ಚಾಮರಾಜನಗರ | ಗ್ರಾಪಂ ಕಚೇರಿಯ ಗೋಡೆಗೆ ಡೆತ್ ನೋಟ್ ಅಂಟಿಸಿ ವಾಟರ್ ಮ್ಯಾನ್ ಆತ್ಮಹತ್ಯೆ
ಚಾಮರಾಜನಗರ: ಗ್ರಾಮ ಪಂಚಾಯತ್ ನಲ್ಲಿ ಸಕಾಲಕ್ಕೆ ವೇತನ ನೀಡದೇ ಇರುವುದರಿಂದ ಮನನೊಂದ ಹೊಂಗನೂರು ಗ್ರಾಮ ಪಂಚಾಯತ್ ನ ವಾಟರ್ ಮ್ಯಾನ್ ಪಂಚಾಯತ್ ಗೋಡೆಗೆ ಡೆತ್ ನೋಟ್ ಅಂಟಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಡೆದಿದೆ.
ಹೊಂಗನೂರು ಗ್ರಾಮ ಪಂಚಾಯತ್ ನ ವಾಟರ್ ಮ್ಯಾನ್ ಚಿಕ್ಕೂಸ ನಾಯಕ ಆತ್ಮಹತ್ಯೆ ಮಾಡಿಕೊಂಡವರು. ಇವರು ಕೆಲವು ವರ್ಷಗಳಿಂದ ವಾಟರ್ ಮನ್ ಆಗಿ ಅರೆಕಾಲಿಕ ಕೆಲಸ ಮಾಡಿಕೊಂಡಿದ್ದರು.
ಕೆಲಸಕ್ಕೆ ತಕ್ಕಂತೆ ವೇತನ ಪಾವತಿಸಲು ಹೊಂಗನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಳಂಬ ಮಾಡುತ್ತಿದ್ದರು. ಇತ್ತೀಚೆಗೆ ಆರೋಗ್ಯ ಸಮಸ್ಯೆ ಕಾಡುತ್ತಿರುವುದರಿಂದ ವಾಟರ್ ಮ್ಯಾನ್ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದ ಚಿಕ್ಕೂಸ ನಾಯಕ, ಪಾವತಿಗೆ ಬಾಕಿ ಇರುವ 27 ತಿಂಗಳ ಸಂಬಳ ನೀಡುವಂತೆ ಪಿಡಿಒ ಅವರನ್ನು ಕೇಳಿದ್ದಾರೆ. ಅದರೆ ಅವರು ಸ್ಪಂದಿಸಿಲ್ಲ. ಸಂಬಳ ಪಾವತಿ ಬಗ್ಗೆ ಸಿಇಓಗೆ ಪತ್ರ ಬರೆದರೂ ಪ್ರಯೋಜವಾಗಿಲ್ಲ ಎಂದು ಡೆತ್ ನೋಟ್ ನಲ್ಲಿ ಆಪಾದಿಸಿದ್ದಾರೆ.
ಸರಿಯಾಗಿ ಸಂಬಳ ಸಿಗದಿರುವುದರಿಂ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ಹಲವಾರು ಭಾರಿ ಮನವರಿಕೆ ಮಾಡಿದರೂ ಸಹ ಪಂಚಾಯತ್ ನವರು ಸರಿಯಾಗಿ ವೇತನ ಬಿಡುಗಡೆ ಮಾಡುತ್ತಿರಲಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಚಿಕ್ಕೂಸ ನಾಯಕ ಗ್ರಾಮ ಪಂಚಾಯತ್ ಗೋಡೆಗೆ ಡೆತ್ ನೋಟ್ ಬರೆದು ಅಂಟಿಸಿ, ಅಲ್ಲೇ ಕಿಟಕಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.