×
Ad

ಚಾಮರಾಜನಗರ | ಐದು ಹುಲಿಗಳ ಅಸಹಜ ಸಾವು; ತನಿಖೆಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಆದೇಶ

Update: 2025-06-26 16:10 IST

ಚಾಮರಾಜನಗರ : ಜಿಲ್ಲೆಯಲ್ಲಿ ಒಂದೇ ದಿನ ಐದು ಹುಲಿಗಳ ಮೃತದೇಹ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸವಾಲಾಗಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಗಾಜನೂರು ಬಳಿ ಗುರುವಾರ ಐದು ಹುಲಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ʼರಾಜಕಾರಣಿಗಳ ಹುನ್ನಾರದಿಂದಾಗಿ ಮಲೆ ಮಹದೇಶ್ವರ ವನ್ಯ ಜೀವಿಧಾಮ ಹುಲಿ ಸಂರಕ್ಷಿತ ಪ್ರದೇಶವಾಗದೇ ಇರುವುದು ಹುಲಿಗಳ ಸಾವಿಗೆ ಕಾರಣವಾಗಿದೆʼ ಎಂದು ಪರಿಸರ ಪ್ರೇಮಿಗಳು ಮತ್ತು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತನಿಖೆಗೆ ಆದೇಶ :

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಹುಲಿಗಳು ಅಸಜ ಸಾವಿಗೀಡಾಗಿರುವ ಬಗ್ಗೆ ದುಃಖ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಬಿ ಖಂಡ್ರೆ, ಪಿಸಿಸಿಎಫ್ ನೇತೃತ್ವದ ತಂಡದ ತನಿಖೆಗೆ ಆದೇಶ ನೀಡಿದ್ದಾರೆ.

ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಅರಣ್ಯದಲ್ಲಿ ಹುಲಿಗಳು ಸಾವಿಗೀಡಾಗಿರುವುದನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಅಳಿವಿನಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಮಾಜಿ ಪ್ರಧಾನಿ ಇಂದಿರಾಗಾಂಧೀ ಅವರು ಹುಲಿ ಯೋಜನೆ (ಪ್ರಾಜೆಕ್ಟ್ ಟೈಗರ್) ಆರಂಭಿಸಿದ ತರುವಾಯ ರಾಜ್ಯದಲ್ಲಿಯೂ ಹುಲಿಗಳ ಸಂರಕ್ಷಣೆಗೆ ಕ್ರಮ ವಹಿಸಲಾಗಿದ್ದು, 563 ಹುಲಿಗಳೊಂದಿಗೆ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಹುಲಿ ಸಂರಕ್ಷಣೆಗೆ ಹೆಸರಾಗಿರುವ ರಾಜ್ಯದಲ್ಲಿ, ಒಂದೇ ದಿನ 5 ಹುಲಿಗಳು ಅಸಹಜ ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ ಎಂದು ತಿಳಿಸಿದ್ದಾರೆ.

ಕೂಡಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ, ಸ್ಥಳ ತನಿಖೆ ಕೈಗೊಂಡು, ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಅವರ ವಿರುದ್ಧ ಅಥವಾ ವಿದ್ಯುತ್ ಸ್ಪರ್ಶ, ವಿಷ ಪ್ರಾಷನ ಇತ್ಯಾದಿ ಸಾವಿಗೆ ಕಾರಣವಾಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ಮತ್ತು 3 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News