ಚಿತ್ರದುರ್ಗ | ಟ್ರಾಫಿಕ್ ಪೊಲೀಸರ ಕಿರುಕುಳ ಆರೋಪ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ
ಚಿತ್ರದುರ್ಗ: ಟ್ರಾಫಿಕ್ ಪೊಲೀಸರು ಕಿರುಕುಳ ನೀಡಿದರು ಎಂದು ಆರೋಪಿಸಿ, ಆಟೋ ಚಾಲಕನೋರ್ವ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಮಧ್ಯಭಾಗದ ಗಾಂಧಿ ಸರ್ಕಲ್ನಲ್ಲಿ ಶನಿವಾರ ರಾತ್ರಿ ನಡೆದಿದೆ.
ಆತ್ಮಹತ್ಯೆಗೆ ಪ್ರಯತ್ನಿಸಿದ ಆಟೋ ಚಾಲಕನನ್ನು ಮಾಳಪ್ಪನಹಟ್ಟಿ ಗ್ರಾಮದ ತಿಪ್ಪೇಸ್ವಾಮಿ(35) ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಕುಡಿದ ಮದ್ಯ ಮತ್ತಿನಲ್ಲಿ ಆಟೋ ಚಲಾಯಿಸುತ್ತಿದ್ದ ತಿಪ್ಪೇಸ್ವಾಮಿಯನ್ನು ಪೊಲೀಸರು ತಡೆದು ನಿಲ್ಲಿಸಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಇದರಿಂದ ಕೋಪಗೊಂಡ ತಿಪ್ಪೇಸ್ವಾಮಿ, ಆಟೋದಲ್ಲಿದ್ದ ಪೆಟೋಲ್ ಅನ್ನು ತನ್ನ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನೆನ್ನಲಾಗಿದೆ. ಬೆಂಕಿಯಿಂದ ತಿಪ್ಪೇಸ್ವಾಮಿಯ ದೇಹ ಶೇ.70 ರಷ್ಟು ಬೆಂಕಿಯಲ್ಲಿ ಸುಟ್ಟು ಹೋಗಿದೆ.
ಆಟೊ ಚಾಲಕರಿಂದ ಪ್ರತಿಭಟನೆ
ರಾತ್ರಿ ಆಟೋ ಚಾಲಕ ಮತ್ತು ಪೊಲೀಸರ ಮಧ್ಯೆ ನಡೆದ ವಾಗ್ವಾದದಲ್ಲಿ ಪೊಲೀಸರು ಆಟೋ ಚಾಲಕರಿಗೆ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದ್ದಾರೆ. ಇಂದು ಬೆಳಗ್ಗೆಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಟೋ ಚಾಲಕರು, ಪೊಲೀಸರ ಕ್ರಮ ಖಂಡಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಡ ಆಟೋ ಚಾಲಕರನ್ನು ಟಾರ್ಗೇಟ್ ಮಾಡಿಕೊಂಡು ಕಿರುಕುಳ ನೀಡುತ್ತಿದ್ದಾರೆ ಪ್ರತಿಭಟನಾ ನಿರತ ಆಟೋ ಚಾಲಕರು ಆರೋಪಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಪೊಲೀಸ್ ಇಲಾಖೆಯ ದೌರ್ಜನ್ಯಕ್ಕೆ ಬೇಸತ್ತ ನೂರಾರು ಜನ ಆಟೋ ಚಾಲಕರು, ಆಟೋ ಚಾಲನಾ ವೃತ್ತಿಯನ್ನು ಕೈಬಿಟ್ಟು, ಗಾರೆಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆಲ್ಲಾ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಮತ್ತು ವಸೂಲಿಯೇ ಮೂಲ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.