ಚಿಕ್ಕಮಗಳೂರು : ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರುವುದಾಗಿ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದೇವಸ್ಥಾನವೊಂದರ ಅರ್ಚಕ ಸತೀಶ್ ಪಾತ್ರಿ ಬಂಧಿತ ಆರೋಪಿ.

ಆರೋಪಿಯು ಭೂತ-ದೆವ್ವ ಬಿಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನ್ನ ಮೇಲೆ ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಒಂದೂವರೆ ತಿಂಗಳಿನ ಬಳಿಕ ಕೊಪ್ಪ ಠಾಣೆ ಪೊಲೀಸರು ಸತೀಶ್ ಪಾತ್ರಿಯನ್ನು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ.

ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಎನ್.ಆರ್.ಪುರ ಠಾಣೆಯಲ್ಲಿ ಮಾಟಮಂತ್ರ ನಿಷೇಧ (ಬ್ಲ್ಯಾಕ್ ಮ್ಯಾಜಿಕ್) ಕಾಯ್ದೆಯಡಿ ಪ್ರಕರಣ ದಾಖಲಾಗಿವೆ.

ಬಾಲಕಿಗೆ ಕೋಳಿ ರಕ್ತ ಕುಡಿಯಲು ಒತ್ತಾಯಿಸಿದ್ದ ಆರೋಪಿ: ಈ ಹಿಂದೆ ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಭೂತ ಬಿಡಿಸುವ ಸೋಗಿನಲ್ಲಿ ಕೋಳಿ ರಕ್ತ ಕುಡಿಯುವಂತೆ ಬಲವಂತಪಡಿಸಿದ್ದ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿತ್ತು.

ಪೊಲೀಸ್ ಕಾನ್‌ಸ್ಟೇಬಲ್ ಅಮಾನತು: ವಿಚಾರಣೆಯ ವೇಳೆ ಬಯಲಾದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಆರೋಪಿ ಸತೀಶ್ ಪಾತ್ರಿ ತನಿಖೆಯ ಪ್ರತಿಯೊಂದು ಹಂತದ ಮಾಹಿತಿಯನ್ನೂ ಎನ್.ಆರ್.ಪುರ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಕಾಂತೇಶ್ ಎಂಬವರಿದಂದಲೇ ಮುಂಚಿತವಾಗಿ ಪಡೆಯುತ್ತಿದ್ದ. ಪೊಲೀಸರು ಬಂಧಿಸಲು ದಾಳಿ ನಡೆಸುವ ಮುನ್ನವೇ ಸ್ಥಳ ಬದಲಾಯಿಸಿ ಪರಾರಿಯಾಗುತ್ತಿದ್ದ. ಈ ಜಾಲವನ್ನು ಭೇದಿಸಿದ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದಲ್ಲಿ ಪೇದೆ ಕಾಂತೇಶ್‌ನನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor