ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಸರ್ವೇಯರ್‌ಗಳು ಲೋಕಾಯುಕ್ತ ಬಲೆಗೆ
ಚಿಕ್ಕಮಗಳೂರು: ಕೃಷಿ ಜಮೀನಿನ ಸರ್ವೇ ನಡೆಸಿ ಸ್ಕೆಚ್ ತಯಾರಿಸಲು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹2 ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಸರ್ವೇ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಸರ್ವೇಯರ್‌ಗಳಾದ ದೊರೆರಾಜ್ ಮತ್ತು ರಂಗನಾಥ್ ಲೋಕಾಯುಕ್ತ ಬಲೆಗೆ ಬಿದ್ದವರು. ನಗರದ ಹೊರವಲಯದ ಇಂದಾವರ ಗ್ರಾಮದ ನಿವಾಸಿ ಧರಣೇಶ್ ಎಂಬವರು ತಮ್ಮ ಕೃಷಿ ಜಮೀನಿನ ಸರ್ವೇ ನಡೆಸುವಂತೆ ಕೋರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಈ ವೇಳೆ ಸರ್ವೇ ಮಾಡಿ ಸ್ಕೆಚ್ ತಯಾರಿಸಲು ಇಬ್ಬರು ಅಧಿಕಾರಿಗಳು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಧರಣೇಶ್ ಅವರು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಆರೋಪಿಗಳು ತಮ್ಮ ಖಾಸಗಿ ಕಚೇರಿಯಲ್ಲಿ ₹2 ಲಕ್ಷ ಮುಂಗಡ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ಪಿ ಪಿ. ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.