×
Ad

ಮಾಹಿತಿಯ ಯುಗದಲ್ಲಿ ಮೌಢ್ಯ ಪ್ರೇರಿತ ನರಬಲಿ!

Update: 2025-10-07 10:22 IST

ವಿವಿಧ ಮೌಢ್ಯಗಳಿಂದ ಹಾಗೂ ಸ್ವಾರ್ಥಗಳಿಂದ ಪ್ರೇರಿತರಾಗಿ, ಮನುಷ್ಯರೇ ಮನುಷ್ಯರನ್ನು ಬಲಿನೀಡುವ ಹಲವಾರು ಘಟನೆಗಳು ನಮ್ಮ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಲೇ ಇವೆ. ಇಂತಹ ಕೃತ್ಯಗಳ ವಿರುದ್ಧ ದೇಶದಲ್ಲಿ ಕಠಿಣ ಕಾನೂನುಗಳಿದ್ದರೂ ಈ ಬಗೆಯ ಕೃತ್ಯಗಳನ್ನು ತಡೆಯಲು ಸಾಧ್ಯವಾಗಿಲ್ಲ. ಸಮಾಜವು ಈ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಚರ್ಚಿಸಿ, ಈ ವಿಷಯದಲ್ಲಿ ವ್ಯಾಪಕ ಜನಜಾಗೃತಿ ಬೆಳೆಸಬೇಕಾದ ಅಗತ್ಯವಿದೆ. ವಿಶೇಷವಾಗಿ ಡೋಂಗಿ ಬಾಬಾಗಳು ಮತ್ತು ಮತ್ತವರ ಶೋಷಣೆಗಳ ಕುರಿತಾಗಿ ಜನರನ್ನು ಎಚ್ಚರಿಸಬೇಕಾಗಿದೆ.

ವಿಶ್ವಗುರು ಭಾರತ ದೇಶದ ಎಲ್ಲ ನಾಗರಿಕರು ತುಂಬಾ ಸಂವೇದನಾತ್ಮಕವಾಗಿ, ನಿತ್ಯ ನೂರು ಬಾರಿ ಚರ್ಚಿಸಬೇಕಾಗಿದ್ದ ಅದೆಷ್ಟೋ ವಿಷಯಗಳಿವೆ. ಅದರೂ ಪುರೋಹಿತರು, ಪುಢಾರಿಗಳು ಮತ್ತು ಕುಬೇರರು ಪ್ರತಿದಿನ ಏರ್ಪಡಿಸುತ್ತಲಿರುವ ರಂಗುರಂಗಿನ ನಿತ್ಯನೂತನ ನಾಟಕಗಳ ತೆರೆಯ ಹಿಂದೆ ಅವೆಲ್ಲಾ ಮರೆಯಾಗಿ ಬಿಡುತ್ತವೆ. ‘ನರಬಲಿ’ ಎಂಬ ಸಮಸ್ಯೆಯನ್ನೇ ನೋಡೋಣ. ಅತ್ಯಾಧುನಿಕ ಭಾರತದಲ್ಲೂ ಅದು ಅಲ್ಲಲ್ಲಿ ವಿವಿಧ ಪ್ರಕಾರಗಳಲ್ಲಿ ಮೆರೆಯುತ್ತಿದೆ.

ಕಳೆದ ತಿಂಗಳಷ್ಟೇ (ಸೆಪ್ಟಂಬರ್), ಉತ್ತರಪ್ರದೇಶದ ಪ್ರಯಾಗ ರಾಜ್‌ನಲ್ಲಿ ನರಬಲಿಯ ಘಟನೆಯೊಂದು ನಡೆಯಿತು. 55ರ ಹರೆಯದ ಮೇಸ್ತ್ರಿಯೊಬ್ಬ ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ. ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ, ಈ ಹಿಂದೆ ಸತ್ತುಹೋಗಿದ್ದ ಕೆಲವು ಬಂಧುಗಳ ಅತೃಪ್ತ ಆತ್ಮಗಳ ಅಥವಾ ಅಲೆಮಾರಿ ಪ್ರೇತಗಳ ಪ್ರಭಾವವೇ ಆ ಸಮಸ್ಯೆಗಳಿಗೆಲ್ಲಾ ಕಾರಣ ಎಂದು ವಾಮಾಚಾರಿಯೊಬ್ಬ ಆತನನ್ನು ನಂಬಿಸಿದ್ದ. ಅದಕ್ಕೆ ನರಬಲಿಯೊಂದೇ ಪರಿಹಾರ ಎಂದೂ ಆತ ನಂಬಿಸಿಬಿಟ್ಟಿದ್ದ. ಹೀಗೆ ನರಬಲಿ ಕೊಡಲೇಬೇಕೆಂದು ನಿರ್ಧರಿಸಿದ ಮೇಸ್ತ್ರಿ, 17ರ ಹರೆಯದ ತನ್ನ ಒಬ್ಬ ಬಂಧುವನ್ನು ಯಾವುದೋ ಕೆಲಸದ ನೆಪದಲ್ಲಿ ತನ್ನ ಮನೆಗೆ ಕರೆಸಿಕೊಂಡ. ಅಲ್ಲಿ ಅವನ ತಲೆಗೆ ಹೊಡೆದು ಮೂರ್ಛೆ ತಪ್ಪಿಸಿದ. ಯಾವುದೋ ನಿಗೂಢ ಶಕ್ತಿಯನ್ನು ಪ್ರಸನ್ನಗೊಳಿಸುವುದಕ್ಕಾಗಿ ಆ ಯುವಕನ ಜೀವವನ್ನು ಬಲಿ ನೀಡಿದ. ಪ್ರಸ್ತುತ ಮೇಸ್ತ್ರಿ ಮತ್ತು ಅವನಿಗೆ ಪ್ರಚೋದನೆ ನೀಡಿದ ವಾಮಾಚಾರಿಯನ್ನು ಬಂಧಿಸಲಾಗಿದೆ.

ಇಂಡಿಯಾ ಟುಡೇ ವರದಿ ಪ್ರಕಾರ, ಕಳೆದ ವರ್ಷ (2024) ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಎರಡನೇ ತರಗತಿಯ ಒಬ್ಬ ವಿದ್ಯಾರ್ಥಿಯನ್ನು ಕತ್ತು ಹಿಸುಕಿ ಕೊಲ್ಲಲ್ಲಾಯಿತು. ಅದು ಸಾಮಾನ್ಯ ಕೊಲೆಯಾಗಿರಲಿಲ್ಲ. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದ ಒಂದು ಶಾಲೆಯ ಮಾಲಕರು, ನರಬಲಿ ನೀಡಿದರೆ ಶಾಲೆಯ ಉದ್ಧಾರವಾಗುತ್ತದೆ ಎಂಬ ನಂಬಿಕೆಯೊಂದಿಗೆ ನೀಡಿದ ನರಬಲಿಯಾಗಿತ್ತು. ಈ ಘಟನೆ ಸೆಪ್ಟಂಬರ್ 22ರಂದು ನಡೆದಿತ್ತು. ಅದಕ್ಕಿಂತ ಮುಂಚೆ ಸೆಪ್ಟಂಬರ್ 6ರಂದು ಅದೇ ಶಾಲೆಯಲ್ಲಿ ಒಬ್ಬ ಹುಡುಗನನ್ನು ಬಲಿ ನೀಡುವ ಪ್ರಯತ್ನ ಕೂಡಾ ನಡೆದಿತ್ತು. ಆದರೆ ಹುಡುಗ ಸಕಾಲದಲ್ಲಿ ತಪ್ಪಿಸಿಕೊಂಡು ಓಡಿದ್ದ. ನರಬಲಿಯ ಪ್ರಕರಣದಲ್ಲಿ ಶಾಲೆಯ ಮಾಲಕ, ಒಬ್ಬ ಮಾಂತ್ರಿಕ ಮತ್ತು ಕೆಲವು ಸಹಾಯಕರನ್ನು ಬಂಧಿಸಲಾಗಿತ್ತು.

1985ರಲ್ಲಿ ಒಡಿಶಾದ ಭುವನೇಶ್ವರ್‌ನಿಂದ 75 ಕಿ.ಮೀ. ದೂರದ ರಾನ್ಪುರ್ ಎಂಬಲ್ಲಿ ಒಂದು ಬೆಟ್ಟದ ತುದಿಯಲ್ಲಿ ಹದಿಹರೆಯದ ಮೂರು ಮಂದಿ ಮಕ್ಕಳ ಶವ ಪತ್ತೆಯಾಯಿತು. ತನಿಖೆಯಿಂದ ತಿಳಿದು ಬಂದಂತೆ, ಆ ಮಕ್ಕಳನ್ನು ಅಪಹರಿಸಿ, ಬೆಟ್ಟದ ತುದಿಗೆ ಕೊಂಡುಹೋಗಿ, ಯಾವುದೋ ದೇವಿಯನ್ನು ಮೆಚ್ಚಿಸುವುದಕ್ಕಾಗಿ ಅವರನ್ನು ಬರ್ಬರವಾಗಿ ಕೊಲ್ಲಲಾಗಿತ್ತು. ಆ ಮಕ್ಕಳ ರುಂಡವನ್ನು ಶರೀರದಿಂದ ಪ್ರತ್ಯೇಕಿಸಿ ಅವರ ರಕ್ತವನ್ನು ದೇವಿಯ ಮೂರ್ತಿಯ ಸುತ್ತ ಸುರಿಯಲಾಗಿತ್ತು.

2015 ಅಕ್ಟೋಬರ್‌ನಲ್ಲಿ ನಮ್ಮ ಮಡಿಕೇರಿಯ ಸಮೀಪದ ಗ್ರಾಮವೊಂದರಲ್ಲಿ, ವಾಮಾಚಾರ ಚಟುವಟಿಕೆಯ ಭಾಗವಾಗಿ ಒಬ್ಬ ಮಹಿಳೆಯನ್ನು ತ್ರಿಶೂಲದಿಂದ ತಿವಿದು ನರಬಲಿ ನೀಡಿದ ದುರಂತ ವರದಿಯಾಗಿತ್ತು. 7 ವರ್ಷಗಳ ಬಳಿಕ ಮಡಿಕೇರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಈ ಸಂಬಂಧ ನಾಲ್ಕು ಮಂದಿಗೆ ಆಜೀವ ಕಾರಾವಾಸದ ಶಿಕ್ಷೆ ವಿಧಿಸಿತ್ತು.

2018 ಮಾರ್ಚ್‌ನಲ್ಲಿ ನಮ್ಮ ಕರ್ನಾಟಕದ ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ಗುಪ್ತ ಖಜಾನೆಯ ಪ್ರಾಪ್ತಿಗಾಗಿ ನರಬಲಿ ನೀಡಲಾದ ಘಟನೆಯೊಂದು ವರದಿಯಾಗಿತ್ತು. ನರಬಲಿ ನೀಡಿದರೆ ನೆಲದಡಿಯಲ್ಲಿ ಹುದುಗಿರುವ ಗುಪ್ತ ಖಜಾನೆ ಸಿಗುತ್ತದೆಂಬ ಆಶೆಯಿಂದ 65 ವರ್ಷ ಪ್ರಾಯದ ಹಿರಿಯ ರೈತನೊಬ್ಬನನ್ನು ಬಲಿನೀಡಿದ ಆರೋಪದಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು.

2019ರಲ್ಲಿ ಗೌಹಾಟಿಯ ಮಂದಿರವೊಂದರ ದರ್ಶನಕ್ಕೆಂದು ಹೋಗಿದ್ದ 64 ವರ್ಷದ ಮಹಿಯೊಬ್ಬರು ಕಣ್ಮರೆಯಾಗಿದ್ದರು. ಕೆಲವು ದಿನಗಳ ಬಳಿಕ ಆಕೆಯ ರುಂಡವಿಲ್ಲದ ಶರೀರ ಪತ್ತೆಯಾಗಿತ್ತು. ಇದೊಂದು ಮೌಢ್ಯಪ್ರೇರಿತ ನರಬಲಿಯ ಪ್ರಕರಣವಾಗಿತ್ತು ಎಂಬುದು 2023ರಲ್ಲಿ ಬಹಿರಂಗವಾಯಿತು. ಒಬ್ಬ ವ್ಯಕ್ತಿ ತನ್ನ ಮೃತ ಸಹೋದರನ ಆತ್ಮಶಾಂತಿಗಾಗಿ ತನ್ನ ಹಲವು ಸ್ನೇಹಿತರ ಜೊತೆ ಸೇರಿ ಈ ಕೃತ್ಯವನ್ನು ಎಸಗಿದ್ದಾನೆಂಬುದು ಮುಂದೆ ತಿಳಿದುಬಂತು. ಅವರಲ್ಲಿ 5 ಮಂದಿಯ ಬಂಧನವೂ ಆಗಿತ್ತು.

2020ರಲ್ಲಿ ಒಡಿಶಾದ ಕಟಕ್ ಜಿಲ್ಲೆಯ ಒಂದು ಮಂದಿರದಲ್ಲಿ ಪುರೋಹಿತನೊಬ್ಬ 52ರ ಹರೆಯದ ಒಬ್ಬ ವ್ಯಕ್ತಿಯನ್ನು ಬಹಳ ಕ್ರೂರ ವಿಧಾನದಿಂದ ಕೊಂದಿದ್ದ. ಮುಂದೆ ಅವನ ಬಂಧನವಾದ ಬಳಿಕ ಪೊಲೀಸರ ಮುಂದೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಹತ್ಯೆಯ ಕಾರಣ ತಿಳಿಸಿದ್ದ. ಈ ರೀತಿ ದೇವರ ಮುಂದೆ ಒಬ್ಬ ಮನುಷ್ಯನ ಬಲಿ ನೀಡಿದರೆ ಕೊರೋನ ವ್ಯಾಧಿಯಿಂದ ಜಗತ್ತಿಗೆ ಮುಕ್ತಿ ಸಿಕ್ಕಿಬಿಡುತ್ತದೆಂದು ಸ್ವಪ್ನದ ಮೂಲಕ ದೇವರಿಂದ ತನಗೆ ಆದೇಶ ಸಿಕ್ಕಿತ್ತು ಎಂದು 72ರ ಹರೆಯದ ಆ ಪುರೋಹಿತನು ಒಪ್ಪಿಕೊಂಡಿದ್ದ.

ಸಾಕ್ಷರತೆಯಲ್ಲಿ ಬಹಳಷ್ಟು ಮುಂದಿರುವ ರಾಜ್ಯ ಕೇರಳದಲ್ಲಿ 2022ರಲ್ಲಿ ನಡೆದ ಘಟನೆಯೊಂದು ದೇಶವನ್ನು ಬೆಚ್ಚಿಬೀಳಿಸಿತ್ತು. 49ರ ಹರೆಯದ ರೋಸ್ಲಿ ಮತ್ತು 52ರ ಹರೆಯದ ಪದ್ಮಮ್ ಎಂಬ ಇಬ್ಬರು ಮಹಿಳೆಯರನ್ನು ಅಮಾನುಷ ಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಇಳಂತೂರ್ ಗ್ರಾಮದಲ್ಲಿ ನಡೆದ ಈ ಹತ್ಯೆಗಳ ಕುರಿತು ತನಿಖೆ ನಡೆದಾಗ, ಇದು, ನರಬಲಿ ನೀಡಿದರೆ ತಮಗೆ ಆರ್ಥಿಕ ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿಂದ ಒಂದು ಕುಟುಂಬದವರು ಮಾಡಿದ ಹತ್ಯೆಯಾಗಿತ್ತೆಂಬುದು ಬಯಲಾಯಿತು. ಮೃತಶರೀರಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಕೊಲೆಗೆ ಮುನ್ನವೇ ಸಿದ್ಧಪಡಿಸಿಟ್ಟುಕೊಳ್ಳಲಾಗಿದ್ದ ಹಲವು ಹೊಂಡಗಳಲ್ಲಿ ಹೂಳಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮೂರು ಮಂದಿಯನ್ನು ಬಂಧಿಸಲಾಗಿದೆ.

ವಿದ್ಯಾಭಾಸ ಬಂದೊಡನೆ ಮೌಢ್ಯವೇನೂ ಓಡಿಹೋಗುವುದಿಲ್ಲ. ನಾಲ್ಕುವರ್ಷಗಳ ಹಿಂದೆ (2021) ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ, ತಮ್ಮ ನೆರೆಯ ಮನೆಯೊಂದರಲ್ಲಿ ಯಾವುದೋ ಅಪರಾಧಿ ಚಟುವಟಿಕೆ ನಡೆಯುತ್ತಿದೆ ಎಂದು ಪೊಲೀಸರಿಗೆ ಹಲವು ಕರೆಗಳು ಬಂದವು. ಪೊಲೀಸರು ಆ ಮನೆಯನ್ನು ಪ್ರವೇಶಿಸಿದಾಗ ಅಲ್ಲಿ 23 ಮತ್ತು 27ರ ಹರೆಯದ ಇಬ್ಬರು ಯುವ ಸಹೋದರಿಯರ ಶವಗಳು ಕಂಡು ಬಂದವು. ಅವರಿಬ್ಬರನ್ನೂ ಕೆಂಪು ಸೀರೆ ಉಡಿಸಿ ಶೃಂಗರಿಸಲಾಗಿತ್ತು. ಅವರಿಂದ ಕೆಲವು ಬಾರಿ ಮನೆಯ ಸುತ್ತ ಪ್ರದಕ್ಷಿಣೆ ಮಾಡಿಸಿ ಕೆಲವು ಪೂಜಾ ಕ್ರಮಗಳನ್ನು ನಡೆಸಿದ ಬಳಿಕ ಅವರ ತಲೆಗಳಿಗೆ ಡಂಬೆಲ್‌ಗಳಿಂದ ಜಜ್ಜಿ ಅವರನ್ನು ಕೊಲ್ಲಲಾಗಿತ್ತು. ರಕ್ತದ ಕೆರೆಯಂತಿದ್ದ ಆ ಮನೆಯ ಕೊನೆಯಲ್ಲಿ ಶವಗಳ ಹತ್ತಿರವೇ ಆ ಹೆಣ್ಣುಮಕ್ಕಳ ಹೆತ್ತವರೂ ಇದ್ದರು. ಮಕ್ಕಳನ್ನು ಕೊಂದದ್ದು ತಾವೇ ಎಂದು ಒಪ್ಪಿಕೊಂಡ ಹೆತ್ತವರು, ಒಂದು ದಿನದ ಕಾಲಾವಕಾಶ ನೀಡಿದರೆ, ತಾವು ತಮ್ಮ ಮಕ್ಕಳನ್ನು ಮತ್ತೆ ಜೀವಂತಗೊಳಿಸುತ್ತೇವೆ ಎಂದು ವಾದಿಸಿದರು. ಆ ಮಕ್ಕಳು ಪ್ರೇತಬಾಧೆಯಿಂದ ಸಂತ್ರಸ್ತರಾಗಿದ್ದರಿಂದ ಅವರಿಗೆ ಹೊಸ ಜೀವನ ನೀಡಲಿಕ್ಕಾಗಿ ಅವರನ್ನು ಕೊಂದದ್ದಾಗಿ ಹೆತ್ತವರು ಹೇಳಿಕೊಂಡಿದ್ದರು. ಆ ಹೆಣ್ಣು ಮಕ್ಕಳ ತಂದೆ ಮದನಪಲ್ಲಿಯ ಸರಕಾರಿ ಮಹಿಳಾ ಕಾಲೇಜೊಂದರಲ್ಲಿ ಕೆಮಿಸ್ಟ್ರಿಯ ಪ್ರೊಫೆಸರ್ ಆಗಿದ್ದರು ಮತ್ತು ತಾಯಿ ಐಐಟಿ ಕೋಚಿಂಗ್ ಕೇಂದ್ರವೊಂದರಲ್ಲಿ ಉದ್ಯೋಗಿಯಾಗಿದ್ದರು.

NCRB ಪ್ರಕಾರ 2021 (ಗಮನಿಸಿ -1021ರಲ್ಲಿ ಅಲ್ಲ) ಭಾರತದಲ್ಲಿ ಮಾಟಮಂತ್ರಗಳಿಗೆ ಸಂಬಂಧಿಸಿದ 68 ಹತ್ಯೆಗಳು ನಡೆದಿದ್ದವು ಮತ್ತು ಆ ವರ್ಷ ನರಬಲಿಯ ಹೆಸರಲ್ಲಿ 6 ಮಕ್ಕಳನ್ನು ಕೊಲ್ಲಲಾಗಿತ್ತು.

NCRB ಪ್ರಕಾರ 2014 ಮತ್ತು 2021ರ ನಡುವೆ ನರಬಲಿಯ 103 ಪ್ರಕರಣಗಳು ದಾಖಲಾಗಿದ್ದವು. ಪ್ರಸ್ತುತ ಅವಧಿಯಲ್ಲಿ ಛತ್ತೀಸ್‌ಗಡದಲ್ಲಿ 14, ನಮ್ಮ ನೆಚ್ಚಿನ ಕರ್ಣಾಟಕದಲ್ಲಿ 13 ಮತ್ತು ಜಾರ್ಖಂಡ್‌ನಲ್ಲಿ 11 ನರಬಲಿಯ ಪ್ರಕರಣಗಳು ನಡೆದಿದ್ದವು. 2015ರಲ್ಲಿ ಒಂದೇ ವರ್ಷದಲ್ಲಿ ನರಬಲಿಯ 24 ಪ್ರಕರಣಗಳು ದಾಖಲಾಗಿದ್ದವು. 2021ರಲ್ಲಿ ಛತ್ತೀಸ್‌ಗಡ, ಹಿಮಾಚಲ್ ಪ್ರದೇಶ, ತೆಲಂಗಾಣ ಹಾಗೂ ಜಮ್ಮು-ಕಾಶ್ಮೀರದಲ್ಲಿ ನರಬಲಿಯ ತಲಾ ಒಂದೊಂದೊಂದು ಘಟನೆ ನಡೆದಿದ್ದರೆ, ಆ ವರ್ಷ ಕೇರಳದಲ್ಲಿ ನರಬಲಿಯ ಎರಡು ಪ್ರಕರಣಗಳು ವರದಿಯಾಗಿದ್ದವು.

ಹೀಗೆ ವಿವಿಧ ಮೌಢ್ಯಗಳಿಂದ ಹಾಗೂ ಸ್ವಾರ್ಥಗಳಿಂದ ಪ್ರೇರಿತರಾಗಿ, ಮನುಷ್ಯರೇ ಮನುಷ್ಯರನ್ನು ಬಲಿನೀಡುವ ಹಲವಾರು ಘಟನೆಗಳು ನಮ್ಮ ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಲೇ ಇವೆ. ಇಂತಹ ಕೃತ್ಯಗಳ ವಿರುದ್ಧ ದೇಶದಲ್ಲಿ ಕಠಿಣ ಕಾನೂನುಗಳಿದ್ದರೂ ಈ ಬಗೆಯ ಕೃತ್ಯಗಳನ್ನು ತಡೆಯಲು ಸಾಧ್ಯವಾಗಿಲ್ಲ. ಸಮಾಜವು ಈ ಸಮಸ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಚರ್ಚಿಸಿ, ಈ ವಿಷಯದಲ್ಲಿ ವ್ಯಾಪಕ ಜನಜಾಗೃತಿ ಬೆಳೆಸಬೇಕಾದ ಅಗತ್ಯವಿದೆ. ವಿಶೇಷವಾಗಿ ಡೋಂಗಿ ಬಾಬಾಗಳು ಮತ್ತು ಮತ್ತವರ ಶೋಷಣೆಗಳ ಕುರಿತಾಗಿ ಜನರನ್ನು ಎಚ್ಚರಿಸಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಂಬೂಕ

contributor

Similar News