ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ: ನಾಲ್ವರು ಆರೋಪಿಗಳ ಬಂಧನ
ಚಾಮರಾಜನಗರ: ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಸಮೀಪದ ಪಚ್ಚೆದೊಡ್ಡಿ ತಾಂಡದಲ್ಲಿ ಹೆಬ್ಬುಲಿಯೊಂದನ್ನು ಹತ್ಯೆ ಮಾಡಿ ಮೂರು ತುಂಡುಗಳಾಗಿ ಕತ್ತರಿಸಿರುವ ಪ್ರಕರಣ ಅ.2ರಂದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆರೋಪಿಗಳಾದ ಪಚ್ಚೆದೊಡ್ಡಿ ಕಾಚಳ್ಳಿ ಮೂಲದ ಆರೊಪಿಗಳಾದ ಪಚ್ಚೆಮಲ್ಲು, ಗಣೇಶ, ಗೋವಿಂದಗೌಡ, ಶಂಪು ಎಂಬವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಆರೋಪಿಗಳೊಂದಿಗೆ ಅರಣ್ಯಾಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಯ ಬಳಿಕ ಇದೀಗ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶದಂತೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ಶನಿವಾರ ತನಿಖಾ ತಂಡ ಹನೂರಿಗೆ ಆಗಮಿಸಿ, ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಗ್ರಹಿ, ಆರೋಪಿಗಳ ಸುಳಿವು ದೊರೆತ ಕೂಡಲೇ ಅವರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೊಳ್ಳೇಗಾಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೇ ಮಂಜುನಾಥ್ ಮತ್ತು ಕಂಬಣ್ಣ ಎಂಬ ಕುರಿಗಾಹಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ, ಹಸುವಿನ ಮಾಲಕ ಚಂದು ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.