×
Ad

ಶೃಂಗೇರಿ | ಅಂಚೆಮತ ಮರುಎಣಿಕೆ ಪ್ರಕರಣ: ಜುಲೈ 23ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ರಾಜೇಗೌಡ ಶಾಸಕರಾಗಿ ಮುಂದುವರಿಕೆ

Update: 2026-05-21 13:10 IST

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರುಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಗುರುವಾರ ವಿಚಾರಣೆ ನಡೆದಿದ್ದು, ಯಥಾಸ್ಥಿತಿ ಮುಂದುವರಿಸಲು ತಿಳಿಸಿ ಮುಂದಿನ ವಿಚಾರಣೆಯನ್ನು ಜುಲೈ 23ಕ್ಕೆ ಕಾಯ್ದಿರಿಸಿದೆ. ಅಲ್ಲಿಯವರೆಗೂ ಶಾಸಕ ಟಿ.ಡಿ.ರಾಜೇಗೌಡರ ಶಾಸಕ ಸ್ಥಾನ ಅಬಾಧಿತವಾಗಿರಲಿದೆ.

ಮೇ 2ರಂದು ನಡೆದ ಮರು ಮತ ಎಣಿಕೆ ವೇಳೆ ಅಂಚೆ ಮತಪತ್ರ ತಿರುಚಲಾಗಿದೆ ಎಂದು ಆರೋಪಿಸಿ, ಜೊತೆಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕಾಂಗ್ರೆಸ್ನ ಟಿ.ಡಿ.ರಾಜೇ ಗೌಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಮೇ 11ರಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮರು ಮತ ಎಣಿಕೆ ಪ್ರಕ್ರಿಯೆ ಮತ್ತು ಫಲಿತಾಂಶಕ್ಕೆ ಮಧ್ಯಂತರ ತಡೆ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮತ್ತು ಮರು ಎಣಿಕೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಸೂಚಿಸಿತ್ತು. ಇದರಿಂದಾಗಿ ರಾಜೆಗೌಡ ಅವರ ಶಾಸಕತ್ವ ಊರ್ಜಿತಗೊಂಡಿತ್ತು.

ಮೇ 21ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಅದರಂತೆ ಇಂದು ನ್ಯಾ.ಸಂಜಯ್ ಕುಮಾರ್ ಮತ್ತು ನ್ಯಾ.ವಿನೋದ ಚಂದ್ರ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದು ಪ್ರಕರಣದ ವಿಚಾರಣೆಯನ್ನು ಜುಲೈ 23ಕ್ಕೆ ಕ್ಕೆ ಮುಂದೂಡಲಾಗಿದೆ. ಜೊತೆಗೆ ಟಿ.ಡಿ.ರಾಜೇಗೌಡರ ಶಾಸಕತ್ವಕ್ಕೆ ಸಂಬಂಧಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನೂ ವಿಸ್ತಿರಿಸಿದೆ.

ಅಂಚೆ ಮತ ಮರುಎಣಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದೆ. ಜೊತೆಗೆ ಟಿ.ಡಿ.ರಾಜೇಗೌಡರ ಶಾಸಕತ್ವಕ್ಕೆ ಸಂಬಂಧಿಸಿ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಸಹ ವಿಸ್ತರಿಸಿದೆ. ಹಾಗಾಗಿ ರಾಜೇಗೌಡರೇ ಶಾಸಕರಾಗಿ ಮುಂದುವರೆದಿದ್ದಾರೆ ಹಾಗಾಗಿ ಇನ್ನೂ ಯಾವುದೇ ತೊಂದರೆ ಆಗುವುದಿಲ್ಲ ಎಂದಿನಂತೆ ಎಲ್ಲವೂ ನಡೆಯುತ್ತವೆ. ಚುನಾವಣಾ ಆಯೋಗದ ವರದಿ ಸಲ್ಲಿಕೆ ಮಾಡಿದೆ.

-ಸುಧೀರ್ ಕುಮಾರ್ ಮುರೊಳ್ಳಿ, 
ಕಾಂಗ್ರೆಸ್ ವಕ್ತಾರ
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News