ಸಾಂದರ್ಭಿಕ ಚಿತ್ರ (AI)

ಚಿಕ್ಕಬಳ್ಳಾಪುರ: ಮಗಳ ಜೊತೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಫಿಲ್ಟರ್ ಬೆಡ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ನಗರದ ಫಿಲ್ಟರ್ ಬೆಡ್ ವೃತ್ತ ಸಮೀಪದ ನಿವಾಸಿ ಸುಮಿತ್ರಮ್ಮ(35) ಕೊಲೆಯಾದವರು.

ಸುಮಿತ್ರಮ್ಮ ತನ್ನ ಮಗಳು ವಿಷ್ಣುಪ್ರಿಯಳ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ತರಕಾರಿ ಅಂಗಡಿಯಿಂದ ತರಕಾರಿ ತರುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ.

ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಯು ಜನಸಂದಣಿ ಕಡಿಮೆ ಇರುವ ಕಡೆ ರಸ್ತೆಯಲ್ಲೇ ಅಡ್ಡಗಟ್ಟಿ ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾನೆ.

ಈ ವೇಳೆ ಜೊತೆಗಿದ್ದ ಮಗಳು ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಗಂಭೀರಾವಸ್ಥೆಯಲ್ಲಿದ್ದ ಸುಮಿತ್ರಮ್ಮರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಸುಮಿತ್ರಮ್ಮರಿಗೆ ವೆಂಕಟರೆಡ್ಡಿ ಎಂಬಾತನ ಜೊತೆ ಈ ಹಿಂದೆ ವಿವಾಹವಾಗಿದ್ದು, ಇವರೊಳಗೆ ಗಲಾಟೆ ನಡೆದು ಬಳಿಕ ಬೇರೆ ಬೇರೆಯಾಗಿದ್ದರು ಎನ್ನಲಾಗಿದೆ. ಒಂದು ವರ್ಷದ ಹಿಂದೆ ಸುಮಿತ್ರಮ್ಮ ಕಾಪಲ್ಲಿ ಗ್ರಾಮದ ರಮೇಶ್ ಎಂಬರೊಂದಿಗೆ ಎರಡನೇ ಮದುವೆ ಮಾಡಿಕೊಂಡಿದ್ದರು ಎನ್ನಲಾಗಿದೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಡಿವೈಎಸ್ಪಿ ರಘು ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಘಟನೆಯ ಬಗ್ಗೆ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor