ಚಿಕ್ಕಬಳ್ಳಾಪುರ : ಆಯತುಲ್ಲಾ ಅಲಿ ಖಾಮಿನೈ ಹತ್ಯೆ ಹಿನ್ನೆಲೆ: ಅಲಿಪುರದಲ್ಲಿ ಮೂರು ದಿನಗಳ ಶೋಕಾಚರಣೆ
ಅಂಗಡಿ ಮುಂಗಟ್ಟುಗಳು ಬಂದ್
ಚಿಕ್ಕಬಳ್ಳಾಪುರ: ಇಸ್ರೇಲ್–ಅಮೆರಿಕ ದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಹತ್ಯೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲೆಯ ಅಲಿಪುರ ಗ್ರಾಮದಲ್ಲಿ ತೀವ್ರ ದುಃಖದ ವಾತಾವರಣ ನಿರ್ಮಾಣವಾಗಿದೆ.
ಅಲಿಪುರದಲ್ಲಿ ಶಿಯಾ ಮುಸ್ಲಿಮರ ಸಂಖ್ಯೆ ಹೆಚ್ಚಿದ್ದು ಸಂತಾಪ ಸೂಚಿಸಲು ಸ್ವಯಂಪ್ರೇರಿತವಾಗಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸಲು ತೀರ್ಮಾನಿಸಿದ್ದಾರೆ. ಇದರ ಭಾಗವಾಗಿ ಗ್ರಾಮದಲ್ಲಿ ಅಘೋಷಿತ ಬಂದ್ ಜಾರಿಯಾಗಿದ್ದು,ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಆಗಿವೆ.
ಶೋಕಾಚರಣೆಯ ವೇಳೆ ಕೆಲವರು ಖಾಮಿನೈ ಅವರ ಫೋಟೋಗಳನ್ನು ಹಿಡಿದು ಕಣ್ಣೀರು ಹಾಕಿ ದುಃಖ ವ್ಯಕ್ತಪಡಿಸಿದರು. ಮಾನವೀಯತೆಗೆ ಪ್ರತಿಬಿಂಬವಾಗಿದ್ದ ಖಾಮಿನೈ ಅವರನ್ನು ಹತ್ಯೆ ಮಾಡಿರುವ ಅಮೆರಿಕ ಹಾಗೂ ಇಸ್ರೇಲ್ ರಾಷ್ಟ್ರಗಳು ಮುಂದಿನ ದಿನಗಳಲ್ಲಿ ತಕ್ಕ ಪಾಠ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಬಟ್ಟೆ ಧರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಶಿಯಾ ಸಮುದಾಯದ ಸದಸ್ಯರು ಇಸ್ರೇಲ್ ಹಾಗೂ ಅಮೆರಿಕ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಶಾಂತಿಯುತವಾಗಿ ನಡೆದ ಶೋಕಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ಇರಾನ್ ತಮ್ಮ ಪವಿತ್ರ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು. ಆಯತುಲ್ಲಾ ಅಲಿ ಖಾಮಿನೈ ಅವರ ಧಾರ್ಮಿಕ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಇಲ್ಲಿದೆ. 1986ರಲ್ಲಿ ಆಯತುಲ್ಲಾ ಅಲಿ ಖಾಮಿನೈ ಅವರು ಅಲೀಪುರಕ್ಕೆ ಭೇಟಿ ನೀಡಿದ್ದರು. ಇದು ಇರಾನ್ ಮತ್ತು ಅಲೀಪುರದ ಬಾಂಧವ್ಯಕ್ಕೆ ಸಾಕ್ಷಿ.