ಕೊಳ್ಳೇಗಾಲ | ಭೂಮಿಯಿಂದ ಹೊರ ಬಂದ ಮನುಷ್ಯನ ಮುಂಗೈ : ವಾಮಾಚಾರ ಶಂಕೆ, ಪೊಲೀಸರಿಂದ ಪರಿಶೀಲನೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಹೊರವಲಯದ ಭೂಮಿಯ ಹಳ್ಳದಲ್ಲಿ ಹುದುಗಿ ಹೋಗಿರುವ ಮನುಷ್ಯನ ಮುಂಗೈ ಮೇಲೆ ಬಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಮೀಪದಲ್ಲೇ ಪೂಜೆಯ ಕೆಲವು ವಸ್ತುಗಳು ಬಿದ್ದಿರುವುದು ವಾಮಾಚಾರ ಶಂಕೆ ಮೂಡಿಸಿದೆ.
ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಹೊಳೆ ನೀರು ಹರಿಯುವ ಹಳ್ಳದ ಹತ್ತಿರದ ಜಾಗದಲ್ಲಿ ಮನುಷ್ಯನ ಬೆರಳುಗಳು ಕಾಣುವಂತೆ ಮುಂಗೈ ಭೂಮಿಯ ಒಳಗಿನಿಂದ ಮೇಲೆ ಬಂದ ಸ್ಥಿತಿಯಲ್ಲಿ ಗುರುವಾರ ಗ್ರಾಮಸ್ಥರಿಗೆ ಕಾಣಿಸಿದೆ. ಈ ವಿಷಯವನ್ನು ತಿಳಿದ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಡಿವೈಎಸ್ಪಿ ಧಮೇಂಂದ್ರ ಮಾತನಾಡಿ, ಭೂಮಿಯಲ್ಲಿ ಮನುಷ್ಯನ ಕೈ ಕಾಣಿಸುವಂತಿದ್ದು, ಸ್ಥಳದಲ್ಲಿ ಮೃತದೇಹವಿದೆ ಎಂದು ಹೇಳಲಾಗುತ್ತಿದೆ. ಸದರಿ ಜಾಗದಲ್ಲಿ ಒಂದು ದೀಪ, ಕುಡಿಯುವ ನೀರಿನ ಬಾಟಲಿ ಇದೆ ಎಂದು ಹೇಳಲಾಗುತ್ತಿದೆ. ಸತ್ತಿರುವವರನ್ನು ಹೂತು ಹಾಕಿದ್ದಾರಾ ಇಲ್ಲಾ ಕಬಿನಿಯಲ್ಲಿ ನೀರು ಬಿಟ್ಟಿರುವುದರಿಂದ ಮಣ್ಣಿಲ್ಲ ಕೊಚ್ಚಿಕೊಂಡು ಹೋಗಿ ಕೈ ಕಾಣಿಸುತ್ತಿರಬಹುದಾ ಅಥವಾ ಕೊಲೆ ಮಾಡಿ ಶವವನ್ನು ತಂದು ಹಾಕಿದ್ದಾರಾ ಎಂಬ ಅನುಮಾನಗಳಿವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.