ಕೊಳ್ಳೇಗಾಲ | ಹೂತಿಟ್ಟ ಮೃತದೇಹದ ಮುಂಗೈ ಹೊರಬಂದ ಪ್ರಕರಣ : ಮೃತ ಮಹಿಳೆಯ ಗುರುತು ಪತ್ತೆ
ಹೂತಿಟ್ಟಿದ್ದ ಮೃತದೇಹದ ಮುಂಗೈ ಹೊರಗೆ ಕಾಣಿಸಿಕೊಂಡಿರುವುದು
ಚಾಮರಾಜನಗರ : ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯತಮನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರ ಬಳಿ ಹೂತಿಟ್ಟ ಮೃತದೇಹದ ಮುಂಗೈ ಹೊರಬಂದ ಪ್ರಕರಣದಲ್ಲಿ ಮಹಿಳೆಯ ಗುರುತು ಪತ್ತೆಯಾಗಿದ್ದು, ಕೊಲೆಗೈದ ಪ್ರಿಯಕರ ಸಿಕ್ಕಿಬಿದ್ದಿದ್ದಾನೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ಹೊಳೆ ದಂಡೆಯಲ್ಲಿ ಗುರುವಾರ ರಾತ್ರಿ ಮೃತದೇಹದ ಮುಂಗೈ ಕಾಣಿಸಿಕೊಂಡಿತ್ತು. ಮೋಳೆ ಗ್ರಾಮದ ಸೋನಾಕ್ಷಿ (29) ಎಂಬಾಕೆಯ ಮೃತದೇಹ ಇದಾಗಿದೆ. ಈಕೆಯನ್ನು ಪ್ರಿಯಕರ ಮಾದೇಶ(35) ಕೊಲೆ ಮಾಡಿ, ಹೂತು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋನಾಕ್ಷಿ ತನ್ನ ಸೋದರ ಮಾವ ವಿಜಯ್ ಕುಮಾರ್ ಎಂಬವರನ್ನು ಮದುವೆಯಾಗಿದ್ದರೂ ಸಂಬಂಧದಲ್ಲಿ ವೈಮನಸ್ಸು ಮೂಡಿ, ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದಳು. ಜೊತೆಗೆ, ಮಾದೇಶನೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದೆ.
ಇದಕ್ಕೂ ಮುನ್ನ, ಜೂನ್ 12ರಂದು ಮನೆ ಬಿಟ್ಟು ಹೋಗಿದ್ದ ಸೋನಾಕ್ಷಿಯನ್ನು ಪೊಲೀಸರು ಸಿಡಿಆರ್ ಮೂಲಕ ಪತ್ತೆ ಹಚ್ಚಿದ್ದರು. ತಾನು ಮತ್ತೆ ಪೊಲೀಸರ ಕೈಗೆ ಸಿಗಲು ಮಾದೇಶನೇ ಕಾರಣ ಎಂದು ಸೋನಾಕ್ಷಿ ಆಕ್ರೋಶ ಹೊರಹಾಕಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಕಲಹ ಉಂಟಾಗಿ, ಕೋಪದಿಂದ ಮಾದೇಶ ಸೋನಾಕ್ಷಿಯ ತಲೆಯನ್ನು ಹಿಡಿದು ಗೋಡೆಗೆ ದೂಕಿ ಕೊಲೆ ಮಾಡಿದ್ದ. ಬಳಿಕ, ಬೈಕ್‌ನಲ್ಲಿ ಮೃತದೇಹ ಸಾಗಿಸಿ ಹಳೇ ಹಂಪಾಪುರದ ನದಿ ದಂಡೆಯಲ್ಲಿ ಹೂತಿದ್ದಾಗಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣ ಬೇಧಿಸಿರುವ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಕೊಲೆ ಮತ್ತು ಸಾಕ್ಷ್ಯನಾಶದ ಆರೋಪದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.