ಇಂದು ಕೊರಳು ಕೇಳುತಿಹರು - ಅಂದು ಬೆರಳು ಕೇಳಿದವರು
ನಮ್ಮ ಕ್ಯಾಂಪಸ್‌ಗಳಿಗೆ ಮುಕ್ತಿ ಸಿಗಲುಂಟೇ- ಈ ಅಮಾನುಷ ದ್ರೋಣಾಸ್ತ್ರಗಳಿಂದ?
ಮೌಢ್ಯದಲ್ಲಿ ಮುಳುಗಿರುವ ಅಜ್ಞಾನಿ, ನಿರಕ್ಷರಿ, ಹಳ್ಳಿಗರಿಗೆ ಜಾತಿ ಪಕ್ಷಪಾತ, ಜಾತಿ ಆಧಾರಿತ ದೌರ್ಜನ್ಯ ಇತ್ಯಾದಿಗಳ ವಿರುದ್ಧ ಎಚ್ಚರಿಸಬೇಕಾಗುತ್ತದೆ - ಆದರೆ ವಿದ್ಯಾವಂತರೇ ಇರುವ, ದೊಡ್ಡ ನಗರಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಕುರಿತು ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವೇನಿದೆ? ಎಂದು ಸಂಶಯಿಸುವವರು ಸ್ವಲ್ಪಕಣ್ಣು ತೆರೆದು ನಮ್ಮ ಶಿಕ್ಷಣ ಸಂಸ್ಥೆಗಳ ಒಳಸ್ಥಿತಿಯನ್ನು ನೋಡಬೇಕು.
ಭಾಗ - 2
IIT- ಬಾಂಬೆಯ ವಿದ್ಯಾರ್ಥಿ ದರ್ಶನ್ ಸೋಲಂಕಿಗೆ ಸಂಭವಿಸಿದ ದುರಂತ ತೀರಾ ಅಪರೂಪದ್ದೇನೂ ಅಲ್ಲ. ಅದು ನಿಜವಾಗಿ ದೇಶದ ಹೆಚ್ಚಿನೆಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಬಹುಕಾಲದಿಂದ ವ್ಯಾಪಕವಾಗಿರುವ, ಏಕಲವ್ಯರುಗಳ ವಿರುದ್ಧ ಅಸಹನೆ ಮತ್ತು ದ್ವೇಷ ಮೆರೆಯುವ ಕರಾಳ ವಾತಾವರಣವನ್ನು ಪ್ರತಿಬಿಂಬಿಸುವ ಪ್ರಾತಿನಿಧಿಕ ಘಟನೆ ಮಾತ್ರ
ವಾಗಿದೆ.
ಮೊನ್ನೆ ತಾನೇ (ನವೆಂಬರ್ 2) ಶಿಮ್ಲಾ ಜಿಲ್ಲೆಯ ಖಡ್ದಾಪಾನಿ ಎಂಬಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಓರ್ವ ಮುಖ್ಯೋಪಾಧ್ಯಾಯನ ಸಹಿತ ಮೂರು ಮಂದಿ ಶಿಕ್ಷಕರನ್ನು ಬಂಧಿಸಲಾಯಿತು. ಪೊಲೀಸರ ವರದಿ ಪ್ರಕಾರ ಅವರೆಲ್ಲಾ ಒಂದನೇ ತರಗತಿಯ ಒಬ್ಬ ದಲಿತ ವಿದ್ಯಾರ್ಥಿಯನ್ನು ಒಂದು ವರ್ಷದಿಂದ ಸತತವಾಗಿ ಹಿಂಸಿಸುತ್ತಿದ್ದರು. ತರಗತಿಯಲ್ಲಿ ಮತ್ತು ಭೋಜನದ ವೇಳೆ ದಲಿತ ವಿದ್ಯಾರ್ಥಿಗಳನ್ನು ಇತರರಿಗಿಂತ ದೂರ ಪ್ರತ್ಯೇಕ ಸ್ಥಳದಲ್ಲಿ ಕೂರಿಸುತ್ತಿದ್ದರು. ಕ್ರೂರವಾಗಿ ಹೊಡೆಯುತ್ತಿದ್ದರು. ಕೆಲವೊಮ್ಮೆ ಉಟ್ಟ ಬಟ್ಟೆ ಕಳಚುವಂತೆ ಅವರನ್ನು ನಿರ್ಬಂಧಿಸುತ್ತಿದ್ದರು. ಪ್ರಸ್ತುತ ಹುಡುಗನಿಗೆ ಎಷ್ಟು ಹೊಡೆದಿದ್ದರೆಂದರೆ ಅವನ ಕಿವಿಯ ತಮಟೆ ಹರಿದು ರಕ್ತ ಸುರಿಯುತ್ತಿತ್ತು. ಒಮ್ಮೆ ಆತನನ್ನು ಕಕ್ಕಸಿನಲ್ಲಿ ಕೂಡಿಹಾಕಿ ಅವನ ಪ್ಯಾಂಟಿನೊಳಗೆ ಚೇಳನ್ನು ತುರುಕಿದ್ದರು. ಹುಡುಗನು ತೀವ್ರ ಗಾಯ ಗೊಂಡಿದ್ದಾಗ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಅವನನ್ನು ಶಾಲೆಯಿಂದ ಉಚ್ಚಾಟಿಸಲಾಗುವುದೆಂದು ಅವನ ತಂದೆಯನ್ನು ಎಚ್ಚರಿಸಲಾಗಿತ್ತು. ಅಷ್ಟೇ ಅಲ್ಲ, ‘‘ನಿಮ್ಮನ್ನೆಲ್ಲಾ ಸುಟ್ಟು ಬಿಡುತ್ತೇವೆ’’ ಎಂದು ಹುಡುಗನ ಕುಟುಂಬಕ್ಕೂ ಬೆದರಿಕೆ ಒಡ್ಡಲಾಗಿತ್ತು.
ಈ ದುರಂತವನ್ನು ವರದಿ ಮಾಡಿರುವ ‘ಇಂಡಿಯಾ ಟುಡೇ’ ಪ್ರಕಾರ, ಒಂದು ವಾರದ ಹಿಂದೆ ಇದೇ ಶಿಮ್ಲಾ ಜಿಲ್ಲೆಯ ಗವಾನಾ ಪ್ರದೇಶದಲ್ಲಿ ಒಬ್ಬ ದಲಿತ ಹುಡುಗನನ್ನು ಶಾಲೆಯ ಶಿಕ್ಷಕರು ಎಷ್ಟು ಕ್ರೂರವಾಗಿ ಥಳಿಸಿದ್ದರೆಂದರೆ, ಆ ಹುಡುಗ ಆತ್ಮಹತ್ಯೆಗೆ ಶರಣಾಗಿದ್ದ.
ಅದಕ್ಕಿಂತ ಮುಂಚೆ ಅದೇ ಜಿಲ್ಲೆಯ ಲಿಮ್ದಾ ಗ್ರಾಮದಲ್ಲಿ 12ರ ಹರೆಯದ ಒಬ್ಬ ದಲಿತ ವಿದ್ಯಾರ್ಥಿ ಮೇಲ್ಜಾತಿಯವರೊಬ್ಬರ ಮನೆಯೊಳಗೆ ಪ್ರವೇಶಿಸಿದನೆಂಬ ಕಾರಣಕ್ಕೆ ಮನೆಮಾಲಕಿಯು ಅವನನ್ನು ದನದ ಕೊಟ್ಟಿಗೆಯಲ್ಲಿ ಕೂಡಿಹಾಕಿ ಹಿಂಸಿಸಿದ್ದಳು. ಇದರಿಂದ ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ವರ್ಷ ಜನವರಿ 25ರಂದು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಆರೆಸ್ಸೆಸ್‌ಗೆ ಸೇರಿದ ಸರಸ್ವತಿ ವಿದ್ಯಾ ಮಂದಿರ್‌ನಲ್ಲಿ 12ನೇ ತರಗತಿಯಲ್ಲಿ ಕಲಿಯುತ್ತಿದ್ದ 17ರ ಹರೆಯದ ದಲಿತ ವಿದ್ಯಾರ್ಥಿಯೊಬ್ಬನನ್ನು ಕೆಲವು ಶಿಕ್ಷಕರು ಜಾತಿಯ ಹೆಸರಲ್ಲಿ ನಿಂದಿಸಿದ್ದು ಮಾತ್ರವಲ್ಲ, ಅಮಾನುಷವಾಗಿ ದೊಣ್ಣೆಗಳಿಂದ ಥಳಿಸಿ ಅವನನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಅವನು ಮಾಡಿಸಿಕೊಂಡಿದ್ದ ‘ಹೇರ್ ಕಟ್’ ಮೇಲ್ಜಾತಿಯವರ ಸ್ಟೈಲ್‌ಗೆ
ಹೋಲುತ್ತಿತ್ತು ಎಂಬುದೇ ಅವನ ಅಪರಾಧವಾಗಿತ್ತು. ಘಟನೆ ಜನವರಿಯಲ್ಲಿ ನಡೆದಿದ್ದರೂ ಮಾರ್ಚ್ ತನಕವೂ ಅಪರಾಧಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿರಲಿಲ್ಲ. ಏಕೆಂದರೆ ಘಟನೆಯ ಕುರಿತು ದೂರು ಸಲ್ಲಿಸದಂತೆ ಶಾಲೆಯವರು ವಿದ್ಯಾರ್ಥಿಯ ಮನೆಯವರನ್ನು ನಿರ್ಬಂಧಿಸಿದ್ದರು ಮತ್ತು ಅವರಿಗೆ ಹಲವು ಬಗೆಯ ಬೆದರಿಕೆಗಳನ್ನೂ ಒಡ್ಡಿದ್ದರು. ಕೊನೆಗೆ ಮಾರ್ಚ್ 5 ರಂದು ಮನೆಯವರು ದೂರು ಸಲ್ಲಿಸಿದ ಬಳಿಕವಷ್ಟೇ ಪೊಲೀಸರು ಪ್ರಸ್ತುತ ಶಾಲೆಯ 8 ಮಂದಿ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದರು.
2011ರಲ್ಲಿ ‘ದ ಹಿಂದೂ’ ಪತ್ರಿಕೆಯಲ್ಲಿ ವರದಿಯಾದ ಪ್ರಕಾರ 2007 ಮತ್ತು 2011 ರ ನಡುವೆ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯಾಧಾರಿತ ತಾರತಮ್ಯದಿಂದ ನೊಂದು 18 ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
2016ರಲ್ಲಿ ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಮತ್ತು ಆತನು ಬರೆದಿದ್ದ ಭಾವುಕ ಮರಣಪತ್ರವು ಕ್ಯಾಂಪಸ್‌ಗಳಲ್ಲಿ ಜಾತಿ ಹೆಸರಲ್ಲಿ ನಡೆಯುವ ದೌರ್ಜನ್ಯಗಳ ಕುರಿತು ದೇಶದೆಲ್ಲೆಡೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಒಂದು ವರದಿಯಲ್ಲಿ, ರೋಹಿತ್ ವೇಮುಲನಿಗಿಂತ ಮುನ್ನ ಅದೇ ವಿಶ್ವ ವಿದ್ಯಾನಿಲಯದಲ್ಲಿ ಕೆಲವೇ ವರ್ಷಗಳ ಅವಧಿಯಲ್ಲಿ 8 ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆಗೆ ನಿರ್ಬಂಧಿತರಾಗಿದ್ದರೆಂಬ ಮಾಹಿತಿ ಇತ್ತು.
2023 ಸೆಪ್ಟ್ಟಂಬರ್ 1ರಂದು ದೆಹಲಿ ಐಐಟಿಯ 21 ರ ಹರೆಯದ ದಲಿತ ವಿದ್ಯಾರ್ಥಿ ಅನಿಲ್ ಕುಮಾರ್ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತ ಬಿಟೆಕ್ ಕೊನೆಯ ವರ್ಷದ ವಿದ್ಯಾರ್ಥಿಯಾಗಿದ್ದ. ಅದಕ್ಕಿಂತ ಕೆಲವೇ ವಾರಗಳ ಹಿಂದೆ (ಜುಲೈ 10) ಅದೇ ಸಂಸ್ಥೆಯ ಆಯುಷ್ ಆಶ್ನಾ ಎಂಬ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದ.
ಐಐಟಿ, ಎನ್‌ಐಟಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಐಐಎಸ್‌ಇಆರ್, ಐಐಎಂ,. ಎಐಐಎಂಎಸ್ ಮುಂತಾದ ಹಲವು ಪ್ರತಿಷ್ಠಿತ, ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಸಂಭವಿಸುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಕರಣಗಳ ಕುರಿತು 2023 ಆಗಸ್ಟ್ ನಲ್ಲಿ, ದೇಶದ ಸಂಸತ್ತಿನಲ್ಲಿ ವಿಚಾರಿಸಲಾಗಿತ್ತು. ಈ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರವಾಗಿ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಡಾಕ್ಟರ್ ಸುಭಾಸ್ ಸರ್ಕಾರ್ ಒದಗಿಸಿದ ಮಾಹಿತಿಯನುಸಾರ, ಪ್ರಸ್ತುತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2014 ರಿಂದೀಚೆಗೆ ಆತ್ಮ ಹತ್ಯೆಯ 137 ಪ್ರಕರಣಗಳು ನಡೆದಿದ್ದವು. ಆಪೈಕಿ 61 ಪ್ರಕರಣಗಳು 2018 ಮತ್ತು 2023 ರ ನಡುವೆ ನಡೆದಿದ್ದವು. ಆತ್ಮ ಹತ್ಯೆ ಮಾಡಿಕೊಂಡವರ ಜಾತಿ ಹಿನ್ನೆಲೆಯ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಸ್ಪಷ್ಟ ಉತ್ತರ ನೀಡಿರಲಿಲ್ಲ.
ಕೇವಲ ಈ ವರ್ಷ ಮಾರ್ಚ್ ತಿಂಗಲೊಂದರಲ್ಲೇ ನಡೆದ ಕೆಲವು ಘಟನೆಗಳು ಪ್ರಸ್ತಾಪಯೋಗ್ಯವಾಗಿವೆ:
ಮಾರ್ಚ್ 12 ರಂದು ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ 11 ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬನ ಮೇಲೆ ಭೀಕರ ಹಲ್ಲೆ ನಡೆಯಿತು. ಅವನ ತಂಡವು ಕಬಡ್ಡಿ ಪಂದ್ಯದಲ್ಲಿ ಮೇಲ್ಜಾತಿಯವರ ತಂಡವನ್ನು ಸೋಲಿಸಿತ್ತು ಎಂಬುದೇ ಹಲ್ಲೆಗೆ ಕಾರಣವಾಗಿತ್ತು. ಪರೀಕ್ಷೆ ಬರೆಯಲಿಕ್ಕೆಂದು ಬಸ್ಸಿನಲ್ಲಿ ಹೋಗುತ್ತಿದ್ದಾಗ ಆತನನ್ನು ನಡುರಸ್ತೆಯಲ್ಲಿ ಬಸ್ಸಿನಿಂದಿಳಿಸಿದ ಹಲ್ಲೆಕೋರರು ಆತನ ಮೂರು ಬೆರಳುಗಳನ್ನು ಕಡಿದು ಪ್ರತ್ಯೇಕಿಸಿದ್ದರು. ಅವನ ತಲೆಯಲ್ಲಿ ಮತ್ತು ದೇಹದ ಇತರ ಭಾಗಗಳಲ್ಲೂ ಗಂಭೀರ ಗಾಯಗಳಾಗಿದ್ದವು.
ಮಾರ್ಚ್ 14ರಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ 6ನೇ ಕ್ಲಾಸಿನ ಒಬ್ಬ ದಲಿತ ವಿದ್ಯಾರ್ಥಿ ಮತ್ತು ಇನ್ನೊಬ್ಬ ವಿದ್ಯಾರ್ಥಿಯ ನಡುವೆ ಜಗಳವಾಯಿತು. ಇದನ್ನೇ ನೆಪವಾಗಿಸಿ ಶಾಲೆಯ ಪಿಟಿ ಮೇಸ್ಟ್ರು ಪ್ರಸ್ತುತ ದಲಿತ ವಿದ್ಯಾರ್ಥಿಯನ್ನು ಎಷ್ಟು ತೀವ್ರವಾಗಿ ಥಳಿಸಿದರೆಂದರೆ ವಿದ್ಯಾರ್ಥಿ ಅಲ್ಲೇ ಮೂರ್ಛೆ ಹೋಗಿದ್ದ ಮತ್ತು ಹಲವು ದಿನ ಐಸಿಯು ನಲ್ಲಿ ಚಿಕಿತ್ಸೆ ಪಡೆದ ಬಳಿಕವಷ್ಟೇ ಚೇತರಿಸಿಕೊಂಡಿದ್ದ.
ಮಾರ್ಚ್ ಕೊನೆಯಲ್ಲಿ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಹರಿಪುರ್ ಗ್ರಾಮದ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ 15ರ ಹರೆಯದ ದಲಿತ ವಿದ್ಯಾರ್ಥಿಯೊಬ್ಬ ತೀವ್ರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ. ಆತನೇ ತಿಳಿಸಿದ ಪ್ರಕಾರ, ಅವನು ತೀವ್ರ ಬಾಯಾರಿಕೆಯಾದಾಗ ತನ್ನ ಶಿಕ್ಷಕನ ಮೇಜಿನಲ್ಲಿದ್ದ ನೀರಿನ ಬಾಟಲಿಯಿಂದ ನೀರು ಕುಡಿಯಲಿಕ್ಕಾಗಿ ಅದನ್ನು ಮುಟ್ಟಿದ್ದ. ಇದನ್ನು ಕಂಡು ಕೆರಳಿದ ಶಿಕ್ಷಕನು ಆತನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ತೀವ್ರ ಹಲ್ಲೆ ನಡೆಸಿದ್ದ. ಹಲ್ಲೆಯಲ್ಲಿ ವಿದ್ಯಾರ್ಥಿಯ ದೇಹದಲ್ಲಿ ಹಲವೆಡೆ ಮೂಳೆ ಮುರಿತ ಉಂಟಾಗಿತ್ತು.
ಈ ವರ್ಷ ಜುಲೈ ಯಲ್ಲಿ ನಮ್ಮದೇ ಕನ್ನಡ ನಾಡಿನ ಕಲಬುರ್ಗಿ ಕೇಂದ್ರೀಯ ವಿವಿಯಲ್ಲಿ, ಎರಡನೇ ವರ್ಷದ ಬಿಎಸ್ಸಿ ಕಲಿಯುತ್ತಿದ್ದ ಜಯಶ್ರೀ ನಾಯಕ್ ಎಂಬ ಒರಿಸ್ಸಾದ ದಲಿತ ವಿದ್ಯಾರ್ಥಿನಿಯ ಅಸಹಜ ಸಾವು ಸಂಭವಿಸಿತ್ತು. ಈ ಸಾವಿನ ಹಿಂದೆಯೂ ಹಲವರು ಜಾತಿ ತಾರತಮ್ಯದ ಪಾತ್ರವನ್ನು ಕಂಡಿದ್ದಾರೆ. ಇಂತಹ ಘಟನೆಗಳನ್ನು ಪ್ರಸ್ತಾಪಿಸುತ್ತಾ ಹೋದರೆ ಅದರ ಸರಮಾಲೆ ಎಂದೂ ಕೊನೆಗಾಣದಷ್ಟು ದೀರ್ಘವಾಗಿದೆ.
ಕ್ಯಾಂಪಸ್ ಗಳಲ್ಲಿ ವಂಚಿತ ವರ್ಗಗಳ ವಿದ್ಯಾರ್ಥಿಗಳಿಗೆ ನ್ಯಾಯ, ಭದ್ರತೆ ಹಾಗೂ ಘನತೆಯ ವಾತಾವರಣ ಸಿಗಬೇಕಿದ್ದರೆ ಅವರ ವಿಧಿ ನಿರ್ಧರಿಸುವ ಶಿಕ್ಷಕ ವೃಂದದಲ್ಲಿ ಮತ್ತು ಶಿಕ್ಷಣ ಸಂಸ್ಥೆಯ ಆಡಳಿತ ಸಿಬ್ಬಂದಿಯಲ್ಲಿ ಎಲ್ಲ ಜಾತಿಗಳಿಗೆ ಕಡ್ಡಾಯವಾಗಿ ಅನುಪಾತಿಕ ಪ್ರಾತಿನಿಧ್ಯ ನೀಡಬೇಕೆಂಬ ನ್ಯಾಯೋಚಿತ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿದೆ. ಹಾಗೆಯೇ ಶಿಕ್ಷಕವರ್ಗ ಹಾಗೂ ಆಡಳಿತ ಸಿಬ್ಬಂದಿಯಲ್ಲಿ ಮೇಲ್ಜಾತಿಯವರಿಗೆ ಲಭ್ಯವಿರುವ ಬಹುತೇಕ ಏಕಸ್ವಾಮ್ಯವೇ ವಂಚಿತ ವರ್ಗಗಳ ವಿದ್ಯಾರ್ಥಿಗಳಲ್ಲಿ ಅಸುರಕ್ಷಿತ, ಅಭದ್ರ ಹಾಗೂ ಅನಾಥ ಭಾವ ಬೆಳೆಯುವುದಕ್ಕೆ ಮತ್ತು ಅವರು ವಿವಿಧ ಬಗೆಯ ದುರಂತಗಳಿಗೆ ತುತ್ತಾಗುವುದಕ್ಕೆ ಕಾರಣ ಎಂಬ ಅಂಶವು ಹಲವು ತನಿಖೆ ಹಾಗೂ ಅಧ್ಯಯನಗಳಿಂದ ಪದೇ ಪದೇ ಸಾಬೀತಾಗಿದೆ. ಇಷ್ಟಾಗಿಯೂ ವಿವಿಧ ಹುದ್ದೆಗಳಲ್ಲಿ ಮೀಸಲಾತಿ ಮೂಲಕ ತುಂಬ ಬೇಕಾದ ಸೀಟುಗಳನ್ನು ಕೂಡಾ ಉದ್ದೇಶಪೂರ್ವಕವಾಗಿ ವರ್ಷಗಟ್ಟಲೆ ಖಾಲಿ ಇಡುವ ಮೂಲಕ ಕಾನೂನನ್ನು ಮೀರಿ ಮೇಲ್ಜಾತಿಯವರ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲಾಗುತ್ತಿದೆ. ಈ ಘೋರ ಸನ್ನಿವೇಶವನ್ನು ಸರಿಪಡಿಸಬೇಕಾದುದು ಸಮಾಜದ ತುರ್ತು ಅಗತ್ಯವಾಗಿದೆ.
ಕೆಲವೇ ವಾರಗಳ ಹಿಂದೆ (ಸೆಪ್ಟಂಬರ್ 15) ಭಾರತದ ಸರ್ವೋಚ್ಚ ನ್ಯಾಯಾಲಯವು, ಈ ನಿಟ್ಟಿನಲ್ಲಿ ಒಂದು ತೇಪೆ ಕ್ರಮವನ್ನು ಕೈಗೊಂಡಿತು. ಅದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಜಾತಿ ಆಧಾರಿತ ಕಿರುಕುಳಗಳನ್ನು ತಡೆಯುವುದಕ್ಕಾಗಿ ವಿವಿ ದತ್ತಿ ಆಯೋಗಕ್ಕೆ (UGCಗೆ) ಒಂದು ಮಹತ್ವದ ಆದೇಶ ನೀಡಿತು. ಗಮ್ಮತ್ತೆಂದರೆ, ಇದು ಶಿಕ್ಷಣ ಸಂಸ್ಥೆಗಳಲ್ಲಿ ಜಾತಿಯಾಧಾರಿತ ತಾರತಮ್ಯವನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ 13 ವರ್ಷಗಳ ಹಿಂದೆ (2012ರಲ್ಲಿ) ಸ್ವತಃ ಯುಜಿಸಿಯೇ ಸ್ವೀಕರಿಸಿಕೊಂಡಿದ್ದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಬೇಕೆಂಬ ಆದೇಶವಾಗಿತ್ತು! ಜೊತೆಗೆ, ಆ ನಿಯಮಗಳ ಅನುಷ್ಠಾನಕ್ಕಾಗಿ ಯಾವೆಲ್ಲ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರವಾಗಿ ತಿಳಿಸುವ ವರದಿಯನ್ನು ಎರಡು ತಿಂಗಳೊಳಗೆ ಸಲ್ಲಿಸಬೇಕೆಂಬ ಆದೇಶವಾಗಿತ್ತು. ಈ ಆದೇಶದ ಹಿನ್ನೆಲೆಯನ್ನು ಕೆದಕುತ್ತಾ ಹೋದಂತೆ, ನಮ್ಮ ವ್ಯವಸ್ಥೆಯ ಇಚ್ಛಾಶಕ್ತಿಯು ನ್ಯಾಯಸ್ಥಾಪನೆಗಿಂತ ಹೆಚ್ಚಾಗಿ ಪರಂಪರಾಗತ ಏಕಸ್ವಾಮ್ಯಗಳನ್ನು ರಕ್ಷಿಸುವುದರಲ್ಲಿ ಆಸಕ್ತವಾಗಿದೆ ಎಂಬುದು ವ್ಯಕ್ತವಾಗುತ್ತದೆ.
ಭಾರತೀಯ ಕ್ಯಾಂಪಸ್ ಗಳಲ್ಲಿ ಜಾತಿಯ ಆಧಾರದಲ್ಲಿ ತಾರತಮ್ಯ, ಕಿರುಕುಳ ಮತ್ತು ದೌರ್ಜನ್ಯಗಳ ಸಮಸ್ಯೆ ಹಲವು ದಶಕಗಳಿಂದ ಅಸ್ತಿತ್ವದಲ್ಲಿದೆ ಮತ್ತು ದೊಡ್ಡ ಪ್ರಮಾಣದಲ್ಲಿದೆ. ಅದರಿಂದಾಗಿ ದೇಶದ ಹಲವೆಡೆ ಕ್ಯಾಂಪಸ್ ಗಳಲ್ಲಿ ಹಲವು ಸಣ್ಣ- ದೊಡ್ಡ ದುರಂತಗಳೂ ಸಂಭವಿಸುತ್ತಿರುತ್ತವೆ. ಆ ದುರಂತಗಳ ಒಂದು ಪುಟ್ಟ ಕಿರಣ ಮಾತ್ರ ಹೊರಜಗತ್ತಿಗೆ ಕಾಣಿಸುತ್ತದೆ, ಉಳಿದದ್ದೆಲ್ಲಾ ಭಯ, ಆತಂಕ, ಕೀಳರಿಮೆ ಮುಂತಾದ ಕತ್ತಲುಗಳಲ್ಲಿ ಕಣ್ಮರೆಯಾಗಿ ಬಿಡುತ್ತವೆ. ದಲಿತರನ್ನು ಮತ್ತು ಶೂದ್ರರನ್ನು ವಿದ್ಯಾಲಯಗಳಿಂದ ಮತ್ತು ಆ ಮೂಲಕ ಅಧಿಕಾರದಿಂದ ದೂರ ಇಡಬೇಕೆಂಬ ಪ್ರಾಚೀನ ಅಧರ್ಮಕ್ಕೆ ನಿಷ್ಠರಾಗಿರುವವರು ತಮ್ಮ ಗುರಿ ಸಾಧನೆಗಾಗಿ ಬಹಳ ಸಂಘಟಿತವಾದ, ನಾಜೂಕಾದ, ದೂರಗಾಮಿ ಪರಿಣಾಮಗಳಿರುವ ಕಾರ್ಯವಿಧಾನಗಳನ್ನು ಬಳಸುತ್ತಾ ಬಂದಿದ್ದಾರೆ. ಆ ವಿಧಾನಗಳ ಅನುಷ್ಠಾನ ಪ್ರಾಥಮಿಕ ಶಾಲೆಗಳ ಮಟ್ಟದಲ್ಲೇ ಆರಂಭವಾಗಿರುತ್ತದೆ. ತರಗತಿಯ ಮಟ್ಟ ಮೇಲೇರಿದಂತೆ ದಮನದ ವಿಧಾನಗಳು ಕೂಡಾ ಪ್ರಗತಿ ಸಾಧಿಸುತ್ತಾ ಹೋಗುತ್ತವೆ. ಇದರ ಪರಿಣಾಮವಾಗಿ ವಂಚಿತ ವರ್ಗಗಳ ಎಷ್ಟೋ ವಿದ್ಯಾರ್ಥಿಗಳು, ವಿದ್ಯಾಲಯಗಳು ತಮಗೆ ಸೂಕ್ತವಾದ ಸ್ಥಳಗಳಲ್ಲವೆಂದು ಅಥವಾ ನಾವು ಅಲ್ಲಿಗೆ ಹೋದರೂ ನಮಗೆ ಅಲ್ಲಿ ಉಳಿಗಾಲವಿಲ್ಲ ಎಂಬ ನಂಬಿಕೆ ಬೆಳೆಸಿಕೊಂಡು ವಿದ್ಯಾಸಂಸ್ಥೆಗಳಿಂದ ದೂರ ಉಳಿಯುತ್ತಿದ್ದಾರೆ. ಅದೆಷ್ಟೋ ಮಂದಿ ಭಾರೀ ಆಶೋತ್ತರಗಳ ಮೂಟೆ ಹೊತ್ತು ಕ್ಯಾಂಪಸ್‌ನೊಳಗೆ ಬಂದಿರುತ್ತಾರೆ. ಆದರೆ ಅಲ್ಲಿ ತಮ್ಮ ಜನ್ಮವನ್ನೇ ಅಪಾಧಿಕರಿಸುವ ವಾತಾವರಣವನ್ನು ಕಂಡು ಆಘಾತಕ್ಕೀಡಾಗುತ್ತಿದ್ದಾರೆ. ಅವರು ಅಲ್ಪ ಸಮಯದಲ್ಲೇ ಒಂದೋ ಅಲ್ಲಿಂದ ಮರಳಿ ಮನೆಗೆ ಪಲಾಯನ ಮಾಡುತ್ತಾರೆ ಅಥವಾ ಮೇಲ್ಜಾ
ತಿಯ ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಇಚ್ಛಾನುಸಾರ, ಅವರಿಗೆ ಶರಣಾಗಿ ಬದುಕಲು ಕಲಿತುಕೊಳ್ಳುತ್ತಾರೆ. ಉಳಿದವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ವಿಷಮಯ ವಾತಾವರಣದ ವಿರುದ್ಧ ಆಕ್ರೋಶ ಮತ್ತು ಇದಕ್ಕೊಂದು ಪರಿಹಾರ ಕಂಡು ಕೊಳ್ಳಬೇಕು ಮತ್ತು ಕ್ಯಾಂಪಸ್‌ಗಳನ್ನು ಎಲ್ಲ ಬಗೆಯ ತಾರತಮ್ಯ, ಕಿರುಕುಳ ಮತ್ತು ದೌರ್ಜನ್ಯಗಳಿಂದ ಮುಕ್ತಗೊಳಿಸುವುದಕ್ಕೆ ಸರಕಾರವು ಕಠಿಣ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆ ಹಲವು ದಶಕಗಳಿಂದ ಮೊಳಗುತ್ತಲೇ ಇದೆ. ಅಂತಹ ಬೇಡಿಕೆಗಳಿಗೆ ಮಣಿದೇ ಯುಜಿಸಿಯು 2012 ರಲ್ಲಿ ಕೆಲವು ನಿಯಮಾವಳಿಗಳನ್ನು ರಚಿಸಿತ್ತು. ಆದರೆ ಅದು ಕೇವಲ ಒಂದು ಔಪಚಾರಿಕ ಹೆಜ್ಜೆಯಾಗಿ ಮಾತ್ರ ಉಳಿಯಿತು. ಕ್ಯಾಂಪಸ್‌ಗಳ ವಾತಾವರಣದಲ್ಲಿ ಯಾವುದೇ ಸುಧಾರಣೆ ಆಗಿರಲಿಲ್ಲ. ದ್ರೋಣರ ದರ್ಪ ಕುಗ್ಗಲಿಲ್ಲ. ತಾರತಮ್ಯ, ಕಿರುಕುಳ ಮತ್ತು ದೌರ್ಜನ್ಯಗಳ ಸರಣಿ ಮತ್ತಷ್ಟು ದೊಡ್ಡದಾಗಿ ಮುಂದುವರಿಯಿತು. ಪಲಾಯನ ಮತ್ತು ಆತ್ಮಹತ್ಯೆಯ ಪ್ರಕರಣಗಳೂ ಹೆಚ್ಚುತ್ತಲೇ ಹೋದವು. ಆ ಪೈಕಿ ಕೆಲವು ಆತ್ಮಹತ್ಯೆಗಳು ಪ್ರಸ್ತುತ ವಾತಾವರಣದ ಬಗ್ಗೆ ಕೆಲವು ವಲಯಗಳಲ್ಲಿ ಚರ್ಚೆ, ಸಂವಾದಗಳು ಏರ್ಪಡುವುದಕ್ಕೆ ಕಾರಣವಾದವು. ಸೆಪ್ಟ್ಟಂಬರ್ 15 ರಂದು ಸುಪ್ರೀಂ ಕೋರ್ಟ್, ಯುಜಿಸಿಗೆ ನೀಡಿದ ಖಡಕ್ ಆದೇಶಕ್ಕೆ ಈ ಹಿನ್ನೆಲೆಯೊಂದಿಗೆ ಸಂಬಂಧವಿತ್ತು. ಆದೇಶ ಹೊರಡಿಸಿದ ಜಸ್ಟಿಸ್ ಸೂರ್ಯಕಾಂತ್ ಹಾಗೂ ಜಸ್ಟಿಸ್ ಜೀಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಜಾತಿಯಾಧಾರಿತ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ರೋಹಿತ್ ವೇಮುಲ ಮತ್ತು ಪಾಯಲ್ ತದ್ವಿ ಎಂಬ ಇಬ್ಬರು ವಿದ್ಯಾರ್ಥಿಗಳ ತಾಯಂದಿರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ (PIL) ಅರ್ಜಿಯೊಂದನ್ನು ವಿಚಾರಣೆಗೆತ್ತಿಕೊಂಡಿತ್ತು.
ಮೌಢ್ಯದಲ್ಲಿ ಮುಳುಗಿರುವ ಅಜ್ಞಾನಿ, ನಿರಕ್ಷರಿ, ಹಳ್ಳಿಗರಿಗೆ ಜಾತಿ ಪಕ್ಷಪಾತ, ಜಾತಿ ಆಧಾರಿತ ದೌರ್ಜನ್ಯ ಇತ್ಯಾದಿಗಳ ವಿರುದ್ಧ ಎಚ್ಚರಿಸಬೇಕಾಗುತ್ತದೆ - ಆದರೆ ವಿದ್ಯಾವಂತರೇ ಇರುವ, ದೊಡ್ಡ ನಗರಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಕುರಿತು ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯವೇನಿದೆ? ಎಂದು ಸಂಶಯಿಸುವವರು ಸ್ವಲ್ಪಕಣ್ಣು ತೆರೆದು ನಮ್ಮ ಶಿಕ್ಷಣ ಸಂಸ್ಥೆಗಳ ಒಳಸ್ಥಿತಿಯನ್ನು ನೋಡಬೇಕು. ಸದ್ಯ ನಮ್ಮದಲ್ಲದ ಸಮಸ್ಯೆಗಳ ಚರ್ಚೆಗೆ ಮೀಸಲಾಗಿರುವ ನಮ್ಮ ಸಮಯದ ಒಂದು ಭಾಗವನ್ನಾದರೂ ನಾವು ‘ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ’ ಎಂಬ, ನೇರವಾಗಿ ನಮ್ಮ ಕೋಟಿಗಟ್ಟಲೆ ಸಹಜೀವಿಗಳ ಘನತೆ, ಸ್ವಾಭಿಮಾನ ಮಾತ್ರವಲ್ಲ, ಸಾಕ್ಷಾತ್ ಅಸ್ತಿತ್ವಕ್ಕೆ ಸಂಬಂಧಿಸಿದ ಸವಾಲಿನ ಬಗ್ಗೆ ಅಧ್ಯಯನ ಮತ್ತು ಸಂವಾದಕ್ಕೆ ವ್ಯಯಿಸಬೇಕು. ಇಂದು ಆ ಸಮಸ್ಯೆ ಎಷ್ಟು ಬೃಹದಾಕಾರದಲ್ಲಿ ಹೆಡೆಬಿಚ್ಚಿ ನಿಂತಿದೆ ಎಂಬುದನ್ನು ಮನವರಿಕೆಮಾಡಿಕೊಂಡವರು, ಬೇಗನೆ ಚೇತರಿಸಿಕೊಳ್ಳಲಾಗದಷ್ಟು ಆಘಾತಕ್ಕೊಳಗಾಗುವುದು ಖಚಿತ.
ಕ್ಯಾಂಪಸ್ ಗಳಲ್ಲಿ ದಲಿತರ ಪಾಲಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿಕೊಡುವುದಕ್ಕಾಗಿ ಸೆಪ್ಟ್ಟಂಬರ್ 15 ರಂದು ಸುಪ್ರೀಂ ಕೋರ್ಟು ನೀಡಿದ ಆದೇಶವು ಆ ನಿಟ್ಟಿನಲ್ಲಿ ಅದರ ಮೊದಲ ಆದೇಶವಾಗಿರಲಿಲ್ಲ. ಇದೇ ವರ್ಷ ಜನವರಿಯಲ್ಲಿ ಅದು ಯುಜಿಸಿಯನ್ನುದ್ದೇಶಿಸಿ, ಕ್ಯಾಂಪಸ್‌ಗಳಲ್ಲಿ ಜಾತಿತಾರತಮ್ಯಕ್ಕೆ ಸಂಬಂಧಿಸಿ ದಾಖಲಾದ ಎಲ್ಲ ದೂರುಗಳ ಕುರಿತು ಹಾಗೂ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ‘ಸಮಾನ ಅವಕಾಶ ಸೆಲ್’ (Equal Opportunities Ce) ಗಳನ್ನು ಸ್ಥಾಪಿಸಬೇಕೆಂಬ ಯುಜಿಸಿಯ 2012 ರ ನಿಯಮಾವಳಿಯು ಯಾವ ಮಟ್ಟಿಗೆ ಅನುಷ್ಠಾನವಾಗಿದೆ ಎಂಬ ಕುರಿತು ಸವಿಸ್ತಾರ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಆ ಬಳಿಕ ಮತ್ತೆ ಎಪ್ರಿಲ್ ತಿಂಗಳಲ್ಲಿ ಸುಪ್ರೀಂ ಕೋರ್ಟು ಯುಜಿಸಿಯ 2025 ರ
ನಿಯಮಾವಳಿಗಳಲ್ಲಿ ಕ್ಯಾಂಪಸ್‌ಗಳನ್ನು ಜಾತಿ ಪಕ್ಷಪಾತದಿಂದ ಸಂಪೂರ್ಣ ಮುಕ್ತವಾಗಿಡುವ ನಿಟ್ಟಿನಲ್ಲಿ ಹೊಸ ನಿಯಮಾವಳಿಗಳನ್ನು ರಚಿಸಬೇಕೆಂದು ಆದೇಶಿಸಿತ್ತು. ಪ್ರಸ್ತುತ ಎರಡೂ ಆದೇಶಗಳಿಗೆ ತೃಪ್ತಿಕರ ಪ್ರತಿಕ್ರಿಯೆ ಸಿಗದೇ ಇದ್ದಾಗ ಸೆಪ್ಟಂಬರ್ ಆದೇಶ ಪ್ರಕಟವಾಯಿತು. ಇಲ್ಲೂ ಸುಪ್ರೀಂ ಕೋರ್ಟ್‌ನ
ಸ್ವಪ್ರೇರಣೆಗಿಂತ, ವೇಮುಲ ಪರ ಅರ್ಜಿದಾರರ ಸತತ ಒತ್ತಡವು ಹೆಚ್ಚು ಸಕ್ರಿಯ ಪಾತ್ರ ವಹಿಸಿರುವಂತಿದೆ.
ದಲಿತರು ಮತ್ತು ಶೂದ್ರರನ್ನು ಕ್ಯಾಂಪಸ್‌ಗಳಿಂದ ದೂರ ಇಡಬೇಕೆಂಬ ಹಠವು ಕೇವಲ ಕೆಲವು ಮನುವಾದಿ ವ್ಯಕ್ತಿಗಳು, ಜಾತಿಗಳು ಅಥವಾ ಪಕ್ಷಗಳಿಗೆ ಸೀಮಿತವಾಗಿಲ್ಲ. ಅದು ನಿಜವಾಗಿ ನಮ್ಮ ದೇಶದ ಹಲವು ಸುಭದ್ರ ರಾಷ್ಟ್ರೀಯ ಸಂಸ್ಥೆಗಳ ಅಘೋಷಿತ ಧೋರಣೆಯಾಗಿದೆ. ಈ ಧೋರಣೆಗೆ ನ್ಯಾಯಾಂಗದ ಸಹಿತ ನಮ್ಮ ವ್ಯವಸ್ಥೆಯ ಹಲವು ಸ್ತಂಭಗಳ ಆಶೀರ್ವಾದವೂ ಪ್ರಾಪ್ತವಿದೆ. ಇದನ್ನು ಸಾಬೀತು ಪಡಿಸುವುದಕ್ಕೆ ಸಾವಿರ ಪುರಾವೆಗಳಿವೆ. ಉದಾ: 2020 ರಲ್ಲಿ ದೇಶದ ಐಐಟಿ ಗಳ ನಿರ್ದೇಶಕರು ಮತ್ತು ಇತರ ಕೆಲವು ತಜ್ಞರ ತಂಡವು ಸರಕಾರಕ್ಕೆ ಒಂದು ಮನವಿ ಸಲ್ಲಿಸಿತು. ಐಐಟಿಗಳು ತಮ್ಮಲ್ಲಿಗೆ ಶಿಕ್ಷಕರನ್ನು ನೇಮಿಸುವಾಗ ಅವುಗಳನ್ನು ಮೀಸಲಾತಿಯ ನಿರ್ಬಂಧದಿಂದ ಮುಕ್ತಗೊಳಿಸಬೇಕು ಎಂಬುದಾಗಿತ್ತು ಆ ಮನವಿ. ಸಾಮಾಜಿಕ ನ್ಯಾಯವನ್ನು, ನ್ಯಾಯೋಚಿತ ಪ್ರಾತಿನಿಧ್ಯವನ್ನು ಮತ್ತು ಅದಕ್ಕೆಲ್ಲಾ ದಾರಿಯಾಗಿರುವ ಮೀಸಲಾತಿಯನ್ನು ಮನದಾಳದಲ್ಲಿ ವಿರೋಧಿಸುತ್ತಿದ್ದವರು ಇದೀಗ ಇಷ್ಟು ಬಹಿರಂಗವಾಗಿ ಹಾಗೂ ಅಧಿಕೃತವಾಗಿ ಅದನ್ನು ಹೊರಹಾಕುತ್ತಿದ್ದಾರೆಂಬುದು ಸಣ್ಣವಿಷಯವಲ್ಲ. ಇದು ನ್ಯಾಯವಿರೋಧಿಗಳ ಪ್ರಾಬಲ್ಯ ಎಷ್ಟು ಹೆಚ್ಚಿದೆ ಎಂಬುದರ ಸೂಚಕವಾಗಿದೆ. ಆದರೂ ಇದಕ್ಕೆ ದೊಡ್ಡ ಮಟ್ಟದ ಸಂಘಟಿತ ವಿರೋಧ ಪ್ರಕಟವಾಗಲಿಲ್ಲವೆಂಬುದು ದುರಂತ. ಒಂದು ವೇಳೆ ಇಂತಹ ಯಾವುದಾದರೂ ಸಂಸ್ಥೆಯವರು ತಮ್ಮಲ್ಲಿನ ಶಿಕ್ಷಕ ವೃಂದದಲ್ಲಿ ಮೇಲ್ಜಾತಿಯವರ ಪ್ರಾತಿನಿಧ್ಯವನ್ನು 15ಶೇ.ಕ್ಕೆ ಸೀಮಿತವಾಗಿಡಬೇಕೆಂದು ಮನವಿ ಸಲ್ಲಿಸಿದ್ದರೆ ದೇಶದೆಲ್ಲೆಡೆ ಕೋಲಾಹಲ ಎದ್ದುಬಿಡುತ್ತಿತ್ತು. ನಿಜವಾಗಿ ಇಂದು ದೇಶಕ್ಕೆ ಒಂದು ನ್ಯಾಯಪರ ಕೋಲಾಹಲದ
ಅಗತ್ಯವಿದೆ.