ಚೇನಾಬ್ ನದಿಯ ಹರಿವು ತಡೆದ ಭಾರತ: ಪಾಕಿಸ್ತಾನದಲ್ಲಿ ಬಿತ್ತನೆಗೆ ಸಮಸ್ಯೆ
PC: ANI
ಹೊಸದಿಲ್ಲಿ: ಪಾಕಿಸ್ತಾನದ ಪ್ರಮುಖ ಅಣೆಕಟ್ಟುಗಳಾದ ಝೇಲಂ ನದಿಯ ಮಂಗ್ಲಾ ಅಣೆಕಟ್ಟು ಮತ್ತು ಸಿಂಧೂ ನದಿಯ ತರ್ಬೇಲಾ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಮುಂಗಾರು ಬಿತ್ತನೆ ಕಾರ್ಯ ಕುಂಠಿತವಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತದಿಂದ ಚೇನಾಬ್ ನದಿಯ ನೀರಿನ ಒಳಪ್ರವಾಹ ನಿಯಂತ್ರಿಸಲ್ಪಟ್ಟಿರುವುದು ಪಾಕಿಸ್ತಾನದ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ.
ಇದು ದೇಶಾದ್ಯಂತ ಆರಂಭಿಕ ಮುಂಗಾರು ಬಿತ್ತನೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲು ಕಾರಣವಾಗಲಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ಹಿಮನದಿಗಳ ಸಂರಕ್ಷಣೆ ಕುರಿತಂತೆ ತಜಕಿಸ್ತಾನದ ದುಶನ್ಬೆಯಲ್ಲಿ ಕಳೆದ ವಾರ ನಡೆದ ಸಮ್ಮೇಳನದಲ್ಲಿ ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಿರುವ ಭಾರತದ ಕ್ರಮದ ಬಗ್ಗೆ ಆತಂಕ ವ್ಯಕ್ತಪಡಿಸಿ, ಜಾಗತಿಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.
ಪಾಕಿಸ್ತಾನದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ (ಐಆರ್ಎಸ್ಎ) ಅಂದಾಜಿನ ಪ್ರಕಾರ ದೇಶ ಈಗಾಗಲೇ ಶೇಕಡ 21ರಷ್ಟು ನೀರಿನ ಹರಿವಿನ ಕೊರತೆ ಎದುರಿಸುತ್ತಿದೆ ಹಾಗೂ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಕ್ಕೆ ಜಲವಿದ್ಯುತ್ ಪೂರೈಸಲು ಮತ್ತು ನೀರಾವರಿಗೆ ನೀರು ಒದಗಿಸುವ ಎರಡು ಪ್ರಮುಖ ಅಣೆಕಟ್ಟುಗಳಲ್ಲಿ ದಾಸ್ತಾನು ಪ್ರಮಾಣ ಶೇಕಡ 50ಕ್ಕೆ ಕುಸಿದಿದೆ.
ಚೇನಾಬ್ ನದಿಯಿಂದ ಹರಿದು ಬರುವ ನೀರಿನ ಪ್ರಮಾಣ ಮರಾಳಾದಲ್ಲಿ ದಿಢೀರನೇ ಇಳಿಕೆಯಾಗಿರುವುದು ನೀರಿನ ಕೊರತೆ ಉಲ್ಬಣವಾಗಲು ಕಾರಣವಾಗಲಿದ್ದು, ಮುಂಗಾರು ಹಂಗಾಮಿನ ಮೇಲೆ ಪರಿಣಾಮ ಬೀರಲಿದೆ ಎಂದು ಐಆರ್ಎಸ್ಎ ಹೇಳಿದೆ.
ಶೇಕಡ 21ರಷ್ಟು ನೀರಿನ ಕೊರತೆ ಹಿನ್ನೆಲೆಯಲ್ಲಿ ಅಣೆಕಟ್ಟು ಅಧಿಕಾರಿಗಳು ಮತ್ತು ನೀರಾವರಿ ಮೇಲುಸ್ತುವಾರಿ ಏಜೆನ್ಸಿಗಳು ನೀರನ್ನು ಮಿತವಾಗಿ ಬಳಸುವಂತೆ ಸೂಚಿಸಿತ್ತು.
ಮುಂದಿನ ತಿಂಗಳು ಮುಂಗಾರು ಮಳೆ ಆರಂಭದ ಬಳಿಕ ಪರಿಸ್ಥಿತಿ ಸುಧಾರಿಸಬಹುದಾದರೂ, ಜಮ್ಮು ಮತ್ತು ಕಾಶ್ಮೀರದ ಚೇನಾಬ್ ನಲ್ಲಿ ಪಾಕಿಸ್ತಾನದ ಬಗ್ಲಿಹಾರ್ ಮತ್ತು ಸಲಾಲ್ ಜಲಾಶಯಗಳ ಸೀಮಿತ ಮೂಲಸೌಕರ್ಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕೃಷಿ ಕಾರ್ಯಾಚರಣೆಗಳು ಬಹುತೇಕ ಭಾರತ ಹೇಗೆ ನೀರಿನ ಹರಿವನ್ನು ನಿಯಂತ್ರಿಸುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿವೆ. ಪ್ರಸ್ತುತ ಪಾಕಿಸ್ತಾನದ ಮಂಗ್ಲಾ ಅಣೆಕಟ್ಟಿನಲ್ಲಿ 2.7 ದಶಲಕ್ಷ ಎಕರೆ ಅಡಿಯಷ್ಟು ಮಾತ್ರ ನೀರು ಸಂಗ್ರಹವಿದ್ದು, ಒಟ್ಟು ಸಾಮರ್ಥ್ಯ 5.9 ಎಂಎಎಫ್ ಆಗಿದೆ.