ಚಾಮರಾಜನಗರ | ನಾಡಿಗೆ ಬಂದ ಕಾಡಾನೆ: ಮಾರಿಗುಡಿ ಬೀದಿಯಲ್ಲಿ ರಂಪಾಟ
ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ಮಾರಿಗುಡಿ ಬೀದಿಗೆ ಬುಧವಾರ ತಡರಾತ್ರಿ ಕಾಡಾನೆ ಒಂದು ನುಗ್ಗಿ ರಂಪಾಟ ನಡೆಸಿದೆ. ಮನೆ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಾಡಾನೆ ಜಖಂಗೊಳಿಸಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪುರಸಭೆ 5ನೇ ವಾರ್ಡ್‌ನ ಮಾರಿಗುಡಿ ಬೀದಿಯಲ್ಲಿ ಅಚಾನಕ್ ಕಾಣಿಸಿಕೊಂಡ ಕಾಡಾನೆಯನ್ನು ಕಂಡು ನಾಯಿಗಳು ಬೊಗಳಿವೆ. ಇದರಿಂದ ಗಾಬರಿಗೊಂಡ ಕಾಡಾನೆ ಎದುರಿಗೆ ಸಿಕ್ಕ ವಾಹನಗಳನ್ನು ಎತ್ತಿ ಬಿಸಾಡಿದೆ ಎಂದು ತಿಳಿದು ಬಂದಿದೆ.
ಗುರುವಾರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಸಾರ್ವಜನಿಕರ ಓಡಾಟ ಇರಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾಡಾನೆ ಪಟ್ಟಣದ ಸಮೀಪದ ನಿರ್ಜನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಅನುಮಾನವಿದೆ ಎಂದು ಪುರಸಭಾ ಮಾಜಿ ಅಧ್ಯಕ್ಷ ಕಿರಣಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕಾಡಿಗೆ ಹಿಂತಿರುಗಿಸುವಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.