ಚಿಕ್ಕಬಳ್ಳಾಪುರ| ದಲಿತ ಯುವಕನ ಮೇಲೆ ಹಲ್ಲೆ : ಪ್ರಕರಣ ದಾಖಲು
ಭಾಗ್ಯನಗರ(ಚೇಳೂರು), ಜ.2: ಚೇಳೂರು ತಾಲೂಕಿನ ಚಾಕವೇಲು ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಹಣದ ವಿಚಾರವಾಗಿ ನಡೆದ ಮಾತಿನ ಚಕಮುಕಿ ವಿಕೋಪಕ್ಕೆ ತಿರುಗಿ, ದಲಿತ ಯುವಕನ ಮೇಲೆ ಜಾತಿ ನಿಂದನೆ ಹಾಗೂ ಹಲ್ಲೆ ನಡೆದಿದೆ. ಘಟನೆ ನಡೆದ ಸ್ಥಳಕ್ಕೆ ಚಿಂತಾಮಣಿ ಡಿವೈಎಸ್‌ಪಿ ಶಿವಕುಮಾರ್ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಡಿ.31ರಂದು ಮಧ್ಯಾಹ್ನ ಸುಮಾರು 1.00 ಗಂಟೆಯ ಸಮಯದಲ್ಲಿ ಚಾಕವೇಲು ಗ್ರಾಮದ ನಿವಾಸಿ ದಲಿತ ಸಮುದಾಯದ ವೆಂಕಟೇಶ್ ಬಿನ್ ವೆಂಕಟರವಣ (30) ಎಂಬವರು ಅಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ತೆರಳಿದ್ದರು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಪಾಯಲೋಲ್ಲಪಲ್ಲಿ ಗ್ರಾಮದ ಬೈಯ್ಯಾರೆಡ್ಡಿ ಎಂಬವರಿಗೆ ವೆಂಕಟೇಶ್ 500 ರೂಪಾಯಿ ಫೋನ್-ಪೇ ಮಾಡುತ್ತೇನೆ, ನಗದು ಹಣ ಕೊಡಿ ಎಂದು ಕೇಳಿದ ವಿಚಾರವಾಗಿ ಗಲಾಟೆ ಆರಂಭವಾಗಿದ್ದು ಸವರ್ಣಿಯರಾದ ಮನುಮೋಹನ್ ರೆಡ್ಡಿ ಎಂಬವರು ವೆಂಕಟೇಶ್ ಅವರನ್ನು ನಿಂದಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿ ಕೆನ್ನೆಗೆ ಹೊಡೆದು ರಕ್ತಸ್ರಾವ ವಾಗುವಂತೆ ಮಾಡಿ ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ. ತೀವ್ರ ಹಲ್ಲೆಗೊಳಗಾದ ವೆಂಕಟೇಶ್ ಅವರನ್ನು ಚೇಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಚೇಳೂರು ಪೋಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ಈ ಸಂಬಂದ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ಹಾಗೂ ಚೇಳೂರು ಸಬ್ ಇನ್ಸ್ಪೆಕ್ಟರ್ ಹರೀಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಸಾಕ್ಷಿಗಳ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.