Chikkamagaluru | ಮೂಡಿಗೆರೆಯಲ್ಲಿ ಕಾಡಾನೆಗಳ ಹಾವಳಿ: ಮೂರು ಎಕರೆ ಭತ್ತದ ಗದ್ದೆ ಸಂಪೂರ್ಣ ನಾಶ
ಚಿಕ್ಕಮಗಳೂರು : ಕಾಡಾನೆಗಳ ಹಿಂಡು ದಾಳಿ ನಡೆಸಿ ಮೂರು ಎಕರೆ ಭತ್ತದ ಗದ್ದೆಯನ್ನು ಸಂಪೂರ್ಣ ನಾಶಪಡಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ನಿರಂತರ ಹಾವಳಿಯಿಂದ ಕಾಫಿನಾಡಿನ ಮೂಡಿಗೆರೆ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಾಗಲಾಪುರದ ಸುಪ್ರಿತ್ ಅವರಿಗೆ ಸೇರಿದ ತೋಟ ಹಾಗೂ ಭತ್ತದ ಗದ್ದೆಗೆ ನುಗ್ಗಿದ ಕಾಡಾನೆಗಳ ಹಿಂಡು ಬೆಳೆಗಳನ್ನು ತುಳಿದು ನಾಶಪಡಿಸಿದೆ. ಗದ್ದೆಯ ಸ್ಥಿತಿ ಕಂಡು ರೈತರು ಕಂಗಾಲಾಗಿದ್ದು, ಕೈಗೆ ಬಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವಂತಾಗಿದೆ.
ಈಗಾಗಲೇ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳು ಸಾಕಷ್ಟು ದಾಂಧಲೆ ನಡೆಸಿದ್ದು, ಕಾಫಿ ತೋಟಗಳು ಹಾಗೂ ಭತ್ತದ ಗದ್ದೆಗಳಿಗೆ ಭಾರೀ ಹಾನಿ ಉಂಟುಮಾಡಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಮತ್ತು ಭತ್ತದ ಬೆಳೆ ನಾಶವಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಪ್ರಸ್ತುತ 39 ಕಾಡಾನೆಗಳು ನಾಲ್ಕು ಗುಂಪುಗಳಾಗಿ ಬೇರ್ಪಟ್ಟು ಸಂಚರಿಸುತ್ತಿವೆ ಎನ್ನಲಾಗಿದ್ದು, ಈ ಗುಂಪುಗಳ ಸಂಚಾರ ಮಾರ್ಗದಲ್ಲಿರುವ ಗ್ರಾಮಗಳ ಜನರಲ್ಲಿ ಆತಂಕ ಮನೆಮಾಡಿದೆ. ಕಾಡಾನೆಗಳ ಹಾವಳಿ ಮುಂದುವರಿದರೆ ಕೃಷಿ ಚಟುವಟಿಕೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರುವ ಭೀತಿ ಎದುರಾಗಿದೆ.
ರೈತರ ಬೆಳೆಗಳಿಗೆ ನಿರಂತರ ಹಾನಿಯಾಗುತ್ತಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಜನರು ತಾಳ್ಮೆ ಕಳೆದುಕೊಳ್ಳುವ ಮುನ್ನ ಸರ್ಕಾರ ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿ ನಿಯಂತ್ರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.