×
Ad

Chikkamagaluru | ಮೇಲ್ವರ್ಗದವರಿಂದ ದಲಿತರ ಭೂಮಿ ಕಬಳಿಸಲು ಯತ್ನ: ಆರೋಪ

Update: 2026-01-13 23:51 IST

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಹೋಬಳಿ, ಸತ್ತಿಹಳ್ಳಿ ಗ್ರಾಮದ ಸರ್ವೇ ನಂಬರ್ 162ರ ಗೋಮಾಳ ಜಾಗದಲ್ಲಿ 21 ಜನ ದಲಿತರಿಗೆ 84 ಎಕರೆ ಜಮೀನು 1984-85ನೇ ಸಾಲಿನಲ್ಲಿ ಮಂಜೂರು ಮಾಡಲಾಗಿದ್ದು, ಅದರಂತೆ ಆ ಜಾಗದಲ್ಲಿ ದಲಿತರು ಸ್ವಾಧೀನದಲ್ಲಿದ್ದಾರೆ. ಆದರೆ ಈ ದಲಿತರಿಗೆ ಮೇಲ್ವರ್ಗದವರು ವಿನಾಃ ಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದಿಂದ ಜಮೀನಿನಲ್ಲಿ ದಲಿತರಿಗೆ ಉತ್ತಮ ರೀತಿಯಲ್ಲಿ ಸಾಗುವಳಿ ಮಾಡಲು ಆಗಿಲ್ಲ. ಕೆಲವರು ಉತ್ತಮ ರೀತಿಯಲ್ಲಿ ಸಾಗುವಳಿ ಮಾಡಿಕೊಂಡು ಜಮೀನಿಗೆ ಕಾಫಿ ಮತ್ತು ಅಡಿಕೆ ಗಿಡಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.

ದಲಿತರ ಸ್ವಾಧೀನದಲ್ಲಿರುವ ತೋಟದಲ್ಲಿ ದಲಿತರಿಲ್ಲದ ಸಮಯದಲ್ಲಿ ಅಲಸುಗೆ ಗ್ರಾಮದ ಮೇಲ್ವರ್ಗದವರು ತೋಟಕ್ಕೆ ಅಕ್ರಮವಾಗಿ ನುಗ್ಗಿ ಕಾಫಿ ಮತ್ತು ಅಡಿಕೆ ಗಿಡಗಳನ್ನು ಕಿತ್ತು ಬಿಸಾಡಿದ್ದು, ವಿಷಯ ತಿಳಿದ ದಲಿತರು ಗಿಡ ಕಿತ್ತ ವಿಷಯವಾಗಿ ಮೇಲ್ವರ್ಗದವರನ್ನು ಪ್ರಶ್ನೆ ಮಾಡಿದ್ದಕ್ಕೆ ದಲಿತರ ಮೇಲೆ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂರು ತಿಂಗಳಾದರೂ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ಆಗಿಲ್ಲ. ಸಂತ್ರಸ್ತ ದಲಿತರಿಗೆ ನ್ಯಾಯ ಸಿಗುವವರೆಗೂ ದಲಿತ ಸಂಘರ್ಷ ಸಮಿತಿ ಚಳವಳಿ ರೂಪಿಸಲು ಮುಂದಾಗಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ ಬಾಚಿಗನಹಳ್ಳಿ, ಪೂರ್ಣೇಶ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News