×
Ad

ಹನೂರು | ಮಗನಿಂದಲೇ ತಂದೆಯ ಹತ್ಯೆ : ಆರೋಪಿಯ ಬಂಧನ

Update: 2025-10-26 16:27 IST

ಆರೋಪಿ ಗೋವಿಂದರಾಜ್/ಶಂಕರನ್ (70)

ಚಾಮರಾಜನಗರ : ತಂದೆಯನ್ನು ಸ್ವಂತ ಮಗನೇ ಆಯುಧದಿಂದ ಗಾಯಗೊಳಿಸಿ ಕಾವೇರಿ ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮಲೆ ಮಹದೇಶ್ವರ ಬೆಟ್ಟದ ತಪ್ಪಲಲ್ಲಿನ ಗೋಪಿನಾಥಂ ಗ್ರಾಮದ ಶಂಕರನ್ (70) ಹತ್ಯೆಯಾದವರು. ಈತನ ಎರಡನೇ ಮಗ ಗೋವಿಂದರಾಜ್ ತಂದೆಯನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದು, ಎರಡು ದಿನಗಳ ಹಿಂದೆ ಶಂಕರನ್ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು.

ಶನಿವಾರ ಸಂಜೆ ಗೋಪಿನಾಥಂ ಸಮೀಪದ ಕಾವೇರಿ ನದಿಯಲ್ಲಿ ಶಂಕರನ್​ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಮೃತನ ಪತ್ನಿ ಪಳನಿಯಮ್ಮ ತಮ್ಮ ಮಗ ಗೊವಿಂದರಾಜು ಅಪ್ಪನನ್ನು ಆಯುಧಗಳಿಂದ ಹೊಡೆದು ಕಾವೇರಿ ನದಿಗೆ ತಳ್ಳಿದ್ದಾನೆ ಎಂದು ದೂರು ಕೊಟ್ಟಿದ್ದರು. ಈ ಹಿನ್ನೆಲೆ ಆತನ ಮಗ ಗೋವಿಂದರಾಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಶಂಕರನ್​ ಮತ್ತು ಗೋವಿಂದರಾಜು ಮೇಕೆ ಸಾಕಿಕೊಂಡಿದ್ದರು. ಮೇಕೆಗಳನ್ನು ಭಾಗ ಮಾಡುವ ವಿಚಾರಕ್ಕೆ ಇವರಿಬ್ಬರ ನಡುವೆ ಜಗಳ ನಡೆದು ವಿಕೋಪಕ್ಕೆ ತಿರುಗಿತ್ತು ಎನ್ನಲಾಗಿದೆ. ಈ ವೇಳೆ ಬಲವಾದ ಆಯುಧದಿಂದ ತಂದೆಯನ್ನು ಗಾಯಗೊಳಿಸಿ ಮಗ ಗೋವಿಂದ ನದಿಗೆ ದೂಡಿದ್ದಾನೆ ಎನ್ನಲಾಗಿದೆ. ಸದ್ಯ, ಮಲೆಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಮಗನನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News