×
Ad

ಚಿತ್ರದುರ್ಗ | ಸಂಸ್ಕೃತ ವೇದಾಧ್ಯಯನ ಶಾಲೆಯ ಮುಖ್ಯ ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ; ಬಂಧನ

Update: 2025-10-21 23:51 IST

ಚಿತ್ರದುರ್ಗ : ಮನೆಗೆ ಫೋನ್ ಕರೆ ಮಾಡಿದ್ದಕ್ಕೆ ಮೂರನೇ ತರಗತಿಯ ವಿದ್ಯಾರ್ಥಿಯೋರ್ವನಿಗೆ ಮುಖ್ಯ ಶಿಕ್ಷಕ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ. ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಂಸ್ಕೃತ, ವೇದ ಅಧ್ಯಯನ ಪಾಠಶಾಲೆಯ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ ಬಂಧಿತ ಆರೋಪಿ. ಈತ ಅದೇ ಶಾಲೆಯಲ್ಲಿ ಕಲಿಯುತ್ತಿದ್ದ 3ನೇ ತರಗತಿಯ ವಿದ್ಯಾರ್ಥಿಗೆ ಥಳಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಹಲ್ಲೆ ಪ್ರಕರಣವು 2025ರ ಫೆಬ್ರವರಿಯಲ್ಲಿ ನಡೆದಿದ್ದು, ಈಗಷ್ಟೇ ವೀಡಿಯೊ ಮೂಲಕ ಬೆಳಕಿಗೆ ಬಂದಿದೆ. ಆದರೂ, ವಿದ್ಯಾರ್ಥಿಯ ಮೇಲೆ ಶಿಕ್ಷಕ ಹಲ್ಲೆ ಮಾಡಿರುವುದು ಅಮಾನವೀಯ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ತಹಶೀಲ್ದಾರ್, ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯ ನಿವಾಹಕ ಅಧಿಕಾರಿಯಿಂದ ಮಾಹಿತಿ ಪಡೆದು, ಆರೋಪಿ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಿ ಆತನ ವಿರುದ್ಧ ನಾಯಕನಹಟ್ಟಿಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಸುಮಾರು 30 ವಿದ್ಯಾರ್ಥಿಗಳು ಸಂಸ್ಕೃತ, ವೇದ ಅಧ್ಯಯನ ಪಾಠ ಕಲಿಯುತ್ತಿದ್ದರು. ಆದರೆ, ಪ್ರಸಕ್ತ ಕೇವಲ 4 ಮಕ್ಕಳು ಮಾತ್ರ ಇದ್ದು, ಹೀಗಾಗಿ ಈ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News