ಸಾಂದರ್ಭಿಕ ಚಿತ್ರ

ಭಾಗ್ಯನಗರ (ಬಾಗೇಪಲ್ಲಿ) : ದ್ವಿಚಕ್ರ ವಾಹನದಲ್ಲಿ ಗೂಳೂರಿಗೆ ತೆರಳುತ್ತಿದ್ದ ಇಬ್ಬರು ಬಾಲಕರ ಮೇಲೆ ಸಿಮೆಂಟ್ ಲಾರಿ ಹರಿದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗೂಳೂರು ಪೋಲೀಸ್ ಠಾಣಾ ವ್ಯಾಪ್ತಿಯ ಚೆನ್ನರಾಯನಪಲ್ಲಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ವಿಷ್ಣು (14) ಮತ್ತು ವಿಜಯ ರಾಜಕುಮಾರ್(4) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಚನ್ನರಾಯನಪಲ್ಲಿ ಗ್ರಾಮದಿಂದ ಗೂಳೂರು ಕಡೆಗೆ ಹೊರಟಿದ್ದ ಸಿಮೆಂಟ್ ಲಾರಿಗೆ ಬೋರ್ ವೆಲ್ ಲಾರಿ ಅಡ್ಡ ಬಂದಿದ್ದು ರಸ್ತೆ ಕಿರಿದಾದ ಕಾರಣ ರಸ್ತೆ ಬಿಟ್ಟುಕೊಡಲು ಹಠಾತ್ ಆಗಿ ಸಿಮೆಂಟ್ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯದಿಂದ ಹಿಂದಕ್ಕೆ ಚಲಾಯಿಸಿದ್ದಾನೆ ಎನ್ನಲಾಗಿದೆ. ಅದೇ ಸಮಯದಲ್ಲಿ ಚನ್ನರಾಯನಪಲ್ಲಿ ಗ್ರಾಮದಿಂದ ಸಿಮೆಂಟ್ ಲಾರಿ ಹಿಂಬದಿಯಲ್ಲಿಯೇ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಿದ್ದ ಬಾಲಕರು ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನದ್ದಾರೆ. ಸಿಮೆಂಟ್ ಲಾರಿಯನ್ನು ನಿರ್ಲಕ್ಷ್ಯದಿಂದ ಚಾಲನೆ ಮಾಡಿರುವ ಚಾಲಕ ಶ್ರೀನಿವಾಸ್ ಎಂಬುವವನೂ ಇದೇ ಚನ್ನರಾಯನಪಲ್ಲಿ ಗ್ರಾಮಕ್ಕೆ ಸೇರಿದವನೆನ್ನಲಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟ ಬಾಲಕರ ತಾಯಂದಿರು ಒಂದೇ ಕುಟುಂಬದ ಸಹೋದರಿಯರ ಮಕ್ಕಳು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಎಎಸ್‍ಪಿ ಜಗನ್ನಾಥ್ ರೈ ಅವರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor