×
Ad

Mudigere | ಮುತ್ತಿಗೆಪುರ ಸರಕಾರಿ ಶಾಲೆ ಮಕ್ಕಳಿಗೆ ವಿಮಾನಯಾನ ಭಾಗ್ಯ; ವಿದ್ಯಾರ್ಥಿಗಳ ಕನಸು ನನಸು ಮಾಡಿದ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು

Update: 2026-01-08 23:16 IST

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಯನ್ನೂ ಮೀರುವಂತೆ ವಿಭಿನ್ನ ಕಾರ್ಯವನ್ನು ಮಾಡಿದ್ದು, ಶಾಲೆಯ 32 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ಅನುಭವ ನೀಡುವ ಮೂಲಕ ಸರಕಾರಿ ಶಾಲೆಯೊಂದು ಏರ್ ಟೂರ್ ಕರೆದುಕೊಂಡು ಹೋಗಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜ.7ರಂದು ಮುತ್ತಿಗೆಪುರ ಸರಕಾರಿ ಶಾಲೆಯಿಂದ ಹೊರಟ 32 ಮಕ್ಕಳು ಶಿಕ್ಷಕರೊಡನೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ತಲುಪಿ ಅಲ್ಲಿಂದ ವಿಮಾನ ಏರಿ ಬೆಂಗಳೂರು ತಲುಪಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣವನ್ನು ವೀಕ್ಷಿಸಿ ಅಲ್ಲಿಂದ ವಿಧಾನಸೌಧವನ್ನು ಕಣ್ತುಂಬಿಕೊಂಡಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ, ಬೆಂಗಳೂರು ಪ್ಯಾಲೇಸ್, ತಾರಾಲಯ ವೀಕ್ಷಿಸಿ ಅಲ್ಲಿಂದ ಅಂದು ರಾತ್ರಿ ವಾಹನದಲ್ಲಿ ಮುತ್ತಿಗೆಪುರ ಗ್ರಾಮವನ್ನು ತಲುಪಿದ್ದಾರೆ. ಈ ಮೂಲಕ ಏರ್ ಟೂರ್‌ನ ಅನುಭವವನ್ನು ಮಕ್ಕಳು ತಮ್ಮದಾಗಿಸಿಕೊಂಡಿದ್ದಾರೆ.

 

ವಿಮಾನ ಏರಿ ಪ್ರಯಾಣಿಸಬೇಕೆಂಬುದು ಮಕ್ಕಳ ಬಹುದಿನಗಳ ಕನಸಾಗಿತ್ತು. ನಾವೂ ವಿಮಾನದಲ್ಲಿ ಪ್ರಯಾಣಿಸಬೇಕೆಂಬ ತಮ್ಮ ಕನಸನ್ನು ಮಕ್ಕಳು ಶಿಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಮಕ್ಕಳ ಕನಸನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ದಾನಿಗಳು ಆರ್ಥಿಕ ನೆರವು ನೀಡಿದ್ದು 2 ಲಕ್ಷ ರೂ. ವೆಚ್ಚದಲ್ಲಿ ಏರ್ ಟೂರ್ ಆಯೋಜಿಸಿ ಮಕ್ಕಳ ಕನಸನ್ನು ನನಸು ಮಾಡಿದ್ದಾರೆ. ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಕ ಸಂತೋಷ್ 10 ವಿದ್ಯಾರ್ಥಿಗಳ ಖರ್ಚು ವೆಚ್ವವನ್ನು ನೀಡಿದ್ದಾರೆ. ಒಟ್ಟಾರೆ ಎಳೆಯ ಮಕ್ಕಳ ಬಹುದಿನಗಳ ಕನಸು ಈ ಸರಕಾರಿ ಶಾಲೆ ನನಸಾಗಿಸಿದೆ.

ಶಾಲೆಯಲ್ಲಿ 422 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 5, 6, 7ನೇ ತರಗತಿಯ 32 ಮಕ್ಕಳನ್ನು ಪೋಷಕರ ಒಪ್ಪಿಗೆಯ ಮೇರೆಗೆ ಈ ಏರ್ ಟೂರ್‌ಗೆ ಆಯ್ಕೆ ಮಾಡಲಾಗಿದೆ. ಶಾಲೆಯ ಈ ವಿಭಿನ್ನ ಪ್ರಯತ್ನಕ್ಕೆ ಗ್ರಾಮ ಪಂಚಾಯತ್, ಡಿಡಿಪಿಐ ತಿಮ್ಮರಾಜು, ಬಿಇಇ, ಶಿಕ್ಷಣ ಇಲಾಖೆಯೂ ಸಹಕಾರ ನೀಡಿದೆ ಎಂದು ಇಲ್ಲಿನ ಶಿಕ್ಷಕರು ಸ್ಮರಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಆಸೆ ಮಕ್ಕಳದಾಗಿತ್ತು. ಅವರು ನಮ್ಮೊಂದಿಗೆ ಹಂಚಿಕೊಂಡಾಗ ಏರ್‌ಟೂರ್ ಯೋಜನೆ ರೂಪಿಸಿದೆವು. ಶಿಕ್ಷಕರು, ಎಸ್‌ಡಿಎಂಸಿ ಹಾಗೂ ದಾನಿಗಳ ಸಹಕಾರದಿಂದ ಏರ್‌ಟೂರ್ ಏರ್ಪಡಿಸಲು ಸಾಧ್ಯವಾಯಿತು. 32 ಮಕ್ಕಳು ವಿಮಾನ ಪ್ರಯಾಣದ ಅನುಭವ ಪಡೆದುಕೊಂಡರು. ಮಕ್ಕಳಿಗೆ ವಿಭಿನ್ನವಾದ ಅನುಭವ ಹೊಂದಬೇಕೆಂಬ ಉದ್ದೇಶದಿಂದ ಏರ್‌ಟೂರ್ ಆಯೋಜನೆ ಮಾಡಲಾಗಿತ್ತು. ಮಕ್ಕಳ ಕನಸು ನನಸಾಗುವ ಜತೆಗೆ ಒಂದೊಳ್ಳೇ ಅನುಭವವನ್ನು ಪಡೆದುಕೊಂಡರು.

ಎಸ್.ಭಾರತಿ, ಮುತ್ತಿಗೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕಿ

ಶಿಕ್ಷಣಕ್ಕೆ ಹೆಚ್ಚಿನ ಒತ್ತು :

ಖಾಸಗಿ ಶಾಲೆಗಳು ದಾಖಲಾತಿಗಾಗಿ ವಿಭಿನ್ನವಾದ ಪ್ರಯತ್ನವನ್ನು ಮಾಡುತ್ತಿವೆ. ಆದರೆ, ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಹಿಂದುಳಿದ ವರ್ಗಗಳ ಮಕ್ಕಳಾಗಿದ್ದು, ಅವರಿಗೂ ವಿಭಿನ್ನ ಹಾಗೂ ಹೊಸ ಅನುಭವ ನೀಡುವ ಉದ್ದೇಶದಿಂದ ಏರ್‌ಟೂರ್ ಆಯೋಜಿಸಲಾಗಿತ್ತು. ಈ ಶಾಲೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಪ್ರತಿ ವರ್ಷವೂ ಒಂದೊಂದು ಹೊಸತನವನ್ನು ರೂಪಿಸುತ್ತಿದೆ. ಅದರಂತೆ ಏರ್‌ಟೂರ್ ಮೂಲಕ ಮತ್ತೊಂದು ಹೊಸತನಕ್ಕೆ ನಾಂದಿ ಹಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News