಟದ ಮುಂದೆ ಶುಕ್ರವಾರ ಮುಂಜಾನೆ ಸುಮಾರು 3:30ರ ವೇಳೆಯಲ್ಲಿ ಹುಲಿ ಹಾದು ಹೋಗಿದೆ. ಈ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಇದೇ ಜಮೀನಿನ ಮೂಲಕ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಂಚರಿಸಿದ್ದವು. ಆ ಘಟನೆಯ ನೆನಪು ಹಸಿರಾಗಿರುವಾಗಲೇ ಈಗ ಮತ್ತೆ ಹುಲಿ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕವನ್ನು ಇಮ್ಮಡಿಗೊಳಿಸಿದೆ.
ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಾಕಾನೆ ಮೂಲಕ ಐದು ಹುಲಿಗಳನ್ನು ಸೆರೆಹಿಡಿಯಲು ಕೂಬಿಂಗ್ ನಡೆಸಿದ್ದರು ಪ್ರಯೋಜವಾಗಿಲ್ಲ. ಈ ವೇಳೆ ಒಂದು ಗಂಡು ಹುಲಿಯನ್ನು ಸೆರೆಹಿಡಿದು ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಗಿತ್ತು. ಆದರೆ, ಈ ಕಾರ್ಯಾಚರಣೆಯ ನಡುವೆಯೂ ಶುಕ್ರವಾರ ಮುಂಜಾನೆ ಮತ್ತೊಂದು ಹುಲಿ ಪ್ರತ್ಯಕ್ಷವಾಗಿರುವುದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.