ಗುಂಡ್ಲುಪೇಟೆ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಹತ್ಯೆ; ಆರೋಪಿಯ ಬಂಧನ
ಶಿವು
ಚಾಮರಾಜನಗರ : ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯಲ್ಲಿ ಯುವಕನೊಬ್ಬನನ್ನು ದೊಣ್ಣೆ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಗುಂಡ್ಲುಪೇಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದ ಹಳೇ ಆಸ್ಪತ್ರೆಯ ಬೀದಿಯ ನಿವಾಸಿ ಶಿವು (36) ಮೃತ ಯುವಕ. ನಿನ್ನೆ ರಾತ್ರಿ ಮದ್ಯ ತರಲು ತೆರಳಿದ್ದ ವೇಳೆ ಇಬ್ಬರು ಯುವಕರು ಮದ್ದನೇಶ್ವರ ಶಾಲೆಯ ಬಳಿ, ಕ್ಷುಲ್ಲಕ ವಿಷಯಕ್ಕೆ ಜಗಳ ಪ್ರಾರಂಭಿಸಿ ದೊಣ್ಣೆ ಮತ್ತು ಕಲ್ಲಿನಿಂದ ಶಿವು ಮೇಲೆ ಹಲ್ಲೆ ನಡೆಸಿದ್ದು, ಎದೆ, ಮುಖ, ಕಿವಿಗೆ ಪೆಟ್ಟಾಗಿದೆ ಎನ್ನಲಾಗಿದೆ.
ಹಲ್ಲೆಯಾದ ಬಳಿಕ ಮನೆಗೆ ಬಂದು ವಿಷಯ ತಿಳಿಸಿದ್ದ ಶಿವುನನ್ನು ರಾತ್ರಿ 11 ರ ವೇಳೆಗೆ ಪೋಷಕರು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೂಡಲೇ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಾಮರಾಜನಗರ ಸರ್ಕಾರಿ ವೈದ್ಯಕೀಯ ಭೋದನಾ ಆಸ್ಪತ್ರೆಗೆ ಕಳಹಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾದ ಗುಂಡ್ಲುಪೇಟೆ ಪೊಲೀಸರು, ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಿಜಾಮುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.