×
Ad

ಎಷ್ಟೆಲ್ಲಾ ಚಾಣಕ್ಯಾಸ್ತ್ರಗಳಿವೆ - ನಮ್ಮ ಸರಕಾರಿ ಕಚೇರಿಗಳಲ್ಲಿ?

Update: 2025-10-25 11:30 IST

ಹುದ್ದೆಯ ದರ್ಜೆಯು ಉನ್ನತವಾಗುತ್ತಾ ಹೋದಂತೆ ಅವುಗಳಲ್ಲಿ ಎಸ್‌ಸಿ/ಎಸ್‌ಟಿಗಳ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವುದಕ್ಕಾಗಿ ಮತ್ತು ಈ ವಿಷಯದಲ್ಲಿ ಮೀಸಲಾತಿಯ ನಿರ್ಬಂಧವನ್ನು ಮೀರಲಿಕ್ಕಾಗಿ ಆ ಉನ್ನತ ಹುದ್ದೆಗಳನ್ನು ದೀರ್ಘಕಾಲ ಖಾಲಿ ಇಡಲಾಗುತ್ತದೆ. ಉನ್ನತ ದರ್ಜೆಯ ಹುದ್ದೆಗಳ ಪೈಕಿ ಅತ್ಯಂತ ಕೆಳದರ್ಜೆಯ ಹುದ್ದೆಗಳಲ್ಲೂ ಎಸ್‌ಸಿ/ಎಸ್‌ಟಿಗಳಿಗೆ ನಿಯಮಪ್ರಕಾರ ಸಿಗಬೇಕಾದ ಪಾಲು ಸಿಗದಂತೆ ನೋಡಿಕೊಳ್ಳಲಾಗಿದೆ. ಸರಕಾರ ಮನಸ್ಸು ಮಾಡಿದರೆ ಈ ಅನ್ಯಾಯ ಮತ್ತು ಅಸಮತೋಲನವನ್ನು ಸುಲಭವಾಗಿ ನಿವಾರಿಸಬಹುದು. ಆದರೆ ಸರಕಾರವೇ ನ್ಯಾಯವನ್ನು, ಸಮತೋಲನವನ್ನು, ನ್ಯಾಯೋಚಿತ ಪ್ರಾತಿನಿಧ್ಯವನ್ನು ಮತ್ತು ದುರ್ಬಲರ ಸಬಲೀಕರಣವನ್ನು ನಿರಾಕರಿಸುವ ಧೋರಣೆಗೆ ಬದ್ಧವಾಗಿರುವಾಗ ಎಲ್ಲ ಅಕ್ರಮಗಳೂ ಸಾಧ್ಯವಾಗಿ ಬಿಡುತ್ತವೆ.

ಭಾಗ - 2

ಮೀಸಲಾತಿಯ ಮೂಲಕ ಸರಕಾರಿ ಉದ್ಯೋಗ ಪಡೆದ ಪೂರನ್ ಕುಮಾರ್‌ರಂತಹ ಸರಕಾರಿ ನೌಕರರನ್ನು ವ್ಯವಸ್ಥೆಯೊಳಗಿನ ಗೂಡಿನೊಳಗೆ ಕಟ್ಟಿಟ್ಟು ಚಿತ್ರ ಹಿಂಸೆ ನೀಡುವುದಕ್ಕೆ ಪ್ರಾಚೀನ ವ್ಯವಸ್ಥೆಯ ಆಧುನಿಕ ವಾರಸುದಾರರು ಹಲವು ದಾರಿಗಳನ್ನು ಕಂಡುಕೊಂಡಿದ್ದಾರೆ. ಆಡಳಿತ ಕ್ಷೇತ್ರದಲ್ಲಿ ಮೀಸಲಾತಿ ಎಂಬುದು ವಂಚಿತ ವರ್ಗಗಳ ಕೈಯಲ್ಲಿರುವ ಏಕೈಕ ಸಾಧನ. ಆದರೆ ಮೀಸಲಾತಿಯ ಫಲಾನುಭವಿಗಳ ಬೆಳವಣಿಗೆಯನ್ನು ನಿಯಂತ್ರಿಸುವುದಕ್ಕೆ, ನಿಜಾರ್ಥದ ಘನತೆ, ಸ್ವಾತಂತ್ರ್ಯ ಮತ್ತು ಸಬಲೀಕರಣ ಇವಾವುದೂ ಅವರ ಕೈಗೆಟುಕದಂತೆ ಮಾಡುವುದಕ್ಕೆ, ವ್ಯವಸ್ಥೆಯನ್ನು ನಿಯಂತ್ರಿಸುವ ಒಳವೃತ್ತವನ್ನು ಪ್ರವೇಶಿಸದಂತೆ ಅವರನ್ನು ತಡೆಯುವುದಕ್ಕೆ ಮತ್ತು ಅಪ್ಪಿತಪ್ಪಿ ಒಳಗೆ ಬಂದವರನ್ನು ಅಲ್ಲಿಂದ ಮತ್ತೆ ಹೊರದಬ್ಬುವುದಕ್ಕೆ ನ್ಯಾಯ ಮತ್ತು ಸಮಾನತೆಗಳ ಪ್ರಾಚೀನ ಶತ್ರುಗಳ ಕೈಯಲ್ಲಿ ಸಾವಿರ ಅಸ್ತ್ರಗಳಿವೆ. ಅವರ ಇತ್ತೀಚಿನ ಪೀಳಿಗೆಯವರು, ವಂಚಿತ ವರ್ಗಗಳನ್ನು ಶಾಶ್ವತವಾಗಿ ದಾಸ್ಯದಲ್ಲಿಡುವುದಕ್ಕಾಗಿ ತಮ್ಮ ಪೂರ್ವಜರು ರಚಿಸಿಟ್ಟಿದ್ದ ಹಳೆಯ ವ್ಯೆಹಗಳನ್ನು ಬಹಳ ನಾಜೂಕಾಗಿ ಆಧುನೀಕರಿಸಿದ್ದಾರೆ. ಉದಾಹರಣೆಗೆ:

ಮೀಸಲಾತಿ ಎಂಬ ಕಲ್ಪನೆಯನ್ನೇ ಅತ್ಯುಗ್ರವಾಗಿ ವಿರೋಧಿಸಿ ಅದರ ವಿರುದ್ಧ ಸತತ ಹಾಗೂ ವ್ಯಾಪಕ ಅಪಪ್ರಚಾರ ನಡೆಸುವುದು, ದೇಶದಲ್ಲಿ ಕಾಣಿಸುವ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಶಿಸ್ತು ಮತ್ತು ದಕ್ಷತೆಯ ಕೊರತೆ ಇತ್ಯಾದಿ ಎಲ್ಲ ವ್ಯಾಧಿಗಳಿಗೆ ಮೀಸಲಾತಿ ಮತ್ತು ಮೀಸಲಾತಿಯ ಮೂಲಕ ಸರಕಾರಿ ಉದ್ಯೋಗ ಪಡೆದವರೇ ಕಾರಣ ಎಂದು ದೂರುವುದು, ಮೀಸಲಾತಿಯ ಮೇಲಿರುವ ಶೇ. 50 ಎಂಬ ಅಕ್ರಮ ಮಿತಿಯನ್ನು ಮತ್ತಷ್ಟು ಸಂಕುಚಿತಗೊಳಿಸಲು ಹೆಣಗುವುದು, ಒಂದುಕಡೆ ವಂಚಿತ ವರ್ಗಗಳ ರಕ್ಷಣೆಗೆಂದೇ ಪರಿಚಯಿಸಲಾದ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಇನ್ನೊಂದು ಕಡೆ ಮೇಲ್ಜಾತಿಯವರಿಗಾಗಿ ಮೀಸಲಾತಿಯೊಳಗೆ EWSನಂತಹ ಸುರಂಗಗಳನ್ನು ನಿರ್ಮಿಸಿ ಆ ಮೂಲಕ ಮೀಸಲಾತಿಯ ಮೂಲ ಉದ್ದೇಶವನ್ನೇ ಸೋಲಿಸುವುದು, ಪರೀಕ್ಷೆ ಪಾಸಾದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಹಂತದಲ್ಲಿ ಹೊರದಬ್ಬುವುದು, NFS ಥರದ ಅಧಿಕೃತ ಕುಂಟುನೆಪಗಳನ್ನು ಬಳಸಿ ಲಕ್ಷಾಂತರ ಮೀಸಲು ಹುದ್ದೆಗಳನ್ನು ಭರ್ತಿ ಮಾಡದೆ ವರ್ಷಗಟ್ಟಲೆ ಖಾಲಿ ಇಡುವುದು, ನೇಮಕಾತಿಯ ಬಳಿಕ ಭಡ್ತಿ ಮುಂತಾದ ಮುಂದಿನ ವಿವಿಧ ಹಂತದಲ್ಲಿ ಅಡೆತಡೆಗಳನ್ನು ಒಡ್ಡುವುದು, ಮೀಸಲಾತಿಯ ಫಲಾನುಭವಿಗಳನ್ನು ಶಾಶ್ವತ ಕೀಳರಿಮೆಗೆ ತಳ್ಳುವುದು.

ಇದು ಪ್ರಸ್ತುತ ನ್ಯಾಯ ನಿರೋಧಕ ವ್ಯೆಹದ ಒಂದು ಆಯಾಮ ಮಾತ್ರ. ಅದರ ಇನ್ನೊಂದು ಆಯಾಮವು ಮತ್ತಷ್ಟು ಕರಾಳವಾಗಿದೆ. ಉದಾ:

ಮೀಸಲಾತಿಯ ಮೂಲಕ ಉದ್ಯೋಗ ಪಡೆದವರ ಮೇಲೆ ಅಘೋಷಿತ ಬಹಿಷ್ಕಾರ ಹೇರುವುದು, ಇದು ನಿಮ್ಮ ಕ್ಷೇತ್ರವೇ ಅಲ್ಲ ಎಂದು ಅವರಿಗೆ ಪದೇಪದೇ ನೆನಪಿಸುತ್ತಿರುವುದು, ನಾವು ಪ್ರತಿಭಾವಂತರು - ನೀವು ಕೇವಲ ಸರಕಾರದ ಕೃಪೆಯಿಂದ ಬಂದ ದಡ್ಡರೆಂದು ಹಂಗಿಸುವುದು, ಅವಕಾಶ ಸಿಕ್ಕಾಗಲೆಲ್ಲ ಸಾರ್ವಜನಿಕರ ಮುಂದೆ ಅಪಮಾನಿಸುವುದು, ಅಪರಾಧಪ್ರಜ್ಞೆ ಬೆಳೆಸುವುದು, ಪ್ರತ್ಯೇಕತೆ ಪಾಲಿಸುವುದು, ಮೇಲ್ಜಾತಿಯ ಕಿರಿಯ ಅಧಿಕಾರಿಗಳು ವಂಚಿತ ವರ್ಗಗಳಿಗೆ ಸೇರಿದ ಹಿರಿಯ ಅಧಿಕಾರಿಗಳ ಜೊತೆ ತಾತ್ಸಾರದಿಂದ ಮಾತನಾಡುವುದು, ಪರೋಕ್ಷ ಭಾಷೆಯಲ್ಲಿ ಪೌರಾಣಿಕ ಹೆಸರುಗಳನ್ನು ಬಳಸಿ ಜಾತಿ ಮತ್ತು ಜನ್ಮವನ್ನು ಅಪಹಾಸ್ಯ ಮಾಡುವುದು, ಮೌಲ್ಯಮಾಪನ, ಶ್ರೇಣಿ ನಿರ್ಧಾರ, ದಕ್ಷತೆಯ ಕುರಿತಾದ ವರದಿ, ಶಿಫಾರಸು ಇತ್ಯಾದಿ ಹಂತಗಳಲ್ಲಿ ಪಕ್ಷಪಾತ ಮೆರೆದು ಬೆಳವಣಿಗೆಯ ಅವಕಾಶಗಳನ್ನು ಮೊಟಕುಗೊಳಿಸುವುದು, ರಜೆ ನಿರಾಕರಿಸುವುದು, ಶಿಸ್ತುಕ್ರಮದ ನಿಯಮಗಳನ್ನು ದುರುಪಯೋಗಿಸುವುದು, ಮೇಲಧಿಕಾರಿಗಳು ತಮ್ಮ ಅಧೀನವಿರುವ ಅಧಿಕಾರಗಳ ದಕ್ಷತೆ ಹಾಗೂ ಸಾಮರ್ಥ್ಯದ ಕುರಿತು ಪ್ರತಿಕೂಲ ವರದಿ ನೀಡುವುದು, ಸಣ್ಣ ಸಣ್ಣ ತಪ್ಪುಗಳಿಗಾಗಿ ದೊಡ್ಡದೊಡ್ಡ ನೋಟಿಸ್‌ಗಳನ್ನು ಜಾರಿಗೊಳಿಸುವುದು, ವಿವಿಧ ರೀತಿಯ ಬೆದರಿಕೆ, ಒತ್ತಡಗಳನ್ನು ಹೇರಿ ಮಾನಸಿಕ ಕಿರುಕುಳ ನೀಡುವುದು ಇತ್ಯಾದಿ.

ಸರಕಾರದಲ್ಲಿ ಲಭ್ಯವಿರುವ ಹುದ್ದೆಗಳನ್ನು ವಂಚಿತ ವರ್ಗಗಳ ಪಾಲಿಗೆ ಅಲಭ್ಯಗೊಳಿಸುವ ವ್ಯವಸ್ಥಿತ ಕುತಂತ್ರ ಈಗಾಗಲೇ ಹಲವರ ಗಮನ ಸೆಳೆದಿದೆ. ಸಂಸತ್ತಿನಲ್ಲಿ, ಬಿಜೆಪಿ ಸಂಸದ ಕಿರಿಟ್ ಪ್ರೇಮ್‌ಜಿಭಾಯಿ ಸೋಲಂಕಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ 30 ಸಂಸದ್ ಸದಸ್ಯರನ್ನೊಳಗೊಂಡ ಒಂದು ಸಮಿತಿಯು 2023ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಆಡಳಿತ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್‌ಸಿ ಮತ್ತು ಎಸ್‌ಟಿ)ಗಳ ಪ್ರಾತಿನಿಧ್ಯವು ಎಷ್ಟು ಕಳವಳಕಾರಿ ಮಟ್ಟದಲ್ಲಿ ಕಡಿಮೆ ಇದೆ ಎಂಬ ಬಗ್ಗೆ ಪ್ರಸ್ತುತ ವರದಿಯಿಂದ ಸಿಕ್ಕಿದ ಮಾಹಿತಿಯು ಆಘಾತಕಾರಿಯಾಗಿದೆ. ಸಮಿತಿಯು ಕೇಂದ್ರ ಸರಕಾರದ 79 ವಿಭಿನ್ನ ಸಚಿವಾಲಯಗಳಲ್ಲಿ ನಿರ್ದೇಶಕ ಮತ್ತು ಅದಕ್ಕಿಂತ ಉನ್ನತ ದರ್ಜೆಯ 928 ಹುದ್ದೆಗಳ ಸಮೀಕ್ಷೆ ನಡೆಸಿತು. ಈ ವೇಳೆ ಸಮಿತಿಯು ಗಮನಿಸಿದ್ದೇನೆಂದರೆ, ನಿಯಮ ಪ್ರಕಾರ ಆ ಹುದ್ದೆಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜಾತಿಗಳಿಗೆ ಸೇರಿದ 208 ಮಂದಿ ಅಧಿಕಾರಿಗಳು ಇರಬೇಕಿತ್ತು. ಆದರೆ ನಿಜವಾಗಿ ಕೇವಲ 120 ಮಂದಿ ಮಾತ್ರ ಇದ್ದರು.

ಕೇಂದ್ರ ಸರಕಾರದ ಆಡಳಿತ ಹುದ್ದೆಗಳಲ್ಲಿ ಎಸ್‌ಸಿಗಳಿಗೆ ಶೇ. 15 ಮತ್ತು ಎಸ್‌ಟಿಗಳಿಗೆ ಶೇ. 7.5 -ಹೀಗೆ ಎಸ್‌ಸಿ/ಎಸ್‌ಟಿಗಳಿಗೆ ಒಟ್ಟು ಶೇ. 22.5 ಮೀಸಲಾತಿ ಇದೆ. ಆದರೆ ನೆಲಮಟ್ಟದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಹುದ್ದೆಗಳ ದರ್ಜೆ ಮೇಲೇರುತ್ತಾ ಹೋದಂತೆ ಅಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ಪ್ರಾತಿನಿಧ್ಯವು ಕುಸಿಯುತ್ತಾ ಹೋಗುತ್ತದೆ. 87 ಕಾರ್ಯದರ್ಶಿ ಹುದ್ದೆಗಳ ಪೈಕಿ ಕೇವಲ 4 ಹುದ್ದೆಗಳನ್ನು (ಶೇ. 4.8) ಮಾತ್ರ ಎಸ್‌ಸಿ/ಎಸ್‌ಟಿಗಳಿಗೆ ನೀಡಲಾಗಿದೆ. ಅವರ ಶೇ. 22.5 ಮೀಸಲಾತಿ ಹಕ್ಕಿಗೆ ಹೋಲಿಸಿದರೆ ಇದು ಕಾಲುಭಾಗಕ್ಕಿಂತಲೂ ತುಂಬಾ ಕಡಿಮೆ. ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿ ಜಾತಿಗಳಿಗೆ ಸೇರಿದ 90 ಅಧಿಕಾರಿಗಳಿರಬೇಕಿತ್ತು - ಆದರೆ ಇರುವುದು ಕೇವಲ 12 ಮಂದಿ ಮಾತ್ರ. ಸಹಕಾರ್ಯದರ್ಶಿ ಹುದ್ದೆಗಳಲ್ಲಿ ನಿಯಮಪ್ರಕಾರ ಎಸ್‌ಸಿ/ಎಸ್‌ಟಿಗಳಿಗೆ ಸೇರಿದ 242 ಅಧಿಕಾರಿಗಳಿರಬೇಕಿತ್ತು- ಆದರೆ ಇರುವುದು ಕೇವಲ 25 ಮಂದಿ ಮಾತ್ರ. ಉಪಕಾರ್ಯದರ್ಶಿ/ ಉಪನಿರ್ದೇಶಕ ಸ್ಥಾನಗಳಲ್ಲಿ ಹುದ್ದೆಗಳಲ್ಲಿ 509 ಹುದ್ದೆಗಳಿದ್ದು ಅವುಗಳಲ್ಲಿ 79 ಹುದ್ದೆಗಳನ್ನು ಮಾತ್ರ (ಶೇ. 15.52) ಎಸ್‌ಸಿ/ಎಸ್‌ಟಿಗಳಿಗೆ ನೀಡಲಾಗಿದೆ.

ಈ ರೀತಿ ಹುದ್ದೆಯ ದರ್ಜೆಯು ಉನ್ನತವಾಗುತ್ತಾ ಹೋದಂತೆ ಅವುಗಳಲ್ಲಿ ಎಸ್‌ಸಿ/ಎಸ್‌ಟಿಗಳ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವುದಕ್ಕಾಗಿ ಮತ್ತು ಈ ವಿಷಯದಲ್ಲಿ ಮೀಸಲಾತಿಯ ನಿರ್ಬಂಧವನ್ನು ಮೀರಲಿಕ್ಕಾಗಿ ಆ ಉನ್ನತ ಹುದ್ದೆಗಳನ್ನು ದೀರ್ಘಕಾಲ ಖಾಲಿ ಇಡಲಾಗುತ್ತದೆ. ಉನ್ನತ ದರ್ಜೆಯ ಹುದ್ದೆಗಳ ಪೈಕಿ ಅತ್ಯಂತ ಕೆಳದರ್ಜೆಯ ಹುದ್ದೆಗಳಲ್ಲೂ ಎಸ್‌ಸಿ/ಎಸ್‌ಟಿಗಳಿಗೆ ನಿಯಮಪ್ರಕಾರ ಸಿಗಬೇಕಾದ ಪಾಲು ಸಿಗದಂತೆ ನೋಡಿಕೊಳ್ಳಲಾಗಿದೆ. ಸರಕಾರ ಮನಸ್ಸು ಮಾಡಿದರೆ ಈ ಅನ್ಯಾಯ ಮತ್ತು ಅಸಮತೋಲನವನ್ನು ಸುಲಭವಾಗಿ ನಿವಾರಿಸ ಬಹುದು. ಆದರೆ ಸರಕಾರವೇ ನ್ಯಾಯವನ್ನು, ಸಮತೋಲನವನ್ನು, ನ್ಯಾಯೋಚಿತ ಪ್ರಾತಿನಿಧ್ಯವನ್ನು ಮತ್ತು ದುರ್ಬಲರ ಸಬಲೀಕರಣವನ್ನು ನಿರಾಕರಿಸುವ ಧೋರಣೆಗೆ ಬದ್ಧವಾಗಿರುವಾಗ ಎಲ್ಲ ಅಕ್ರಮಗಳೂ ಸಾಧ್ಯವಾಗಿ ಬಿಡುತ್ತವೆ.

ಕಳೆದ ಜುಲೈ ತಿಂಗಳಲ್ಲಿ, ದೇಶದ ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಕಾಂತ ಮಜುಮ್ದಾರ್ ಅವರು ಸಂಸತ್ತಿನಲ್ಲಿ ಒದಗಿಸಿದ ಲಿಖಿತ ಉತ್ತರವೊಂದರಲ್ಲಿ ಈ ಕೆಳಗಿನ ಮಹತ್ವದ ಮಾಹಿತಿಗಳಿದ್ದವು:

ಪ್ರೊಫೆಸರ್ ಹುದ್ದೆಯಲ್ಲಿ ‘ಪರಿಶಿಷ್ಟ ಜಾತಿ’ಗಳಿಗಾಗಿ ಮೀಸಲಾಗಿರುವ 308 ಸ್ಥಾನಗಳ ಪೈಕಿ 111 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಪ್ರೊಫೆಸರ್ ಹುದ್ದೆಯಲ್ಲಿ ‘ಪರಿಶಿಷ್ಟ ಪಂಗಡ’ಗಳಿಗಾಗಿ ಮೀಸಲಾಗಿರುವ 144 ಸ್ಥಾನಗಳ ಪೈಕಿ 24 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಪ್ರೊಫೆಸರ್ ಹುದ್ದೆಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಮೀಸಲಾಗಿರುವ 423 ಸ್ಥಾನಗಳ ಪೈಕಿ 84 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ಪರಿಶಿಷ್ಟ ಜಾತಿಗಳಿಗಾಗಿ ಮೀಸಲಾಗಿರುವ 632 ಸ್ಥಾನಗಳ ಪೈಕಿ 308 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾಗಿರುವ 307 ಸ್ಥಾನಗಳ ಪೈಕಿ 108 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಅಸೋಸಿಯೇಟ್ ಪ್ರೊಫೆಸರ್ ಹುದ್ದೆಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಮೀಸಲಾಗಿರುವ 883 ಸ್ಥಾನಗಳ ಪೈಕಿ 275 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಲ್ಲಿ ಪರಿಶಿಷ್ಟ ಜಾತಿಗಳಿಗಾಗಿ ಮೀಸಲಾಗಿರುವ 1,370 ಸ್ಥಾನಗಳ ಪೈಕಿ 1,180 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಲ್ಲಿ ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಾಗಿರುವ 704 ಸ್ಥಾನಗಳ ಪೈಕಿ 595 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಮೀಸಲಾಗಿರುವ 2,382 ಸ್ಥಾನಗಳ ಪೈಕಿ 1,838 ಸ್ಥಾನಗಳು ಮಾತ್ರ ಭರ್ತಿಯಾಗಿವೆ.

ಪ್ರಸ್ತುತ ಮಾಹಿತಿಯನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಈ ರೀತಿ ವಿಶ್ಲೇಷಿಸಿದ್ದಾರೆ:

‘‘ಪ್ರೊಫೆಸರ್ ದರ್ಜೆಯ ಹುದ್ದೆಗಳಲ್ಲಿ, ಜನರಲ್ ಕೆಟಗರಿಗೆ ಸೇರಿದ ಶೇ. 39 ಹುದ್ದೆಗಳು ಖಾಲಿ ಇವೆ. ಅದೇ ವೇಳೆ, ಪ್ರಸ್ತುತ ದರ್ಜೆಯಲ್ಲಿ ಮೀಸಲಾತಿಯ ನಿಯಮಾನುಸಾರ ಹಿಂದುಳಿದ ವರ್ಗಗಳಿಗೆ ಸಿಗಬೇಕಾಗಿದ್ದ ಶೇ. 80 ಹುದ್ದೆಗಳನ್ನು, ಪರಿಶಿಷ್ಟ ಪಂಗಡಗಳಿಗೆ ಸಿಗಬೇಕಾಗಿದ್ದ ಶೇ. 83 ಹುದ್ದೆಗಳನ್ನು ಮತ್ತು ಪರಿಶಿಷ್ಟ ಜಾತಿಗಳಿಗೆ ಸಿಗಬೇಕಾಗಿದ್ದ ಶೇ. 64 ಹುದ್ದೆಗಳನ್ನು ಖಾಲಿ ಇಡಲಾಗಿದೆ. ಅಸೋಸಿಯೇಟ್ ಪ್ರೊಫೆಸರ್ ದರ್ಜೆಯಲ್ಲಿ ಜನರಲ್ ಕೆಟಗರಿಗೆ ಸೇರಿದ ಶೇ. 16 ಹುದ್ದೆಗಳು ಖಾಲಿ ಇವೆ. ಅದೇ ವೇಳೆ, ಪ್ರಸ್ತುತ ದರ್ಜೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಶೇ. 69 ಹುದ್ದೆಗಳು, ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಶೇ. 65 ಹುದ್ದೆಗಳು ಮತ್ತು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಶೇ. 51 ಹುದ್ದೆಗಳನ್ನು ಖಾಲಿ ಇಡಲಾಗಿದೆ. ಅಸಿಸ್ಟೆಂಟ್ ಪ್ರೊಫೆಸರ್ ದರ್ಜೆಯಲ್ಲಿ ಜನರಲ್ ಕೆಟಗರಿಗೆ ಸೇರಿದ ಕೇವಲ ಶೇ. 8 ಹುದ್ದೆಗಳು ಮಾತ್ರ ಖಾಲಿ ಇವೆ. ಅದೇ ವೇಳೆ, ಪ್ರಸ್ತುತ ದರ್ಜೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಶೇ. 23 ಹುದ್ದೆಗಳು, ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿರುವ ಶೇ. 15 ಹುದ್ದೆಗಳು ಮತ್ತು ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಶೇ. 14 ಹುದ್ದೆಗಳನ್ನು ಖಾಲಿ ಇಡಲಾಗಿದೆ.’’

ಸಚಿವ ಮಜುಮ್ದಾರ್ ಒದಗಿಸಿದ ಮಾಹಿತಿ ಮತ್ತು ಜೈರಾಂ ರಮೇಶ್ ಅವರ ವಿಶ್ಲೇಷಣೆ, ಎರಡರಲ್ಲೂ ಎದ್ದುಕಾಣುವ ಒಂದು ಕಹಿಸತ್ಯವೇನೆಂದರೆ, ದರ್ಜೆ ಮೇಲೆ ಹೋದಂತೆಲ್ಲಾ, ‘ಖಾಲಿ’ಯಾಗಿ ಉಳಿಯುವ ಮೀಸಲು ಹುದ್ದೆಗಳ ಅನುಪಾತ ಹೆಚ್ಚುತ್ತಾ ಹೋಗುತ್ತದೆ. ಅಂದರೆ ಯಾವುದೂ ಆಕಸ್ಮಿಕವಾಗಿ ನಡೆದಿಲ್ಲ. ಹಿಂದುಳಿದವರನ್ನು ಮತ್ತು ಎಸ್‌ಸಿ/ಎಸ್‌ಟಿಗಳನ್ನು ಅವರಿಗೆ ನ್ಯಾಯೋಚಿತವಾಗಿ ಸಿಗಬೇಕಾಗಿದ್ದ ಉನ್ನತ ಹುದ್ದೆಗಳಿಂದ ದೂರ ಇಡುವ ಸಂಚು ಬಹಳ ವ್ಯವಸ್ಥಿತವಾಗಿಯೇ ನಡೆದಿದೆ.

ಕಳೆದ ವರ್ಷ ಆರ್‌ಟಿಐ ಮೂಲಕ ದೊರೆತ ಮಾಹಿತಿ ಪ್ರಕಾರ ದೇಶದ 46 ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗಾಗಿ ಮಂಜೂರಾಗಿರುವ, 18,940 ಶಿಕ್ಷಕ ಹುದ್ದೆಗಳ ಪೈಕಿ ಶೇ. 27 ಹುದ್ದೆಗಳು ಖಾಲಿ ಇವೆ. ಹಾಗೆಯೇ 35,640 ಶಿಕ್ಷಕೇತರ ಹುದ್ದೆಗಳು ಮಂಜೂರಾಗಿದ್ದು, ಆ ಪೈಕಿ ಶೇ. 47 ಹುದ್ದೆಗಳು ಖಾಲಿ ಇವೆ. ಖಾಲಿ ಇಡಲಾಗಿರುವ ಹುದ್ದೆಗಳ ಪೈಕಿ ಶೇ. 38ಕ್ಕಿಂತ ಹೆಚ್ಚಿನ ಹುದ್ದೆಗಳು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾಗಿರುವ ಹುದ್ದೆಗಳಾಗಿವೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮೀಸಲಾಗಿರುವ ಹುದ್ದೆಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಲಿ ಇಟ್ಟಿರುವುದೇಕೆ? ಎಂದು ಸರಕಾರವನ್ನು ಪ್ರಶ್ನಿಸಿದಾಗಲೆಲ್ಲ NFS (Not Found Suitable) ಎಂಬ ಸಿದ್ಧ ಉತ್ತರ ಸಿಗುತ್ತದೆ. ಅಂದರೆ ಪ್ರಸ್ತುತ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಸಿಕ್ಕಿಲ್ಲ! ಪ್ರಸ್ತುತ ಎಲ್ಲ ಹುದ್ದೆಗಳಿಗಾಗಿ ನೂರಾರು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳು ಬಂದಿರುತ್ತವೆ. ಆ ಪೈಕಿ, ಆಯ್ದ ಅಭ್ಯರ್ಥಿಗಳ ಸಂದರ್ಶನವೂ ನಡೆದಿರುತ್ತದೆ. ಆದರೆ ವಿಧಿ ನಿರ್ಧರಿಸುವ ಅಧಿಕಾರಿಗಳಿಗೆ ಎಸ್‌ಸಿ, ಎಸ್‌ಟಿ ಅಥವಾ ಒಬಿಸಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ‘ಸೂಕ್ತ’ರಾಗಿ ಕಂಡಿಲ್ಲ. ಅವರ ಜನ್ಮವನ್ನೇ ‘ಸೂತಕ’ವಾಗಿ ಕಾಣುವವರಿಗೆ ಅವರು ‘ಸೂಕ್ತ’ರಾಗಿ ಕಾಣಿಸಲು ಹೇಗೆ ತಾನೇ ಸಾಧ್ಯ?

ಕೆಲವು ತಿಂಗಳ ಹಿಂದಷ್ಟೇ ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕಾಗಿರುವ ಸಂಸದೀಯ ಸಮಿತಿಯು ಈ ಕುರಿತು ಮಾತನಾಡಿತ್ತು. ಬಿಜೆಪಿಯ ಹಿರಿಯ ಸಂಸದ ಫಗ್ಗನ್ ಸಿಂಗ್ ಕುಲಸ್ತೆ ಅವರ ನೇತೃತ್ವದ, 30 ಮಂದಿ ಸಂಸದರನ್ನೊಳಗೊಂಡ ಸಮಿತಿಯು ಈ ವಿಷಯದಲ್ಲಿ ಅಧ್ಯಯನ ನಡೆಸಿ ಸಂಸತ್ತಿಗೆ ವರದಿ ಸಲ್ಲಿಸಿತು. ಪ್ರಸ್ತುತ ವರದಿಯಲ್ಲಿ NFS ಎಂಬ ನೆಪವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿರುವುದನ್ನು ಖಂಡಿಸಲಾಗಿದೆ. ವಿಶೇಷವಾಗಿ, ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಲಭ್ಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳನ್ನು NFS ನೆಪದಲ್ಲಿ ಅನರ್ಹರೆಂದು ಸಾರಿದ ಪ್ರಕರಣವನ್ನು ಸಮಿತಿಯು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.

ಹೀಗೆ, NFS ಎಂಬುದು ದಲಿತರು ಮತ್ತು ಹಿಂದುಳಿದವರನ್ನು ವ್ಯವಸ್ಥಿತವಾಗಿ ಸರಕಾರಿ ಹುದ್ದೆಗಳಿಂದ ದೂರ ಇಡುವುದಕ್ಕಾಗಿಯೇ ಬಳಸಲಾಗುವ ಹಳೆಯ ಅದೃಶ್ಯ ಅಸ್ತ್ರವಾಗಿದೆ ಎಂಬುದನ್ನೀಗ ಕಣ್ಣುಳ್ಳವರೆಲ್ಲಾ ಕಾಣುತ್ತಿದ್ದಾರೆ.

ಇಲ್ಲಿ ನೈಜ ಸಮಸ್ಯೆ NFS ಅಲ್ಲ. ಅದನ್ನು ನೆಪವಾಗಿ ಬಳಸಿ ಬಹುಜನರ ಸಬಲೀಕರಣವನ್ನು ತಡೆಯುವ ಮತ್ತು ಮೇಲ್ಜಾತಿಯವರ ಏಕಸ್ವಾಮ್ಯವನ್ನು ಮುಂದುವರಿಸುವ ಹೊಲಸು ಮಾನಸಿಕತೆಯೇ ಮೂಲ ಸಮಸ್ಯೆಯಾಗಿದೆ. ನಾಳೆ ಯಾವುದಾದರೂ ಸರಕಾರವು ಬಹುಜನರ ಒತ್ತಡಕ್ಕೆ ಮಣಿದು NFS ಅನ್ನು ರದ್ದುಗೊಳಿಸಬಹುದು. ಆದರೆ ವ್ಯವಸ್ಥೆಯ ಪ್ರಭುಗಳು ಮತ್ತು ಬ್ಯುರೋಕ್ರಸಿಯಲ್ಲಿರುವ ಅವರ ಪೇದೆಗಳು ಬಹುಜನರನ್ನು ವಂಚಿತ ಸ್ಥಿತಿಯಲ್ಲಿಟ್ಟು ತಮ್ಮ ಪ್ರಾಚೀನ ಏಕಸ್ವಾಮ್ಯವನ್ನು ಮುಂದುವರಿಸುವುದಕ್ಕೆ ಸಾವಿರ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಈಗಾಗಲೇ ವ್ಯಾಪಕವಾಗಿ ನಡೆಯುತ್ತಿರುವ, ಸರಕಾರದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ‘ಔಟ್ ಸೋರ್ಸಿಂಗ್’ (out sourcing) ಎಂಬ ಠಕ್ಕತನ ಅಂತಹ ಸಾವಿರ ದಾರಿಗಳ ಪೈಕಿ ಒಂದು ಮಾತ್ರ.

ಈ ಹಿನ್ನೆಲೆಯಲ್ಲಿ ದೇಶದ ಸಂವೇದನಾಶೀಲ ನಾಗರಿಕರೆಲ್ಲಾ ಕೆಲವು ನಿರ್ಣಾಯಕ ವಿಷಯಗಳನ್ನು ದೊಡ್ಡ ಪ್ರಮಾಣದಲ್ಲಿ ಚರ್ಚೆಗೆತ್ತಿಕೊಳ್ಳಬೇಕು. ಉದಾ:

* ಮೀಸಲಾತಿಯ ಮೇಲೆ ಹೇರಲಾಗಿರುವ ‘ಗರಿಷ್ಠ ಶೇ. 50’ ಎಂಬ ಅಕ್ರಮ ಮಿತಿಯನ್ನು ನಿರ್ಮೂಲ ಮಾಡಿ ಎಲ್ಲ ವಂಚಿತ ವರ್ಗಗಳಿಗೆ, ದೇಶದ ಜನಸಂಖ್ಯೆಯಲ್ಲಿ ಅವರಿಗಿರುವ ಪಾಲಿಗೆ ಅನುಸಾರವಾಗಿ ಆನುಪಾತಿಕ ಪ್ರಾತಿನಿಧ್ಯ ನೀಡುವುದು.

* ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿರುವಂತೆ, ಭಡ್ತಿಯಲ್ಲೂ ಕಡ್ಡಾಯವಾಗಿ ಮೀಸಲಾತಿ ನೀಡುವುದು.

* ಮೀಸಲಾತಿಯ ಫಲಾನುಭವಿ ವರ್ಗಗಳಿಗೆ ಸೇರಿದವರ ನೇಮಕಾತಿ, ಭಡ್ತಿ ಇತ್ಯಾದಿಗಳನ್ನು ನಿರ್ಧರಿಸುವ ಅಧಿಕಾರ ಕೂಡಾ ಅದೇ ವರ್ಗಗಳಿಗೆ ಸೇರಿದ ಅಧಿಕಾರಿಗಳಿಗೆ ನೀಡುವುದು.

* ವಂಚಿತ ವರ್ಗಗಳಿಗೆ ಸೇರಿದ ಅಧಿಕಾರಿಗಳ ಭಡ್ತಿ ಪ್ರಕ್ರಿಯೆಯಲ್ಲಿ ವಿಳಂಬವಾಗದಂತೆ ನೋಡಿಕೊಳ್ಳುವುದು.

* ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿಯ ವೇಳೆ ಮೀಸಲಾತಿಗೆ ಒಳಪಡುವ ಹುದ್ದೆಗಳನ್ನು ಪ್ರಾಶಸ್ತ್ಯದೊಂದಿಗೆ ಮೊದಲು ಭರ್ತಿ ಮಾಡುವುದು ಮತ್ತು ಮೀಸಲಾತಿಗೆ ಒಳಪಡುವ ಯಾವುದೇ ಹುದ್ದೆಯನ್ನು ಅಲ್ಪಕಾಲ ಕೂಡಾ ಖಾಲಿ ಇಡುವುದಕ್ಕೆ ಅವಕಾಶವೇ ಇಲ್ಲದಂತೆ ಮಾಡುವುದು.

* ಮೀಸಲಾತಿಯನ್ನು ಖಾಸಗಿ ಕಾರ್ಪೊರೇಟ್ ಕ್ಷೇತ್ರಕ್ಕೆ ವಿಸ್ತರಿಸುವುದು.

* ಶಿಕ್ಷಣ ಸಂಸ್ಥೆಗಳಿರಲಿ, ಕಚೇರಿಗಳಿರಲಿ ಎಲ್ಲೂ ಯಾವುದೇ ಸ್ವರೂಪದ ಜಾತಿಯಾಧಾರಿತ ಪಕ್ಷಪಾತ, ತಾರತಮ್ಯ, ನಿಂದನೆ, ದೂಷಣೆ ಇತ್ಯಾದಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು.

ಇವೆಲ್ಲಾ ಭಾರತದ ಬಹುಜನ ಸಮಾಜಕ್ಕೆ ಸೇರಿದವರು, ಅವರ ಸಾಮಾಜಿಕ ಕಾರ್ಯಕರ್ತರು, ನಾಯಕರು, ಪಕ್ಷಗಳು ಮತ್ತು ಸಂಘಟನೆಗಳು, ಹಾಗೆಯೇ, ತಾವು ದಲಿತರು ಮತ್ತು ಹಿಂದುಳಿದವರ ಹಿತೈಷಿಗಳೆಂದು ಹೇಳಿಕೊಳ್ಳುವ ಎಲ್ಲ ಪಕ್ಷ, ಸಂಘಟನೆ ಮತ್ತು ಸಮುದಾಯಗಳು ಜೊತೆಗೂಡಿ ಕೈಗೆತ್ತಿಕೊಳ್ಳಬೇಕಾದ ವಿಷಯಗಳು. ದುರ್ಬಲರ ಸಬಲೀಕರಣವನ್ನು ತಡೆಯುವುದಕ್ಕೆ ಬಳಸಲಾಗುವ ಎಲ್ಲ ಒಳದಾರಿ ಮತ್ತು ಕಳ್ಳದಾರಿಗಳನ್ನು ಒಂದೊಂದಾಗಿ, ಸೂಕ್ಷ್ಮವಾಗಿ ಗುರುತಿಸಿ ಅವುಗಳನ್ನು ಸಂಪೂರ್ಣ ಮುಚ್ಚಿಬಿಡುವುದಕ್ಕೆ ದೇಶದ ಎಲ್ಲ ನ್ಯಾಯಪ್ರಿಯರು ತುರ್ತಾಗಿ ರಂಗಕ್ಕಿಳಿಯಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಂಬೂಕ

contributor

Similar News