ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಜಿಲ್ಲೆಯ ಬರಪೀಡಿತ ಕಡೂರು ತಾಲೂಕಿನಲ್ಲಿ ಮೂರು ದಿನಗಳ ಅಂತರದಲ್ಲಿ ಇಬ್ಬರು ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ಭೈರಗೊಂಡನಹಳ್ಳಿ ಹಾಗೂ ಕೊತ್ತಿಗೆರೆ ಗ್ರಾಮದ ರೈತರು ಆತ್ಮಹತ್ಯೆ ಮಾಡಿಕೊಂಡವರು. ಭೈರಗೊಂಡನಹಳ್ಳಿ ಗ್ರಾಮದ ಬಸವರಾಜು (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೊತ್ತಿಗೆರೆ ಗ್ರಾಮದ ಶಂಕರಯ್ಯ (60) ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಸವರಾಜು ಅವರು ಮೂರು ಎಕರೆ ಜಮೀನಿನ ಅಭಿವೃದ್ಧಿಗಾಗಿ ಖಾಸಗಿ ಫೈನಾನ್ಸ್ ಹಾಗೂ ಕೈ ಸಾಲದ ರೂಪದಲ್ಲಿ ಒಟ್ಟು 4.80 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಶಂಕರಯ್ಯ ಅವರು ಕೂಡ ಖಾಸಗಿ ಫೈನಾನ್ಸ್ ಮತ್ತು ಕೈ ಸಾಲದ ಮೂಲಕ 4 ಲಕ್ಷ ರೂ. ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

ಕಡೂರು ತಾಲೂಕು ಈ ಬಾರಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು, ಸಮರ್ಪಕ ಮಳೆಯಿಲ್ಲದೆ ಜಮೀನಿನ ಅಭಿವೃದ್ಧಿ ಹಾಗೂ ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಇಬ್ಬರೂ ರೈತರು, ಖಾಸಗಿ ಫೈನಾನ್ಸ್ ಹಾಗೂ ಕೈ ಸಾಲ ನೀಡಿದವರ ಒತ್ತಡದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor