ಕುದುರೆಮುಖ ರಾಷ್ಟ್ರೀಯ ಉದ್ಯಾನವನ : ಪುನರ್ವಸತಿ ಪ್ಯಾಕೇಜ್ ನೀಡಲು ಸರಕಾರದ ಸಮ್ಮತಿ
ಸಂತ್ರಸ್ತರ ದಶಕಗಳ ಅರಣ್ಯರೋದನಕ್ಕೆ ಮುಕ್ತಿ ಸಿಗುವ ಭರವಸೆ
ಚಿಕ್ಕಮಗಳೂರು, ಡಿ.12: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಇಲ್ಲಿನ ಜನವಸತಿ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಶಾಶ್ವತವಾಗಿ ತಡೆಗಟ್ಟಲು ಪುನರ್ವಸತಿ ಕಲ್ಪಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ 1,382 ಕುಟುಂಬಗಳಲ್ಲಿ 550 ಕುಟುಂಬಗಳು ಅರ್ಜಿ ಸಲ್ಲಿಸಿದ್ದವು. 253 ಕುಟುಂಬಗಳು ಪುನರ್ವಸತಿ ಪ್ಯಾಕೇಜ್ ಪಡೆದುಕೊಂಡಿದ್ದು, 297 ಕುಟುಂಬಗಳು ಪುನರ್ವಸತಿ ಪ್ಯಾಕೇಜ್ ನಿರೀಕ್ಷೆಯಲ್ಲಿದ್ದವು. ಬೆಳಗಾವಿಯಲ್ಲಿ ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಇವರಿಗೆ ಪುನರ್ವಸತಿ ಪ್ಯಾಕೇಜ್ ನೀಡಲು ಸರಕಾರ ಸಮ್ಮತಿ ಸೂಚಿಸಿದ್ದು, ಇದು ಇಲ್ಲಿನ ಜನರಿಗೆ ಎರಡು ದಶಕಗಳ ಅರಣ್ಯರೋದನದಿಂದ ಮುಕ್ತಿ ಸಿಗುವ ಭರವಸೆ ಸಿಕ್ಕಿದೆ.
ಇತ್ತೀಚೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಗದ್ದೆಯಲ್ಲಿ ಉಮೇಶ್ ಮತ್ತು ಹರೀಶ್ ಎಂಬವರನ್ನು ಕಾಡಾನೆ ತುಳಿದು ಸಾಯಿಸಿದ ಬಳಿಕ ಇಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸಿ ಮಾನವ ಮತ್ತು ಪ್ರಾಣಿ ಸಂಘರ್ಷ ಶಾಶ್ವತವಾಗಿ ತಡೆಗಟ್ಟಬೇಕು ಎಂಬ ಕೂಗು ಜೋರಾಗಿತ್ತು. ಅಲ್ಲದೆ, ಬೃಹತ್ ಮಟ್ಟದ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲಾಗಿತ್ತು. ಕಳೆದೆರಡು ದಶಕಗಳಿಂದ ದಿನನಿತ್ಯ ವನ್ಯಜೀವಿಗಳ ಜತೆ ಸಂಘರ್ಷದ ಬದುಕು ಸಾಗಿಸುತ್ತಾ ಅರಣ್ಯದಲ್ಲಿ ಯಾವುದೇ ಸೌಲಭ್ಯವಿಲ್ಲದೆ ಕುಟುಂಬದ ಸದಸ್ಯರು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದರು. ಪುನರ್ವಸತಿಗೆ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರಕ್ಕೆ ಕಾಯುತ್ತಿದ್ದರು.
5 ವರ್ಷದಲ್ಲಿ ಪುನರ್ವಸತಿ ಯೋಜನೆ ವೇಗ ಕಳೆದುಕೊಂಡು ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದ ಕುಟುಂಬಗಳು ಕಾಡಾನೆಗಳ ಹಾವಳಿ, ಅರಣ್ಯ ಇಲಾಖೆ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. ಪುನರ್ವಸತಿ ಕಲ್ಪಿಸಲು ಉನ್ನತ ಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು ಸ್ಥಳೀಯರು ಆರೋಪಿಸಿದ್ದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿನ ಕುಟುಂಬಗಳಿಗೆ ಪುನರ್ವಸತಿಗೆ ತುರ್ತು ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ದರ ನಿಗದಿಪಡಿಸಿ ಸೂಕ್ತ ಪರಿಹಾರ ಕೊಡಬೇಕು. ನಿರ್ದಿಷ್ಟ ಸಮಯದಲ್ಲಿ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ನೀಡಲು ಕ್ರಮ ವಹಿಸಬೇಕು. ವನ್ಯಜೀವಿ-ಮಾನವ ಸಂಘರ್ಷ ತಪ್ಪಿಸಲು ಮುಂದಾಗಬೇಕೆಂದು ಇಲ್ಲಿನ ನಿವಾಸಿಗಳು ಸರಕಾರವನ್ನು ಆಗ್ರಹಿಸಿದ್ದರು.
ಬೆಳಗಾವಿಯಲ್ಲಿ ಸದ್ಯ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಲ್ಲಿನ ಅತಂತ್ರ ನಿವಾಸಿಗಳ ಕುರಿತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮತ್ತು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿಷಯ ಪ್ರಸ್ತಾವಿಸಿ ಅಧಿವೇಶನದ ಗಮನ ಸೆಳೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ, 314 ಕುಟುಂಬಗಳಿಗೆ 300 ಕೋಟಿ ರೂ. ವೆಚ್ಚದಲ್ಲಿ ಪುನರ್ವಸತಿ ಕಲ್ಪಿಸಲು ಸರಕಾರ ಸಿದ್ಧವಿದೆ ಎಂದು ಉತ್ತರಿಸಿದ್ದಾರೆ.
356 ಕುಟುಂಬಗಳಿಗೆ ಈ ಹಿಂದೆ 142 ಕೋಟಿ ರೂ. ಪರಿಹಾರ ನೀಡಿ ಸ್ಥಳಾಂತರ ಮಾಡಲಾಗಿದೆ. 314 ಕುಟುಂಬಗಳಿಗೆ 300 ಕೋಟಿ ರೂ. ಪರಿಹಾರ ನೀಡಿ ಪುನರ್ವಸತಿ ಕಲ್ಪಿಸಲು ಸರಕಾರ ಸಿದ್ಧವಿದೆ. ಉದ್ಯಾನವನದಿಂದ ಹೊರಬರಲು ಇಚ್ಛಿಸಿದ ಕುಟುಂಬ ತಹಶೀಲ್ದಾರ್ ಅಧ್ಯಕ್ಷತೆಯ ಸಮಿತಿಗೆ ಅರ್ಜಿ ಸಲ್ಲಿಸಬೇಕು. ಕುಟುಂಬ ವಾಸವಿದ್ದ ಮನೆ, ಜಮೀನು ಮೌಲ್ಯ ನಿರ್ಣಯಿಸಿ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಗೆ ವರದಿ ಸಲ್ಲಿಸುತ್ತಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಪರಿಹಾರ ನಿಗದಿಪಡಿಸಿದ ಹಣ ಬಿಡುಗಡೆಗೆ ಸರಕಾರಕ್ಕೆ ಶಿಫಾರಸು ಮಾಡುತ್ತದೆ. 2025ರ ಲೋಕೋಪಯೋಗಿ ಮತ್ತು ಕಂದಾಯ ಇಲಾಖೆ ಪ್ರಮಾಣಿತ ದರದಲ್ಲಿ ಪರಿಹಾರ ವಿತರಣೆಗೆ ಸರಕಾರ ಕ್ರಮ ಕೈಗೊಳ್ಳಲಿದೆ.
-ಈಶ್ವರ್ ಖಂಡ್ರೆ, ಅರಣ್ಯ ಸಚಿವ
ಶೃಂಗೇರಿ ತಾಲೂಕಿನ 76 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 22.32 ಕೋಟಿ ರೂ. ಪ್ರಸ್ತಾವವನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸರಕಾರ ಪ್ರಮಾಣಿತ ದರದಂತೆ 1:4 ಅನುಪಾತದಲ್ಲಿ ನಿರಾಶ್ರಿತರಿಗೆ ಪರಿಹಾರ ನೀಡಬೇಕು.
-ಟಿ.ಡಿ.ರಾಜೇಗೌಡ, ಶೃಂಗೇರಿ ಶಾಸಕ
ಕುದುರೆಮುಖ ಅರಣ್ಯದಲ್ಲಿ ವಾಸಿಸುವ ಕುಟುಂಬಗಳಿಗೆ ಶೀಘ್ರವೇ ಪುನರ್ವಸತಿ ಕಲ್ಪಿಸಬೇಕು. ಭೂಮಿ ಕಳೆದುಕೊಂಡವರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಇಂದಿನ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು.
-ಆರಗ ಜ್ಞಾನೇಂದ್ರ, ತೀರ್ಥಹಳ್ಳಿ ಶಾಸಕ
ಪುನರ್ವಸತಿಗೆ ಬೇಕು 600 ಕೋ. ರೂ. :
ಉದ್ಯಾನವನ ವ್ಯಾಪ್ತಿಯಲ್ಲಿನ ಕುಟುಂಬಗಳ ಸಂಪೂರ್ಣ ಪುನರ್ವಸತಿಗೆ 600 ಕೋಟಿ ರೂ. ಬೇಕಿದೆ. ಕೇಂದ್ರ ಸರಕಾರ ಕ್ಯಾಂಪಾ ನಿಧಿಯಲ್ಲಿ ರಾಜ್ಯ ಸರಕಾರಕ್ಕೆ ಸಂಬಂಧಿಸಿದ 1,400 ಕೋಟಿ ಹಣವಿದ್ದು, ಅನುದಾನ ಒದಗಿಸುವಂತೆ ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಸರಕಾರ ಕೋರಿದೆ. ಅನುದಾನ ದೊರೆತರೆ ಎಲ್ಲ ಕುಟುಂಬಗಳ ಸ್ಥಳಾಂತರವಾಗಲಿದೆ.