ಹೊಸ ವರ್ಷಾಚರಣೆ | ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ
ಚಿಕ್ಕಮಗಳೂರು : ಹೊಸ ವರ್ಷದ ಆಚರಣೆಗೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದ್ದು, ಅಹಿತಕರ ಘಟನೆಗಳ ನಿಯಂತ್ರಣದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ, ಕೆಮ್ಮಣ್ಣುಗುಂಡಿ, ಎತ್ತಿನಭುಜ, ದೇವರಮನೆ, ಡೈಮಂಡ್ ಫಾಲ್ಸ್, ರಾಣಿಝರಿ, ಬಲ್ಲಾಳರಾಯನದುರ್ಗ, ಬಂಡಾಜೆ ಫಾಲ್ಸ್, ಕೂಡಿಗೆ ಫಾಲ್ಸ್, ಕ್ಯಾತನಮಕ್ಕಿ, ರುದ್ರಪಾದ ತೂಗುಸೇತುವೆ, ಅಬ್ಬುಗುಡಿಗೆ ಫಾಲ್ಸ್, ಅಯ್ಯನಕೆರೆ, ಮದಗದ ಕೆರೆ, ಕಲ್ಲತ್ತಿಗಿರಿ, ಹೆಬ್ಬೆ ಫಾಲ್ಸ್ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಯನ್ನು ಡಿ.31ರ ಸಂಜೆ 6 ರಿಂದ ಜ.1ರ ಬೆಳಗ್ಗೆ 6 ರವರೆಗೆ ನಿರ್ಬಂಧ ಹೇರಲಾಗಿದೆ.
ನಿಷೇದಿತ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿರುವ ಹೋಮ್ ಸ್ಟೇ, ರೆಸಾರ್ಟ್‍ಗಳಲ್ಲಿ ಈಗಾಗಲೇ ಆನ್‍ಲೈನ್ ಮೂಲಕ ನೋಂದಣಿ ಮಾಡಿಸಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಎಲ್ಲಾ ಪ್ರವಾಸಿ ತಾಣ ಹಾಗೂ ಮಾರ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಕುಡಿದ ಮತ್ತಿನಲ್ಲಿ ಯಾವುದೇ ಅನಾಹುತ ಸಂಭವಿಸಬಾರದು ಎನ್ನುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಮನವಿ ಮೇರೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ನಿರ್ಬಂಧ ಆದೇಶ ಹೊರಡಿಸಿದ್ದಾರೆ.