ಚಾಮರಾಜನಗರ | ಸರಕಾರಿ ಬಸ್ - ಲಾರಿ ಮುಖಾಮುಖಿ ಢಿಕ್ಕಿ: ಓರ್ವ ಚಾಲಕ ಮೃತ್ಯು
20 ಪ್ರಯಾಣಿಕರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ
ಚಾಮರಾಜನಗರ: ಕೆಎಸ್ಸಾರ್ಟಿಸಿ ಬಸ್ ಮತ್ತು ಲಾರಿಯೊಂದು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, 20 ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಬೆಂಡರವಾಡಿ ಕೆರೆಯ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಕೆಎಸ್ಸಾರ್ಟಿಸಿ ಬಸ್ ಚಾಲಕ ಇರಸವಾಡಿ ಗ್ರಾಮದ ಮಂಜು (38) ಮೃತಪಟ್ಟವರು. ತೀವ್ರ ಗಾಯಗೊಂಡಿರುವ ಲಾರಿ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಮಂಜು
ರಸ್ತೆ ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಬಸ್ಸಿನಲ್ಲಿದ್ದ ಗಾಯಾಳು ಪ್ರಯಾಣಿಕರನ್ನು ಮತ್ತು ತೀವ್ರ ಗಾಯಗೊಂಡಿದ್ದ ಎರಡು ವಾಹನಗಳ ಚಾಲಕರನ್ನು ಹೊರತೆಗೆದು ಆಂಬುಲೆನ್ಸ್ ಮೂಲಕ ಸಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೆಲ ಗಾಯಾಳುಗಳನ್ನು ಮೈಸೂರಿನ ಆಸ್ಪತ್ರಗೆ ಸಾಗಿಸಲಾಗಿದೆ. ಈ ಪೈಕಿ ಬಸ್ ಚಾಲಕ ಮಂಜು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.
ಅಪಘಾತದಿಂದಾಗಿ ಗಂಟೆಗಟ್ಟಲೆ ರಾಷ್ಟ್ರೀಯ ಹೆದ್ದಾರಿ 150 ಎ'ಯಲ್ಲಿ ಟ್ರಾಫಿಕ್ ಸಮಸ್ಯೆ ಕಾಣಿಸಿಕೊಂಡಿತ್ತು. ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಸಂಚಾರ ಪೊಲೀಸರು ಅಪಘಾತಕ್ಕೀಡಾದ ಬಸ್ ಮತ್ತು ಲಾರಿಯನ್ನು ಸ್ಥಳದಿಂದ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.