×
Ad

ಹಿಂದೂಗಳು ಭಾರತದಲ್ಲಿ ಅನುಭವಿಸುತ್ತಿರುವ ಅಮಾನುಷ ದೌರ್ಜನ್ಯಗಳ ಚರ್ಚಾರ್ಹ ಸರಮಾಲೆ

Update: 2026-01-13 10:08 IST

NCRB ಪ್ರಕಾರ, 2023ರಲ್ಲಿ ಭಾರತದೊಳಗೆ ಪರಿಶಿಷ್ಟ ಜಾತಿಗೆ ಸೇರಿದ 1,250 ಮಂದಿ ಹಿಂದೂಗಳ ಹತ್ಯೆ ನಡೆದಿದೆ. 2024 ಡಿಸೆಂಬರ್ 11ರಂದು ಕೇಂದ್ರ ಗೃಹಖಾತೆಯ ರಾಜ್ಯಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ ಪ್ರಕಾರ 2022ರಲ್ಲಿ ದೇಶದೊಳಗೆ ಪರಿಶಿಷ್ಟ ಜಾತಿ (SC)ಗೆ ಸೇರಿದ 954 ಹಿಂದೂಗಳ ಹತ್ಯೆ ನಡೆದಿದೆ. ಅದೇ ವರ್ಷ ದೇಶದಲ್ಲಿ ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ 217 ಮಂದಿ ಹಿಂದೂಗಳ ಹತ್ಯೆ ನಡೆದಿದೆ. ಅಂದರೆ ಭಾರತದಲ್ಲಿ ಒಂದೇ ವರ್ಷದಲ್ಲಿ ಒಟ್ಟು 1,171 ಮಂದಿ ದಲಿತ ಹಿಂದೂಗಳ ಹತ್ಯೆ ನಡೆದಿದೆ. ಈ ಪ್ರಕಾರ ಭಾರತದಲ್ಲಿ ಪ್ರತಿದಿನ ಕನಿಷ್ಠವೆಂದರೂ ಸರಾಸರಿ 3 ಮಂದಿ ದಲಿತ ಹಿಂದೂಗಳ ಹತ್ಯೆ ನಡೆಯುತ್ತಿದೆ.

ಇತ್ತೀಚೆಗೆ ನಮ್ಮ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಅಮಾನುಷ ದೌರ್ಜನ್ಯದ ಹಲವಾರು ಘಟನೆಗಳು ನಡೆದಿವೆ. ಪ್ರಸ್ತುತ ಘನಘೋರ ದುರಂತಗಳ ಹಿನ್ನೆಲೆಯಲ್ಲಿ ಒಂದು ಸ್ವಾಗತಾರ್ಹ ಬೆಳವಣಿಗೆ ಕೂಡಾ ಎದ್ದುಕಂಡಿದೆ. ಅದೇನೆಂದರೆ, ಪ್ರಸ್ತುತ ದೌರ್ಜನ್ಯಗಳ ವಿರುದ್ಧ ನಮ್ಮ ದೇಶದಲ್ಲಿ ಭಾರೀ ಆಕ್ರೋಶ ಪ್ರಕಟವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದಿರುವ ದೌರ್ಜನ್ಯಗಳನ್ನು ಜಾತಿ-ಧರ್ಮ, ಪಕ್ಷ-ಪಂಗಡಗಳ ಭೇದವಿಲ್ಲದೆ ಎಲ್ಲ ಭಾರತೀಯರು ಒಕ್ಕೊರಲಿನಿಂದ, ಬಹಳ ಏರಿದ ಧ್ವನಿಯಲ್ಲಿ ಖಂಡಿಸಿದ್ದಾರೆ. ವಿಶೇಷವಾಗಿ, ಭಾರತೀಯ ಮಾಧ್ಯಮಗಳು ಈ ವಿಷಯದಲ್ಲಿ ತುಂಬಾ ಸಂವೇದನಾಶೀಲತೆಯನ್ನು ಮೆರೆದಿವೆ. ಅಲ್ಲಿ ನಡೆದ ದೌರ್ಜನ್ಯಗಳಿಗೆ ವ್ಯಾಪಕ ಕವರೇಜ್ ಕೊಟ್ಟಿವೆ. ಆ ಕುರಿತು ಬಿಸಿಬಿಸಿ ಚರ್ಚೆ, ಸಂವಾದಗಳನ್ನು ಏರ್ಪಡಿಸಿವೆ.

ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ, ವರ್ಷ 2024-2025ರಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಆಧಾರಿತ ದೌರ್ಜನ್ಯದ 2,442 ಪ್ರಕರಣಗಳು ನಡೆದಿವೆ. ಅದೇ ಪತ್ರಿಕೆಯಲ್ಲಿ ಕಳೆದ ವಾರ (ಜನವರಿ 6) ಬಂದ ಒಂದು ವರದಿಯಲ್ಲಿ ‘‘ಕಳೆದ 24 ಗಂಟೆಗಳಲ್ಲಿ ಬಾಂಗ್ಲಾದೇಶದಲ್ಲಿ ಇಬ್ಬರು ಹಿಂದೂಗಳ ಹತ್ಯೆಯಾಗಿದೆ’’ ಎಂದು ತಿಳಿಸಲಾಗಿತ್ತು. ಅಷ್ಟೇ ಅಲ್ಲ, ‘‘ಕಳೆದ 18 ದಿನಗಳ ಅವಧಿಯಲ್ಲಿ ಅಲ್ಲಿ ಆರು ಮಂದಿ ಹಿಂದೂಗಳ ಹತ್ಯೆ ನಡೆದಿದೆ’’ ಎಂಬ ಹೃದಯ ವಿದ್ರಾವಕ ಮಾಹಿತಿಯೂ ಇತ್ತು. ಅದೇ ದಿನದ ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿ, ‘‘ಕಳೆದ 35 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ 11 ಮಂದಿ ಹಿಂದೂಗಳ ಹತ್ಯೆ ನಡೆದಿದೆ’’ ಎಂಬ ಆಘಾತಕಾರಿ ಮಾಹಿತಿ ಇತ್ತು.

ಇದೆಲ್ಲಾ ಪಕ್ಕದ ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಕಥೆಯಾಯಿತು. ಅಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಹಾಗಾದರೆ ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆಯೇ? ಖಂಡಿತ ಇಲ್ಲ. ಭಾರತದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಕೂಗು ಬಹುಕಾಲದಿಂದ ಕೇಳಿಬರುತ್ತಿದೆ. ವಿಶೇಷವಾಗಿ ಸಂಘ ಪರಿವಾರ ಮತ್ತು ಅದರ ಬೆಂಬಲಿಗರು ಹಲವು ದಶಕಗಳಿಂದ ಪದೇಪದೇ, ಸಿಕ್ಕ ಸಿಕ್ಕ ಎಲ್ಲ ವೇದಿಕೆಗಳಲ್ಲಿ ಈ ಕೂಗನ್ನು ಮೊಳಗಿಸುತ್ತಲೇ ಬಂದಿದ್ದಾರೆ. ಸದಾ ಅಲ್ಪಸಂಖ್ಯಾತರನ್ನು ಓಲೈಸುವುದರಲ್ಲೇ ಮಗ್ನರಾಗಿರುವ ಸೆಕ್ಯುಲರ್ ಮತ್ತು ಎಡಪಂಥೀಯ ಪಕ್ಷಗಳು ಮಾತ್ರ ಅವರ ಈ ಕೂಗನ್ನು ಸತತವಾಗಿ ಕಡೆಗಣಿಸಿವೆ. ಸಾಲದ್ದಕ್ಕೆ ಭಾರತದಲ್ಲಿ ಹಿಂದೂಗಳಿಗೆ ಅಪಾಯವಿದೆ ಎಂಬ ಮಾತಿಗೆ ಯಾವ ಆಧಾರವೂ ಇಲ್ಲ ಎಂದು ಅದನ್ನು ತಳ್ಳಿಹಾಕಿವೆ. ಹಾಗಾದರೆ ನಿಜಕ್ಕೂ ಭಾರತದಲ್ಲಿ ಹಿಂದೂಗಳಿಗೆ ಅಪಾಯವಿಲ್ಲವೇ? ಹಿಂದೂಗಳ ಜೀವಗಳಿಗೆ ಭಾರತದಲ್ಲಿ ಅಪಾಯವಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲವೇ?

ನಿಜವಾಗಿ, ಭಾರತದಲ್ಲಿ ಹಿಂದೂಗಳು ತೀವ್ರ ಸ್ವರೂಪದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಅನೇಕ ಬಗೆಯ ಅಮಾನುಷ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳ ಯಾವ ಕೊರತೆಯೂ ಇಲ್ಲ. ಸಾಕ್ಷಾತ್ ಭಾರತದ ಕೇಂದ್ರ ಸರಕಾರವೇ ಈ ಕುರಿತು ಸಾಕಷ್ಟು ಅಧಿಕೃತ ಪುರಾವೆಗಳನ್ನು ಒದಗಿಸುತ್ತಾ ಬಂದಿದೆ. ಜೊತೆಗೆ, ಅನೇಕ ಸಾಮಾಜಿಕ ಹಾಗೂ ಸ್ವಯಂಸೇವಕ ಸಂಘಟನೆಗಳು ಕೂಡಾ ಈ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಸವಿಸ್ತಾರ ವರದಿಗಳನ್ನು ಪ್ರಕಟಿಸುತ್ತಾ ಬಂದಿವೆ. ಕೆಲವು ಉದಾಹರಣೆಗಳನ್ನು ಗಮನಿಸಿ:

ಭಾರತದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ (NCRB) ಬಿಡುಗಡೆಗೊಳಿಸಿದ ವರದಿಯನುಸಾರ ಭಾರತದಲ್ಲಿ ವರ್ಷ 2023ರಲ್ಲಿ ಪರಿಶಿಷ್ಟ ಜಾತಿ (SC)ಗೆ ಸೇರಿದ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾದ 57,789 ಪ್ರಕರಣಗಳು ಮತ್ತು ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ ಹಿಂದೂಗಳ ಮೇಲೆ ದೌರ್ಜನ್ಯ ಎಸಗಲಾದ 12,960 ಪ್ರಕರಣಗಳು ದಾಖಲಾಗಿವೆ.

NCRB ಪ್ರಕಾರ, 2023ರಲ್ಲಿ ಭಾರತದೊಳಗೆ ಪರಿಶಿಷ್ಟ ಜಾತಿಗೆ ಸೇರಿದ 1,250 ಮಂದಿ ಹಿಂದೂಗಳ ಹತ್ಯೆ ನಡೆದಿದೆ. 2024 ಡಿಸೆಂಬರ್ 11ರಂದು ಕೇಂದ್ರ ಗೃಹಖಾತೆಯ ರಾಜ್ಯಸಚಿವರು ರಾಜ್ಯಸಭೆಯಲ್ಲಿ ತಿಳಿಸಿದ ಪ್ರಕಾರ 2022ರಲ್ಲಿ ದೇಶದೊಳಗೆ ಪರಿಶಿಷ್ಟ ಜಾತಿ (SC)ಗೆ ಸೇರಿದ 954 ಹಿಂದೂಗಳ ಹತ್ಯೆ ನಡೆದಿದೆ. ಅದೇ ವರ್ಷ ದೇಶದಲ್ಲಿ ಪರಿಶಿಷ್ಟ ಪಂಗಡ (ST)ಕ್ಕೆ ಸೇರಿದ 217 ಮಂದಿ ಹಿಂದೂಗಳ ಹತ್ಯೆ ನಡೆದಿದೆ. ಅಂದರೆ ಭಾರತದಲ್ಲಿ ಒಂದೇ ವರ್ಷದಲ್ಲಿ ಒಟ್ಟು 1,171 ಮಂದಿ ದಲಿತ ಹಿಂದೂಗಳ ಹತ್ಯೆ ನಡೆದಿದೆ. ಈ ಪ್ರಕಾರ ಭಾರತದಲ್ಲಿ ಪ್ರತಿದಿನ ಕನಿಷ್ಠವೆಂದರೂ ಸರಾಸರಿ 3 ಮಂದಿ ದಲಿತ ಹಿಂದೂಗಳ ಹತ್ಯೆ ನಡೆಯುತ್ತಿದೆ.

NCRB ಒದಗಿಸಿರುವ ದತ್ತಾಂಶ ಪ್ರಕಾರ, 2020ರಲ್ಲಿ ದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 855 ಮಂದಿ ಹಿಂದೂಗಳ ಹತ್ಯೆ ನಡೆದಿದೆ. ಅದರ ಹಿಂದಿನ ವರ್ಷಗಳಲ್ಲೂ ಪ್ರತಿವರ್ಷ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 800 ರಿಂದ 1,000ದಷ್ಟು ಹಿಂದೂಗಳ ಹತ್ಯೆ ನಡೆದಿದೆ. ಪರಿಶಿಷ್ಟ ಪಂಗಡ (ST)ಗಳಿಗೆ ಸೇರಿದ ಹಿಂದೂಗಳು ಹತರಾಗುವ ವೃತ್ತಾಂತ ಬೇರೆಯೇ ಇದೆ. ಗಮನಾರ್ಹ ಸಂಗತಿ ಏನೆಂದರೆ, ಇವೆಲ್ಲವೂ ಜಾತಿಯ ಕಾರಣಕ್ಕೆ ನಡೆದಿರುವ ಮತ್ತು ‘ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ’ ಅಥವಾ Scheduled Castes and the Scheduled Tribes. (Prevention of Atrocities) Act,, ಅನ್ವಯ ದಾಖಲಾಗಿರುವ, ಹತ್ಯೆ ಪ್ರಕರಣಗಳು. ಉಳಿದಂತೆ, ಆರೋಪಿಗಳು ಹೆಚ್ಚು ಪ್ರಭಾವಶಾಲಿಗಳಾಗಿರುವಾಗ ಮತ್ತು ಪೊಲೀಸರು ಸ್ವತಃ ದಲಿತ ವಿರೋಧಿಗಳಾಗಿರುವಾಗ, ಇಂತಹ ಕೊಲೆ ಪ್ರಕರಣಗಳಲ್ಲಿ ಜಾತಿಗೆ ಯಾವುದೇ ಪಾತ್ರ ಇರಲಿಲ್ಲವೆಂಬ ಸಬೂಬನ್ನು ಮುಂದಿಟ್ಟು, ಜಾತಿಯನ್ನು ಕಡೆಗಣಿಸಿ, ಅಪರಾಧವನ್ನು ಭಾರತೀಯ ದಂಡಸಂಹಿತೆ (IPC)ಯ ಸೆಕ್ಷನ್ 302 ಅನ್ವಯ ಮಾತ್ರ ದಾಖಲಿಸಲಾದ, ದಲಿತ ಹಿಂದೂಗಳ ಹತ್ಯೆಯ ಪ್ರಕರಣಗಳು ಬೇರೆ ಇವೆ. ಅಂತಹ ಪ್ರಕರಣಗಳನ್ನೂ ಸೇರಿಸಿದರೆ 2022ರಲ್ಲಿ ಕೊಲೆಯಾದ ಪರಿಶಿಷ್ಟ ಜಾತಿಗೆ ಸೇರಿದ ಹಿಂದೂಗಳ ಸಂಖ್ಯೆ 1,450ಕ್ಕಿಂತಲೂ ಅಧಿಕವಾಗುತ್ತದೆ.

2022ರಲ್ಲಿ ‘ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ’ದನ್ವಯ 67,000ಕ್ಕಿಂತಲೂ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಈ ರೀತಿ ದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಅಪರಾಧ ಹಾಗೂ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಸಂಸತ್ತಿನಲ್ಲಿ ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿದ್ದರು. 2024 ಡಿಸೆಂಬರ್ 3ರಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಈ ಕುರಿತು ಸ್ಪಷ್ಟೀಕರಣ ನೀಡುತ್ತಾ, ಇತ್ತೀಚೆಗೆ ಜನರಲ್ಲಿ ಜಾಗೃತಿ ಬೆಳೆದಿರುವುದರಿಂದ, ಜನರು ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಕರಣಗಳನ್ನು ಅಧಿಕೃತವಾಗಿ ದಾಖಲಿಸ ತೊಡಗಿದ್ದಾರೆ ಎಂದು ವಿವರಿಸಿದರು.

ಹಿಂದೂ ದಲಿತರ ವಿರುದ್ಧ ಭಾರತದಲ್ಲಿ ನಡೆಯುವ ಅಪರಾಧಗಳು ಹತ್ಯೆಗೆ ಮಾತ್ರ ಸೀಮಿತವಾಗಿರದೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಲೈಂಗಿಕ ಕಿರುಕುಳ, ಹಲ್ಲೆ, ಅಪಮಾನ, ನಿಂದನೆ, ಬಹಿಷ್ಕಾರ ಹೀಗೆ ಹತ್ತು ಹಲವು ಸ್ವರೂಪಗಳಲ್ಲಿರುತ್ತವೆ ಮತ್ತು ಈ ಅಪರಾಧಗಳು ಅಲ್ಲಲ್ಲಿ ಪದೇ ಪದೇ ನಡೆಯುತ್ತಲೇ ಇರುತ್ತವೆ.

NCRB ಮಾಹಿತಿ ಪ್ರಕಾರ 2022ರಲ್ಲಿ ಭಾರತದೊಳಗೆ ಪರಿಶಿಷ್ಟ ಜಾತಿಗಳಿಗೆ ಸೇರಿದ 3,300ಕ್ಕೂ ಹೆಚ್ಚಿನ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಅದೇ ಸಂಸ್ಥೆಯವರು ಬಿಡುಗಡೆಗೊಳಿಸಿರುವ ಮಾಹಿತಿಯನುಸಾರ, 2023ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು 4,000 ಮಹಿಳೆಯರ ಮೇಲೆ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 1,189 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ.

ಮಧ್ಯಪ್ರದೇಶ ವಿಧಾನ ಸಭೆಯಲ್ಲಿ ಒದಗಿಸಲಾದ ಮಾಹಿತಿಯಂತೆ ಕೇವಲ ಆ ಒಂದು ರಾಜ್ಯದಲ್ಲೇ 2022 ಹಾಗೂ 2024ರ ನಡುವೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದ 7,418 ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ 338 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದೇ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 558 ದಲಿತ ಮಹಿಳೆಯರ ಹತ್ಯೆ ನಡೆದಿದೆ. ಅವರಲ್ಲಿ 411 ಮಹಿಳೆಯರು ಬುಡಕಟ್ಟು ಸಮುದಾಯಗಳಿಗೆ ಸೇರಿದವರು. ಪ್ರಸ್ತುತ ಮೂರು ವರ್ಷಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 5,983 (ಸರಾಸರಿ ಪ್ರತಿದಿನ 5 ಮಂದಿ) ದಲಿತ ಮಹಿಳೆಯರು ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಹಿಂದೂಗಳ ದೌರ್ಭಾಗ್ಯ (ಕರ್ಮಫಲ?) ಏನೆಂದರೆ ಅವರ ವಿರುದ್ಧ ನಡೆಯುವ ಘನಘೋರ ಅಪರಾಧಗಳ ಪೈಕಿ ಎಷ್ಟೋ ಅಪರಾಧಗಳು ಅಧಿಕೃತವಾಗಿ ಎಲ್ಲೂ ದಾಖಲಾಗುವುದೇ ಇಲ್ಲ. ದಾಖಲಾದ ಎಷ್ಟೋ ಪ್ರಕರಣಗಳು ಕೋರ್ಟಿನ ಮೆಟ್ಟಿಲ ತನಕ ತಲುಪುವುದಿಲ್ಲ. ಹೇಗಾದರೂ ಮಾಡಿ ಕೋರ್ಟುಗಳ ಒಳಗೆ ಪ್ರವೇಶ ಪಡೆದ ಪ್ರಕರಣಗಳಲ್ಲಿ ಶೇ. 90 ಪ್ರಕರಣಗಳು ಇತ್ಯರ್ಥವಾಗದೇ ಎಂದೆಂದಿಗೂ ‘ಬಾಕಿ’ ಆಗಿಯೇ ಉಳಿದಿರುತ್ತವೆ. ಇನ್ನು ವಿಚಾರಣೆಯ ಸೌಭಾಗ್ಯ ಪಡೆದ ಪ್ರಕರಣಗಳಲ್ಲೂ, ಆರೋಪಿಗಳಿಗೆ ಏನಾದರೂ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚೆಂದರೆ ಸುಮಾರು ಶೇ. 36 ಪ್ರಕರಣಗಳಲ್ಲಿ ಮಾತ್ರ ಇರುತ್ತದೆ. ಶಿಕ್ಷೆಯ ಪ್ರಮಾಣದಲ್ಲಿ ತೋರಲಾಗುವ ಔದಾರ್ಯ, ಬೇರೆಯೇ ಒಂದು ಚರ್ಚಾವಿಷಯ.

2001ರಲ್ಲಿ ಗುಜರಾತ್‌ನ ದಲಿತ ನಾಯಕ ಹಾಗೂ ಮಾನವ ಹಕ್ಕು ಹೋರಾಟಗಾರ ಮಾರ್ಟಿನ್ ಮ್ಯಾಕ್ವಾನ್ ಅವರ ಒಂದು ಹೇಳಿಕೆ ಪ್ರಕಟವಾಗಿತ್ತು:

‘‘ನಾಝಿಗಳ ಕೈಯಲ್ಲಿ ನಡೆದ ಆರು ಕೋಟಿ ಯಹೂದಿಗಳ ಹತ್ಯಾಕಾಂಡದ ನೆನಪು ಒಂದು ದೊಡ್ಡ ಕಳಂಕವಾಗಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ಏಕೆಂದರೆ ಆ ದುರಂತವು ಒಂದು ಸಂಕ್ಷಿಪ್ತ ಅವಧಿಯಲ್ಲಿ ನಡೆದು ಹೋಗಿತ್ತು. ಆದರೆ ನಮ್ಮಲ್ಲಿ ದಲಿತರ ‘ಸಮೂಹ ಹತ್ಯೆ’ಯು ವ್ಯವಸ್ಥೆಯ ಭಾಗವಾಗಿ, ನಿಧಾನಗತಿಯಲ್ಲಿ ನಡೆಯುತ್ತಿದೆ. ದಲಿತರ ವಿರುದ್ಧ ನಡೆಯುವ ಹತ್ಯೆ, ಅತ್ಯಾಚಾರ ಮತ್ತು ಹಲ್ಲೆಯ ಪ್ರಕರಣಗಳ ಕುರಿತು ಇತ್ತೀಚೆಗೆ ಸರಕಾರವು ಒದಗಿಸುತ್ತಿರುವ ಮಾಹಿತಿಗಳನ್ನೇ ಕಳೆದ 3,000 ವರ್ಷಗಳ ಇತಿಹಾಸಕ್ಕೆ ವಿಸ್ತರಿಸಿ ನೋಡಿದರೆ, ಭಾರೀ ಭಯಾನಕ ಚಿತ್ರವೊಂದು ಮೂಡುತ್ತದೆ. ಪ್ರಸ್ತುತ ಅವಧಿಯಲ್ಲಿ ಸುಮಾರು 21,90,000 ದಲಿತರ ಹತ್ಯೆ ನಡೆದಿದೆ, 32,85,000 ಮಂದಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ ಮತ್ತು 7,50,00,000ಕ್ಕಿಂತಲೂ ಹೆಚ್ಚಿನ ದಲಿತರ ಮೇಲೆ ಹಲ್ಲೆಗಳು ನಡೆದಿವೆ ಎಂದು ನಂಬುವುದಕ್ಕೆ ಈ ಮಾಹಿತಿಗಳು ನಮಗೆ ಆಧಾರವನ್ನೊದಗಿಸುತ್ತವೆ.’’

ಈ ಹಿನ್ನೆಲೆಯಲ್ಲಿ, ಬಾಂಗ್ಲಾದೇಶದ ಹಿಂದೂಗಳ ಭದ್ರತೆಯ ಬಗ್ಗೆ ನಾವು ತೋರುತ್ತಿರುವ ಕಾಳಜಿಯ ಒಂದು ಸಣ್ಣ ಭಾಗವನ್ನಾದರೂ ಭಾರತೀಯ ಹಿಂದೂಗಳ ಭದ್ರತೆಯ ಬಗ್ಗೆ ತೋರಲೇಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಂಬೂಕ

contributor

Similar News