×
Ad

ಕೌಟಂಬಿಕ ಸಂಬಂಧ ಬಲಗೊಳಿಸಲು ಫ್ಯಾಮಿಲಿ ಸಂಗಮ ಉತ್ತಮ ವೇದಿಕೆ : ಕೆ.ಮುಹಮ್ಮದ್

Update: 2025-05-13 22:22 IST

ಮೂಡಿಗೆರೆ : ಆಧುನಿಕತೆಯ ಭರಾಟೆಯಲ್ಲಿ ಕುಟುಂಬಗಳನ್ನು ಮರೆತು ಬಿಡುವ ಕಾಲ ಬಂದು ಬಿಟ್ಟಿದೆ. ಸಮುದಾಯವೊಂದರ ಕೌಟುಂಬಿಕ ಸಂಬಂಧಗಳನ್ನು ಬಲಗೊಳಿಸಲು ಫ್ಯಾಮಿಲಿ ಸಂಗಮದಂತಹ ವೇದಿಕೆಗಳು ಅತ್ಯುತ್ತಮ ವೇದಿಕೆಯಾಗಿವೆ ಎಂದು ಕರ್ನಾಟಕ ಬ್ಯಾರಿ ಅಕಾಡಮಿ ಮಾಜಿ ಅಧ್ಯಕ್ಷ ಕೆ.ಮಹಮ್ಮದ್ ಹೇಳಿದ್ದಾರೆ.

ಜಿಲ್ಲಾ ಬ್ಯಾರಿ ಒಕ್ಕೂಟ ಮತ್ತು ಮಲೆನಾಡು ಗಲ್ಫ್ ಎಜುಕೇಶನ್ ಟ್ರಸ್ಟ್‌ನಿಂದ ತಾಲೂಕಿನ ಬಿದರಹಳ್ಳಿ ಗ್ರಾಮದ ಖಾಸಗಿ ರೆಸಾರ್ಟ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ಬ್ಯಾರಿ ಫ್ಯಾಮಿಲಿ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಆಧುನಿಕತೆಯ ಭರಾಟೆಗೆ ಸಿಲುಕಿರುವ ಜನ ಮೊಬೈಲ್, ಕಂಪ್ಯೂಟರ್ ಮತ್ತು ಟಿವಿಯಂತಹ ಯಂತ್ರಗಳ ಮೊರೆ ಹೋಗಿದ್ದಾರೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ಪರಿಚಯವನ್ನು ಮರೆತು ಬಿಡುವ ಕಾಲ ಬಂದಿದೆ. ಕುಟುಂಬದೊಳಗಿನ ಸಂಬಂಧವನ್ನು ಗಟ್ಟಿಗೊಳಿಸಬೇಕು. ಎಲ್ಲ ಧರ್ಮದಲ್ಲಿರುವ ಸಂಘಟನೆಗಳೂ ಫ್ಯಾಮಿಲಿ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹಾಗಾದರೆ ಮಾತ್ರ ಸಂಬಂಧಗಳು ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಬ್ಯಾರಿ ಒಕ್ಕೂಟದ ಅಧ್ಯಕ್ಷ ಟಿ.ಎಂ.ನಾಸೀರ್ ಮಾತನಾಡಿ, ಹಿಂದಿನ ಕಾಲದಲ್ಲಿ ಬಡತನ ಇದ್ದ ಕಾರಣ ಶಿಕ್ಷಣ ಮತ್ತು ಆಹಾರ, ವಸ್ತ್ರದ ಕೊರತೆ ಇತ್ತು. ಆದರೂ ಆಗ ಸಂಬಂಧಗಳು ಗಟ್ಟಿಯಾಗಿದ್ದವು. ಈಗ ಆ ಕಾಲ ಮರೆಯಾಗಿ ಪ್ರತಿಯೊಬ್ಬರೂ ಶಿಕ್ಷಣದಲ್ಲಿ ಮುಂದುವರಿದಿದ್ದಾರೆ. ಆದರೆ, ಕುಟುಂಬ ಸಂಬಂಧ ಮಾತ್ರ ಕಣ್ಮರೆಯಾಗುತ್ತಿದೆ. ಅದನ್ನು ಮರು ಸ್ಥಾಪಿಸಬೇಕು. ಅದಕ್ಕಾಗಿ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದರು.

ಮಲೆನಾಡು ಗಲ್ಪ್ ಎಜುಕೇಶನ್ ಟ್ರಸ್ಟ್ ರಾಷ್ಟ್ರೀಯ ಅಧ್ಯಕ್ಷ ಅಕ್ರಂ ಹಾಜಿ ಮಾತನಾಡಿ, ಗಲ್ಫ್ ರಾಷ್ಟ್ರಗಳಲ್ಲಿರುವ ಉದ್ಯೋಗಿಗಳು ಮತ್ತು ಭಾರತೀಯರು ಒಂದಾಗಿ ಟ್ರಸ್ಟ್ ರಚಿಸಿದ್ದಾರೆ. ಟ್ರಸ್ಟ್ ಮೂಲಕ ಸಮುದಾಯದ ಬಡವರ ಕಣ್ಣೀರೊರೆಸುವ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಟುಂಬ ಪರಿಚಯ, ಸಂಬಂಧಗಳನ್ನು ಗಟ್ಟಿಗೊಳಿಸುವ ವಿಧಾನದ ಬಗ್ಗೆ ಮಾಹಿತಿ, ಮಕ್ಕಳ ಕಲರವ, ಮಡಕೆ ಒಡೆಯುವ ಸ್ಪರ್ಧೆ, ಬ್ಯಾರಿ ಹಾಡು, ಮ್ಯೂಸಿಕಲ್ ಚೇರ್, ಹಗ್ಗಜಗ್ಗಾಟ, ಪಾಸಿಂಗ್ ದ ಬಾಲ್, ಕ್ವಿಝ್ ಸೇರಿದಂತೆ ಅನೇಕ ಚಟುವಟಿಕೆಗಳು ನಡೆದವು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಕರ್ನಾಟಕ ಬ್ಯಾರಿ ಅಕಾಡಮಿ ಸದಸ್ಯ ಬಿ.ಎಸ್.ಮಹಮ್ಮದ್, ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್, ಮುಖಂಡರಾದ ಕಲಂದರ್ ಹಾಜಿ, ಅಬ್ಬಾಸ್ ಬಕ್ರಳ್ಳಿ, ಎಚ್.ಯು.ಫಾರೂಕ್, ವಾಹಿದ್ ಮಾಗುಂಡಿ, ಅಬೂಬಕ್ಕರ್ ಸಿದ್ದೀಕ್, ಸಿ.ಕೆ.ಇಬ್ರಾಹಿಂ, ಬಿ.ಎಚ್.ಮುಹಮ್ಮದ್, ಅಲ್ತಾಫ್ ರೆಹಮಾನ್, ಪಿ.ಕೆ.ಹಮೀದ್, ಮೊಯ್ದಿನ್ ಶೇಟ್, ಬಿ.ಎ.ಉಮರ್, ಇಬ್ರಾಹಿಂ ಆಲ್ದೂರು, ಇಸಾಕ್ ಭೂತನಕಾಡು, ಫಾರೂಕ್ ಬಣಕಲ್, ಪಿ.ಕೆ.ಹನೀಫ್ ಮತ್ತಿತರರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News