Photo: India Today

ಮರಾಠಿ ಸಿನಿಮಾ ‘ಗೊಂಡಲ್’ ಪರಿಗಣನೆಗೆ ಅರ್ಹವಾಗಿರುವ 104 ಚಲನಚಿತ್ರಗಳ ಪಟ್ಟಿಯಲ್ಲಿದೆ.

ಭಾರತದಿಂದ ಆಸ್ಕರ್ಗೆ ಪ್ರವೇಶ ಪಡೆದಿರುವ ‘ಗೊಂಡಲ್’ ಚಲನಚಿತ್ರವು 99ನೇ ಅಕಾಡಮಿ ಪ್ರಶಸ್ತಿಗಳ ‘ಅಂತರರಾಷ್ಟ್ರೀಯ ಚಲನಚಿತ್ರ’ ವಿಭಾಗದಲ್ಲಿ ಪರಿಗಣನೆಗೆ ಅರ್ಹವಾಗಿದೆ ಎಂದು ‘ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸಸ್’ ಮಂಗಳವಾರ ಘೋಷಿಸಿದೆ. ಈ ಮರಾಠಿ ಚಲನಚಿತ್ರವು ಪರಿಗಣನೆಗೆ ಅರ್ಹವಾಗಿರುವ 104 ಚಲನಚಿತ್ರಗಳ ಪಟ್ಟಿಯಲ್ಲಿದೆ. ಇಷ್ಟೊಂದು ಸಿನಿಮಾಗಳು ಪರಿಗಣನೆಯಲ್ಲಿರುವುದು ದಾಖಲೆಯಾಗಿದೆ.

ಅರ್ಹತಾ ಪಟ್ಟಿಯಲ್ಲಿದೆ ಎಂದ ಮಾತ್ರಕ್ಕೆ ‘ಗೊಂಡಲ್’ ಸಿನಿಮಾವು ಶಾರ್ಟ್ಲಿಸ್ಟ್ ಅಥವಾ ನಾಮನಿರ್ದೇಶನಗೊಂಡಿದೆ ಆಗಿದೆ ಎಂದು ಅರ್ಥವಲ್ಲ. ಶಾರ್ಟ್ಲಿಸ್ಟ್ಗೆ ಅಥವಾ ನಾಮನಿರ್ದೇಶನಗೊಳ್ಳಲು ‘ಗೊಂಡಲ್’ ಸಿನಿಮಾಗೆ ಅರ್ಹತೆ ಇದೆ ಎಂದು ಮಾತ್ರ ಅರ್ಥವಾಗಿದೆ.

ಮಹಾರಾಷ್ಟ್ರದ ಸಾಂಪ್ರದಾಯಿಕ ‘ಗೊಂಡಲ್’ ಆಚರಣೆ ಮತ್ತು ಜಾನಪದ ಪ್ರದರ್ಶನ ಪರಂಪರೆಯಿಂದ ಪ್ರೇರಿತವಾದ ಈ ಮರಾಠಿ ಥ್ರಿಲ್ಲರ್ ಸಿನಿಮಾವು, ಆಸ್ಕರ್ಗೆ ಆಯ್ಕೆಯಾಗುವ ಮೊದಲೇ ಪ್ರಮುಖ ಚಲನಚಿತ್ರೋತ್ಸವದೊಂದರಲ್ಲಿ ಮನ್ನಣೆ ಪಡೆದಿತ್ತು. 2025ರಲ್ಲಿ ನಡೆದ 56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI), ಈ ಸಿನಿಮಾದ ನಿರ್ದೇಶಕ ಸಂತೋಷ್ ದವಖರ್ ಅವರು ‘ಅತ್ಯುತ್ತಮ ನಿರ್ದೇಶಕ’ ವಿಭಾಗದಲ್ಲಿ ‘ಸಿಲ್ವರ್ ಪೀಕಾಕ್’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಗೊಂಡಲ್ ಸಿನಿಮಾದ ಕಥಾವಸ್ತು ಏನು?

ಮಹಾರಾಷ್ಟ್ರದ ಗ್ರಾಮೀಣ ಹಿನ್ನೆಲೆಯಲ್ಲಿ ಹೊಂದಿರುವ ‘ಗೊಂಡಲ್’ ಸಿನಿಮಾದ ಕತೆಯು ಒಂದೇ ರಾತ್ರಿಯಲ್ಲಿ ನಡೆಯುತ್ತದೆ. ಮಧ್ಯರಾತ್ರಿಯಲ್ಲಿ ನಡೆಯುವ ಸಾಂಪ್ರದಾಯಿಕ ‘ಗೊಂಡಲ್’ ಆಚರಣೆಯ ಹಿನ್ನೆಲೆಯಲ್ಲಿ ಈ ಕತೆ ಅನಾವರಣಗೊಳ್ಳುತ್ತದೆ. ಈ ಆಚರಣೆಯ ಸಂಗೀತ, ನೃತ್ಯ, ಪೌರಾಣಿಕ ಕತೆಗಳು ಮತ್ತು ಧಾರ್ಮಿಕ ಅಂಶಗಳನ್ನು ಒಳಗೊಂಡಿದೆ. ಶ್ರೀಮಂತ ವ್ಯಕ್ತಿಯಾದ ಆನಂದ್ ಜೊತೆಗಿನ ಅಸಂತೋಷದ ವೈವಾಹಿಕ ಜೀವನ ನಡೆಸುತ್ತಿರುವ ಸುಮನ್ ಎಂಬ ಮಹಿಳೆಯ ಸುತ್ತ ಸಿನಿಮಾದ ಕತೆ ಸುತ್ತುತ್ತದೆ.

ಸುಮನ್ ‘ಗೊಂಡಲಿ’ (ಸಾಂಪ್ರದಾಯಿಕ ಪ್ರದರ್ಶಕ) ಆಗಿರುವ ಸಾಹೇಬ ಎಂಬ ವ್ಯಕ್ತಿಯನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ ಮತ್ತು ತನ್ನ ವೈವಾಹಿಕ ಜೀವನದಿಂದ ಹೊರಬರಲು ದಾರಿ ಹುಡುಕುತ್ತಾಳೆ. ಅವಳ ಈ ಯೋಜನೆಯು ಆನಂದ್ನ ಗೀಳು ಹೊಂದಿರುವ ಸೋದರ ಸಂಬಂಧಿ ಸರ್ಜೆರಾವ್ನನ್ನು ಒಂದು ಅಪಾಯಕಾರಿ ಸಂಚಿನೊಳಗೆ ಎಳೆದು ತರುತ್ತದೆ. ತನ್ನ ಪರಿಸ್ಥಿತಿಯಿಂದ ಪಾರಾಗಲು ಮಾಡಿದ ಪ್ರಯತ್ನವು ಕೊಲೆ, ವಂಚನೆ, ಬಯಕೆ ಮತ್ತು ಬದುಕುಳಿಯುವ ಹೋರಾಟದ ಕತೆಯಾಗಿ ಬದಲಾಗುತ್ತದೆ.

'ಗೊಂಡಲ್' ಚಿತ್ರದಲ್ಲಿ ಸುಮನ್ ಪಾತ್ರದಲ್ಲಿ ಇಷಿತಾ ದೇಶಮುಖ್ ನಟಿಸಿದ್ದು, ಅವರೊಂದಿಗೆ ಕಿಶೋರ್ ಕದಮ್, ಯೋಗೇಶ್ ಸೋಹೋನಿ, ನಿಷಾದ್ ಭೋಯಿರ್ ಮತ್ತು ಅನುಜ್ ಪ್ರಭು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

99ನೇ ಅಕಾಡೆಮಿ ಪ್ರಶಸ್ತಿಗಳ ಕೆಲವು ವಿಭಾಗಗಳಿಗೆ ಪ್ರಾಥಮಿಕ ಮತದಾನವು 2026ರ ಡಿಸೆಂಬರ್ 7 ರಿಂದ 11ರವರೆಗೆ ನಡೆಯಲಿದೆ. ಶಾರ್ಟ್ಲಿಸ್ಟ್ ಅನ್ನು ಡಿಸೆಂಬರ್ 15ರಂದು ಪ್ರಕಟಿಸಲಾಗುತ್ತದೆ. ಆಸ್ಕರ್ ನಾಮನಿರ್ದೇಶನಗಳನ್ನು 2027ರ ಜನವರಿ 21ರಂದು ಘೋಷಿಸಲಾಗುತ್ತದೆ. 99ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು 2027ರ ಮಾರ್ಚ್ 14ರಂದು, 'ಓವೇಶನ್ ಹಾಲಿವುಡ್' (Ovation Hollywood) ನಲ್ಲಿರುವ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.