×
Ad

ಸಂಸೆ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಛತೆ | ಕ್ರಮ ಕೈಗೊಳ್ಳುವಲ್ಲಿ ಗ್ರಾಪಂ ನಿರ್ಲಕ್ಷ್ಯ: ಆರೋಪ

Update: 2026-01-13 00:11 IST

ಚಿಕ್ಕಮಗಳೂರು, ಜ.12: ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದ ಎಲ್ಲೆಡೆ ಕಸದ ರಾಶಿಗಳು ಕಂಡು ಬರುತ್ತಿದ್ದು, ತ್ಯಾಜ್ಯದ ರಾಶಿಗಳನ್ನು ತೆರವುಗೊಳಿಸಿ ಗ್ರಾಮದಲ್ಲಿ ಶುಚಿತ್ವ ಕಾಪಾಡಬೇಕಾದ ಸ್ಥಳೀಯ ಗ್ರಾಮ ಪಂಚಾಯತ್ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಂಸೆ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಸದ ರಾಶಿಗಳನ್ನು ತೆರವು ಮಾಡದ ಪರಿಣಾಮ ಸದ್ಯ ಇಡೀ ಗ್ರಾಮ ಅಶುಚಿತ್ವದ ಬೀಡಾಗಿ ಮಾರ್ಪಟ್ಟಿದೆ. ಕಸ, ತ್ಯಾಜ್ಯದ ರಾಶಿಗಳಿಂದಾಗಿ ಇಡೀ ಗ್ರಾಮ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕ ಗ್ರಾಮಸ್ಥರದ್ದಾಗಿದೆ.

ಕಸದ ರಾಶಿಗಳನ್ನು ಪ್ರತಿದಿನ ತೆರವು ಮಾಡಬೇಕಾದ ಗ್ರಾಪಂ ಆಡಳಿತ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು, ಕಸ ತೆರವಿಗೆ ಮನವಿ ಮಾಡಿದರೂ ಗ್ರಾಪಂ ಆಡಳಿತ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯತ್ ಇನ್ನಾದರೂ ಗ್ರಾಮದಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡು ಬಿದ್ದಿರುವ ಕಸದ ರಾಶಿಗಳನ್ನು ಕೂಡಲೇ ತೆರವು ಮಾಡಬೇಕು, ತಪ್ಪಿದಲ್ಲಿ ಸಾರ್ವಜನಿಕರು ಸೇರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ರೋಗಗಳಿಗೆ ತುತ್ತಾಗುವ ಭೀತಿ

ಕಸ, ತ್ಯಾಜ್ಯದ ರಾಶಿಗಳಿಂದಾಗಿ ಎಲ್ಲೆಡೆ ಗಬ್ಬು ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗುಮುಚ್ಚಿ ಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಸರಕಾರಿ ಶಾಲೆ ಎದುರು ಕಳೆದೊಂದು ವಾರದಿಂದ ಕಸದ ರಾಶಿ ಹರಡಿಕೊಂಡು ಬಿದ್ದಿದ್ದು, ಪರಿಣಾಮ ಶಾಲಾ ಮಕ್ಕಳಲ್ಲೂ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News