×
Ad

Chikkamagaluru | ಅರಣ್ಯ ಇಲಾಖೆ ಕಾರ್ಯಾಚರಣೆ : ಭಾರಿ ಗಾತ್ರದ ಕಾಡುಕೋಣವನ್ನು ಸೆರೆಹಿಡಿದ ಸಿಬ್ಬಂದಿ

Update: 2026-05-17 17:46 IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಾನವ-ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ಕಾಡಾನೆಗಳು ಮತ್ತು ಕಾಡುಕೋಣ ಹಾವಳಿಗೆ ರೈತರು ಹಾಗೂ ಗ್ರಾಮೀಣ ಭಾಗದ ಜನರು ನಲುಗಿ ಹೋಗಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ತೀವ್ರ ಹಾವಳಿ ಇಡುತ್ತಿರುವ 3 ಕಾಡುಕೋಣಗಳ ಸ್ಥಳಾಂತರಕ್ಕೆ ಸರಕಾರ ಆದೇಶಿಸಿದ್ದು, ಸದ್ಯ ಕಾಫಿನಾಡಿನಲ್ಲಿರುವ 3 ಕಾಡುಕೋಣಗಳ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಶನಿವಾರ ಸಂಜೆ ಭಾರೀ ಗಾತ್ರದ ಕಾಡುಕೋಣವೊಂದನ್ನು ಸೆರೆ ಹಿಡಿದು ಶಿವಮೊಗ್ಗಕ್ಕೆ ಸ್ಥಳಾಂತರ ಮಾಡಲಾಗಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಸಂತತಿ ಹೆಚ್ಚಾಗಿದ್ದು, ಕೆಲ ಕಾಡುಕೋಣಗಳು ರೈತರ ತೋಟ, ಜಮೀನುಗಳಿಗೆ ದಾಳಿ ಇಟ್ಟು ಭಾರೀ ಉಪಟಳ ನೀಡುತ್ತಿವೆ. ಕಾಡುಕೋಣಗಳ ದಾಳಿಗೆ ಹಲವು ಮಂದಿ ರೈತರು, ಕೂಲಿ ಕಾರ್ಮಿಕರು ಬಲಿಯಾಗಿದ್ದು, ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಳೆದ ವರ್ಷ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಈ ಬಗ್ಗೆ ಅಧ್ಯಯನ ನಡೆಸಿತ್ತು. ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್‍ಪಾಲ್ ಕ್ಷೀರಸಾಗರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಅಧ್ಯಯನದ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಇದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉಪಟಳ ನೀಡುತ್ತಿದ್ದ ಮೂರು ಕಾಡುಕೋಣಗಳ ಸೆರೆಗೆ ಆದೇಶ ನೀಡಿತ್ತು.

ಎರಡು ದಿನಗಳಿಂದ ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡುಕೋಣಗಳ ಸೆರೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಶನಿವಾರ ಸಂಜೆ ಚಿಕ್ಕಮಗಳೂರು ತಾಲೂಕಿನ ಶನಿವಾರ ಆಲ್ದೂರು ಅರಣ್ಯ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದರು. ಅರೆನೂರು ಸಮೀಪದ ಹಕ್ಕಿಮಕ್ಕಿ ಸಮೀಪ ಆಗಾಗ್ಗೆ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡುಕೋಣವೊಂದಕ್ಕೆ ಸಂಜೆ 6ರ ಹೊತ್ತಿನಲ್ಲಿ ಅರಿವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಯಿತು. ವೈದ್ಯರಾದ ಡಾ.ರಮೇಶ್ ತಂಡ ಹಾಗೂ 100ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಮಳೆಯ ನಡುವೆಯೇ ಕಾರ್ಯಾಚರಣೆ ನಡೆಸಿದರು.

ಕೊಪ್ಪ ಅರಣ್ಯ ವಿಭಾಗದಲ್ಲಿ ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡುಕೋಣಕ್ಕೆ ಅರವಳಿಕೆ ನೀಡಲಾಗಿತ್ತು. ಆದರೆ, ಭಾರಿ ತೂಕದ ಕಾಡುಕೋಣವನ್ನು ಇಳಿಜಾರು ಪ್ರದೇಶದಿಂದ ರಸ್ತೆಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದಕ್ಕೆ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಕಾಡಿಗೆ ಬಿಡಲಾಗಿತ್ತು.  ಇದರ ಬೆನ್ನಲ್ಲೇ ಶನಿವಾರ ಮತ್ತೊಂದು ಕಾಡುಕೋಣವನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸೆರೆ ಹಿಡಿದ ಕಾಡುಕೋಣವನ್ನು ಶಿವಮೊಗ್ಗದ ಮೃಗಾಲಯಕ್ಕೆ ಸ್ಥಾಳಾಂತರ ಮಾಡಲಾಗಿದೆ.

 

ಕಾಡುಕೋಣ ಸೆರೆ ಕಾರ್ಯಾಚರಣೆ ಯಶಸ್ವಿಯಾಗುತ್ತಿದೆ. 100ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸೆರೆ ಹಿಡಿದ ಕಾಡುಕೋಣವನ್ನು ಶಿವಮೊಗ್ಗ ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಸೆರೆ ಹಿಡಿದ ಕಾಡುಕೋಣ ಮಲೆನಾಡು ಭಾಗದಲ್ಲಿ ರೈತರಿಗೆ ಭಾರೀ ತೊಂದರೆ ನೀಡುತ್ತಿತ್ತು. ಇನ್ನೂ ಎರಡು ಕಾಡುಕೋಣಗಳ ಸೆರೆಗೆ ಸರಕಾರದ ಆದೇಶವಿದ್ದು, ಅವುಗಳ ಚಲನವಲನ ಪತ್ತೆ ಮಾಡಿ ಶೀಘ್ರ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು.

- ಯಶ್‍ಪಾಲ್ ಕ್ಷೀರಸಾಗರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಿಕ್ಕಮಗಳೂರು.

 

ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಈ ರೀತಿಯ ಕಾರ್ಯಾಚರಣೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಸಿದ್ದು, ಭಾರೀ ಗಾತ್ರದ ಕಾಡು ಕೋಣವನ್ನು ಸೆರೆ ಹಿಡಿಯಲಾಗಿದೆ. ನಿರಂತರವಾಗಿ ಬೆಳೆ ಹಾನಿ ಹಾಗೂ ಮಾನವ ಹಾನಿ ಆಗುತ್ತಿರುವ ಹಿನ್ನೆಲೆ ಅರಣ್ಯ ಸಚಿವರ ಬಳಿ ನಾವು ಮನವಿ ಮಾಡಿದ್ದೆವು. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯದೇ ಹೋಗಿದ್ದರೆ ಮಾನವ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿತ್ತು. ಈ ಪ್ರಕ್ರಿಯೆಗೆ ಪರಿಸರವಾದಿಗಳ ವಿರೋಧವಿದೆಯಾದರೂ ಹುಲ್ಲುಗಾವಲು ಧಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದ ಕಾಡುಕೋಣಗಳನ್ನು ಬಿಡುತ್ತೇವೆ. ಪರಿಸರವಾದಿಗಳು ಇದನ್ನು ಟೀಕೆ ಮಾಡುವ ಬದಲು ಅದರ ಸುರಕ್ಷತೆಗೆ ಸಲಹೆಗಳನ್ನು ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ. ಅರಣ್ಯ ಪ್ರದೇಶದಲ್ಲಿ ಅನುಪಯುಕ್ತ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಬೇಕಾದಂತಹ ಹಣ್ಣು ಹುಲ್ಲುಗಳನ್ನು ಬೆಳೆದರೆ ಇದರಿಂದ ಮಾನವ ಹಾಗೂ ಪ್ರಾಣಿಗಳ ಕಾಡು ಪ್ರಾಣಿಗಳ ಸಂಘರ್ಷ ತಪ್ಪಿದಂತಾಗುತ್ತದೆ. ಕಾಡಾನೆ, ಕಾಡುಕೋಣ ಸೆರೆ ಹಿಡಿಯುವುದು ಸುಲಭದ ಕೆಲಸವಲ್ಲ. ಜೀವದ ಹಂಗನ್ನು ತೊರೆದು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಯಾವ ಪ್ರಾಣಿಗಳು ಉಪಟಳ ಮಾಡುತ್ತವೆಯೋ ಅಂತಹ ಪ್ರಾಣಿಗಳನ್ನು ಮಾತ್ರ ಸೆರೆಹಿಡಿಯಲಾಗುತ್ತಿದೆ.

- ಟಿ.ಡಿ.ರಾಜೇಗೌಡ, ಶೃಂಗೇರಿ ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News