ಚಿಕ್ಕಬಳ್ಳಾಪುರ : ಕೃಷಿ ಹೊಂಡಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಇಬ್ಬರು ಮಕ್ಕಳು ಹಾಗೂ ವೃದ್ಧ ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹುಸೇನ್ ಪುರ ಗ್ರಾಮದ ಬಳಿ ನಡೆದಿರುವುದು ವರದಿಯಾಗಿದೆ.

ಹುಸೇನಪುರ ಗ್ರಾಮದ ಮುನಿನಾರಾಯಣಪ್ಪ (60) ಹಾಗೂ ಅವರ ಮೊಮ್ಮಕ್ಕಳಾದ ಯಶ್ವಿನ್ (7) ಮತ್ತು ಪ್ರಜ್ವಲ್ (8) ಮೃತಪಟ್ಟವರು. ಮೃತ ಯಶ್ವಿನ್ ಅವರು ಮುನಿನಾರಾಯಣಪ್ಪ ಅವರ ಪುತ್ರ ನಂದೀಶ್ ಅವರ ಪುತ್ರನಾಗಿದ್ದು, ಪ್ರಜ್ವಲ್ ಮುನಿನಾರಾಯಣಪ್ಪ ಅವರ ಸಹೋದರ ವೆಂಕಟರೋಣಪ್ಪ ಅವರ ಪುತ್ರ ನಾರಾಯಣಸ್ವಾಮಿ ಅವರ ಪುತ್ರ ಎಂದು ತಿಳಿದುಬಂದಿದೆ.

ಮುನಿನಾರಾಯಣಪ್ಪ ಅವರು ಪ್ರತಿ ಶನಿವಾರ ತಮ್ಮ ಜಮೀನಿನಲ್ಲಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಶನಿವಾರ ಬೆಳಗ್ಗೆ ಪೂಜೆಗೆ ತೆರಳುತ್ತಿದ್ದಾಗ ಮೊಮ್ಮಕ್ಕಳಾದ ಯಶ್ವಿನ್ ಮತ್ತು ಪ್ರಜ್ವಲ್ ಕೂಡ ತಾತ, ನಾವೂ ನಿಮ್ಮ ಜೊತೆ ಬರುತ್ತೇವೆ ಎಂದು ಹಠ ಹಿಡಿದು ಅವರೊಂದಿಗೆ ತೆರಳಿದ್ದರು ಎನ್ನಲಾಗಿದೆ. ಬೆಳಗ್ಗೆ ಮನೆಯಿಂದ ತೆರಳಿದ್ದ ಮೂವರು ಸಂಜೆಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಜಮೀನಿನತ್ತ ತೆರಳಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೇವಾಲಯದ ಸಮೀಪದ ಅಶ್ವತ್ಥಪ್ಪ ಎಂಬವರ ಜಮೀನಿನ ಕೃಷಿ ಹೊಂಡದಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.

ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್‌ಸ್ಪೆೆಕ್ಟರ್ ಶಿವರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor