×
Ad

ಮೂಡಿಗೆರೆ | ವಿವಾಹಿತೆಯ ಅನುಮಾನಾಸ್ಪದ ಸಾವು: ಪತಿ, ಅತ್ತೆ, ಮಾವ ಪೊಲೀಸ್ ವಶಕ್ಕೆ

Update: 2024-08-20 10:59 IST

ಮೂಡಿಗೆರೆ, ಆ.20: ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೂಡಿಗೆ ಗ್ರಾಮದಲ್ಲಿ ಸೋಮವಾರ ನಡೆದಿದ್ದು, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.

ಬಾಳೂರು ಹೋಬಳಿ ಮರ್ಕಲ್ ಗ್ರಾಮದ ಪ್ರವೀಣ್ ಎಂಬವರ ಪತ್ನಿ ಸುಬೀಕ್ಷಾ(26) ಮೃತಪಟ್ಟವರು. ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತಳ ತಂದೆ ಚಿನ್ನೇಗೌಡ ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಮಗಳಿಗೆ ಪತಿ, ಮಾವ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ತನ್ನ ಮಗಳ ಸಾವಿನ ಬಗ್ಗೆ ಅನುಮಾನವಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೂರಿನ ಆಧಾರದ ಮೇಲೆ ಬಾಳೂರು ಪೊಲೀಸರು ಮೃತ ಸುಭೀಕ್ಷಾರ ಪತಿ ಎಂ.ಸಿ.ಪ್ರವೀಣ, ಮಾವ ಚಂದ್ರೇಗೌಡ, ಅತ್ತೆ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಕಳಸ ತಾಲ್ಲೂಕು ಸಂಸೆ ಸಮೀಪದ ಮಲವಂತಿಗೆ ಗ್ರಾಮದ ಗುಟ್ಟಿ ಹಡ್ಕ ಊರಿನ ಚಿನ್ನೇಗೌಡರ ಪುತ್ರಿ ಸುಬೀಕ್ಷಾರನ್ನು 2020ರ ಮೇ 29ರಂದು ಬಾಳೂರು ಹೋಬಳಿ ಮರ್ಕಲ್ ಗ್ರಾಮದ ಚಂದ್ರೇಗೌಡರ ಪುತ್ರ ಪ್ರವೀಣ್ ರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 3 ವರ್ಷದ ಮಗುವಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News