Kadur | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಹಲ್ಲೆ; ಮೂವರ ವಿರುದ್ಧ ದೂರು ದಾಖಲು
ಚಿಕ್ಕಮಗಳೂರು : ತೋಟದಲ್ಲಿ ತೆಂಗಿನ ಕಾಯಿ ಕದ್ದಿದ್ದಾಳೆ ಎಂಬ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಮನಸೋಇಚ್ಛೆ ಥಳಿಸಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ಪಾತೇಗನಹಳ್ಳಿ ಗ್ರಾಮದಲ್ಲಿ ಗುರುವಾರ ವರದಿಯಾಗಿದೆ.
ಹಲ್ಲೆಯಿಂದ ಅಸ್ವಸ್ಥರಾಗಿದ್ದ ಮಹಿಳೆಯನ್ನು ಕಡೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗುರುವಾರ ಗ್ರಾಮದಲ್ಲಿ ಪಾಳು ಬಿದ್ದಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ತೋಟದ ಮಾರ್ಗವಾಗಿ ಬೇರೆ ಜಾಗಕ್ಕೆ ಹೋಗುತ್ತಿದ್ದ ವೇಳೆ ತೋಟದ ಮಾಲಕ ನವೀನ್ ಎಂಬಾತ ಮಹಿಳೆಯನ್ನು ಅಡ್ಡ ಹಾಕಿ ಮಹಿಳೆಯ ಕೈಯಲ್ಲಿದ್ದ ತೆಂಗಿನಕಾಯಿ ನೋಡಿ, ಅಶ್ಲೀಲವಾಗಿ ನಿಂದಿಸಿದ್ದಲ್ಲದೆ ತನ್ನ ತೋಟದಿಂದಲೇ ತೆಂಗಿನಕಾಯಿ ಕದ್ದಿದ್ದಾಳೆಂದು ಆರೋಪಿಸಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ನವೀನ್ ಜೊತೆ ಸ್ನೇಹಿತರಾದ ಕಲ್ಲೇಶ್, ದೀಪು ಎಂಬವರೂ ಮಹಿಳೆ ಮೇಲೆ ಹಲ್ಲೆಗೈದು ಆಕೆೆಯ ಬಟ್ಟೆ ಹರಿದು ಹಾಕಿ ನೆಲಕ್ಕೆ ಕೆಡವಿಕೊಂಡು ತುಳಿದಿದ್ದಾರೆಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಮೂವರ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆಂದು ತಿಳಿದು ಬಂದಿದೆ.