ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಮೂಲಕ ಎಂಟ್ರಿ ಕೊಟ್ಟವರು ಸಿಂಪಲ್ ಸುನಿ. ಇಂದಿಗೂ ವ್ಯಕ್ತಿತ್ವದಲ್ಲಿ ಸಿಂಪಲ್ ಆಗಿಯೇ ಇದ್ದಾರೆ. ಆದರೆ ಆಯ್ಕೆ ಮಾಡುವ ಸಬ್ಜೆಕ್ಟ್ ವಿಚಾರದಲ್ಲಿ ಮಾತ್ರ ಸಿಂಪಲ್ ಅಲ್ಲವೇ ಅಲ್ಲ. ಒಂದಕ್ಕಿಂತ ಒಂದು ವಿಭಿನ್ನ ಹಿನ್ನೆಲೆಯ ಕಥೆ ಹೇಳುತ್ತಾ ಬಂದಿರುವ ಸುನಿ, ಈ ಬಾರಿ ಆಯ್ದುಕೊಂಡಿರುವುದು ರೋಬೊಟ್‌ಗಳ ಲೋಕವನ್ನು. ಆದರೆ ಶೀರ್ಷಿಕೆ ವಿಚಾರದಲ್ಲಿ ‘ಲಂಬೋದರ’ ಎನ್ನುವ ಪ್ರಾಚೀನ ಹೆಸರು ಕೂಡ ಇದೆ. ಕಥೆಯಲ್ಲಿ ಎರಡು ಅಂಶಗಳನ್ನು ಹೇಗೆ ಸೇರಿಸಿಕೊಂಡಿದ್ದಾರೆ? ಈ ವಾರ ತೆರೆಕಂಡಿರುವ ‘ಲಂಬೋದರ 2.0’ ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ಮೊದಲಾದ ಪ್ರಶ್ನೆಗಳಿಗೆ ನಿರ್ದೇಶಕ ಸುನಿ ನೀಡಿದ ಉತ್ತರ ಇಲ್ಲಿದೆ.

ಪ್ರಶ್ನೆ: ಲಂಬೋದರ 2.0 ಚಿತ್ರ ನಿಮಗೆ ಎಷ್ಟು ವಿಶೇಷ?

► ನಾನು ಪ್ರತಿಯೊಂದು ಚಿತ್ರ ಕೂಡ ವಿಶೇಷವಾಗಿ ಮೂಡಿಬರಬೇಕು ಎಂದೇ ಪ್ರಯತ್ನ ಮಾಡುತ್ತೇನೆ. ಬಹುಶಃ ನನ್ನ ಹೆಸರಿನ ಜೊತೆ ಸಿಂಪಲ್ ಇರುವ ಕಾರಣ ಎಲ್ಲರೂ ಇದು ಸಿಂಪಲ್ ಸಬ್ಜೆಕ್ಟ್ ಎಂದು ಅಂದುಕೊಳ್ತಿರಬಹುದು ಅನಿಸ್ತಿದೆ. ಆದರೆ ನಾನು ಲವ್ ಸ್ಟೋರಿ, ಕಾಮಿಡಿ ಅಥವಾ ರೌಡಿಸಂನಂಥ ಚಿತ್ರಗಳ ಜಾನ್ರಾ ಹಿಂದೆ ಬಿದ್ದವನಲ್ಲ. ‘ಬಹುಪರಾಕ್’ ಮೂಲಕ ಅಧ್ಯಾತ್ಮ, ‘ಆಪರೇಶನ್ ಅಲಮೇಲಮ್ಮ’ ಮೂಲಕ ಥ್ರಿಲ್ಲರ್, ಕಳೆದ ವರ್ಷ ತೆರೆಕಂಡ ‘ಗತವೈಭವ’ ಮೂಲಕ ಫ್ಯಾಂಟಸಿ.. ಹೀಗೆ ವಿಭಿನ್ನ, ವಿಶೇಷತೆಯನ್ನೇ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಕಂಪ್ಯೂಟರ್ ಲೋಕದಲ್ಲಿ ಮನುಷ್ಯನ ಭಾವನೆಗಳನ್ನು ಹೇಗೆಲ್ಲ ಬಳಸಿಕೊಳ್ಳಲಾಗುತ್ತದೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಈ ಸೈನ್ಸ್ ಫಿಕ್ಷನ್ ಎಷ್ಟು ವಿಶೇಷವಾಗಿ ಅನಿಸಿತು ಎಂದು ಪ್ರೇಕ್ಷಕರೇ ಹೇಳಬೇಕು.

ಪ್ರಶ್ನೆ: ಈಗಾಗಲೇ ಪ್ರಥಮ ಪ್ರದರ್ಶನವಾಗಿದೆ. ಪ್ರೇಕ್ಷಕರಿಂದ ನಿಮಗೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ?

► ತುಂಬಾ ಚೆನ್ನಾಗಿದೆ. ಮೊದಲು ಬೆಂಗಳೂರಿನ ಪ್ರೇಕ್ಷಕರು ಮಾತಿಗೆ ಸಿಕ್ಕಿದ್ದಾರೆ. ಈಗಾಗಲೇ ಹ್ಯೂಮನಾಯ್ಡ್ ರೋಬೋಟ್ ಬಗ್ಗೆ ಕಥೆ ಇರುವ ಮಾಹಿತಿ ಹಂಚಿಕೊಂಡಿದ್ದಕ್ಕೇನೇ ಇರಬೇಕು, ಟೆಕ್ಕಿ ಕುಟುಂಬಗಳು ಕೂಡ ಚಿತ್ರ ನೋಡಲು ಬಂದಿರುವುದು ಗೊತ್ತಾಯಿತು. ಅವರಂತೂ ಸೈನ್ಸ್ ಫಿಕ್ಷನ್ ಒಳಗಿನ ಫ್ಯಾಕ್ಟ್ ಏನು ಎನ್ನುವುದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಸಾಮಾನ್ಯ ಪ್ರೇಕ್ಷಕರಿಗೆ ಹೊಸಲೋಕದ ಮನರಂಜನೆಯಾಗಿ ಕಾಣಿಸಿದೆ. ಜೆನ್‌ಝಿಗಳು ತಮ್ಮ ಕುಟುಂಬವನ್ನು ಒತ್ತಾಯಿಸಿ ಥಿಯೇಟರ್‌ಗೆ ಕರೆದೊಯ್ಯುತ್ತಿದ್ದಾರೆ. ಇದನ್ನು ನೋಡಿದರೆ ವಾರಾಂತ್ಯದಲ್ಲಿ ಪ್ರೇಕ್ಷಕರು ಹೆಚ್ಚುವುದರಲ್ಲಿ ಸಂದೇಹವಿಲ್ಲ.

ಪ್ರಶ್ನೆ: ಸಾಮಾನ್ಯವಾಗಿ ಕಥನ, ರಚನೆ ಎಲ್ಲವೂ ನಿಮ್ಮದಾಗಿರುತ್ತದೆ. ಆದರೆ ಈ ಬಾರಿ ನಿಮ್ಮ ಸಂಭಾಷಣೆ ಇಲ್ಲದಿರುವುದು ಪ್ರೇಕ್ಷಕರಿಗೆ ಕೊರತೆ ಅನಿಸದೇ?

► ಎಲ್ಲವನ್ನು ನಾನೇ ಮಾಡಬೇಕು ಎನ್ನುವುದು ನನ್ನ ಹಠಮಾರಿತನವೇನೂ ಅಲ್ಲ. ಸಾಮಾನ್ಯವಾಗಿ ಕಥೆ ಹುಟ್ಟುವಾಗಲೇ ಅದರ ಜೊತೆಯಲ್ಲೇ ಚಿತ್ರಕಥೆ, ಸಂಭಾಷಣೆಗಳು ಕೂಡ ಹುಟ್ಟುತ್ತವೆ. ಆದರೆ ಈ ಬಾರಿ ಕಥೆ ನನ್ನದಲ್ಲ. ಆದರೆ ಸಬ್ಜೆಕ್ಟ್ ಗೆ ಹೊಂದಿಕೊಂಡಂಥ ಸಂಭಾಷಣೆಗಳು ಇದ್ದಾಗಲೇ ಚೆನ್ನಾಗಿರುತ್ತದೆ. ಹೀಗಾಗಿ ನಾನು ಡೈಲಾಗ್ಸ್ ಬರೆಯದೇ ಇರಬಹುದು. ಆದರೆ ಎಲ್ಲಿಯೂ ಮನರಂಜನೆಗೆ ಕೊರತೆ ಇರುವುದಿಲ್ಲ. ಬಹಳಷ್ಟು ಮಂದಿಗೆ ನಾನು ಸಂಭಾಷಣೆ ಬರೆದಿಲ್ಲ ಎನ್ನುವುದೇ ಗೊತ್ತಾಗಿಲ್ಲ. ಡೈಲಾಗ್ಸ್ ಚೆನ್ನಾಗಿವೆ ಎನ್ನುವುದನ್ನು ಕೂಡ ನನ್ನಲ್ಲೇ ಹೇಳಿದ್ದಾರೆ. ಆದುದರಿಂದ ಪ್ರೇಕ್ಷಕರ ನಿರೀಕ್ಷೆಗೆ ಭಂಗವಾಗಿಲ್ಲ ಎಂದುಕೊಂಡಿದ್ದೇನೆ. ಮಾತ್ರವಲ್ಲ, ಕನ್ನಡದಲ್ಲಂತೂ ನಿರ್ದೇಶನದ ಜತೆಗೆ ಕನ್ನಡದ ಹಾಡುಗಳನ್ನು ಕೂಡ ನಾನೇ ರಚಿಸಿದ್ದೇನೆ.

ಪ್ರಶ್ನೆ: ಮೊದಲ ಬಾರಿಗೆ ಬಾಲಿವುಡ್ ಪ್ರತಿಭೆಗಳನ್ನು ಕೂಡ ನಿಮ್ಮ ಚಿತ್ರದಲ್ಲಿ ಬಳಸಿದ್ದೀರಿ. ಹೇಗೆ ಅನಿಸಿತು?

► ನಾನು ಸಾಮಾನ್ಯವಾಗಿ ಎಂಥವರನ್ನು ಡಿಮ್ಯಾಂಡ್ ಮಾಡುತ್ತದೆ ಅಂಥ ಕಲಾವಿದರನ್ನೇ ಆಯ್ಕೆ ಮಾಡಲು ಪ್ರಯತ್ನಿಸುತ್ತೇನೆ. ನಮ್ಮ ಸಿನೆಮಾದ ಕಥೆ ಬರೆದಿರುವವರನ್ನೇ ನಾಯಕರನ್ನಾಗಿಸಲು ಇದು ಕೂಡ ಒಂದು ಕಾರಣ. ಆದರೆ ನಟನೆಗಾಗಿ ಅವರಿಗೂ ವರ್ಕ್‌ಶಾಪ್ ಮಾಡಲಾಗಿತ್ತು. ಅದೇ ರೀತಿ ಸಾಚಿ ಬಿಂದ್ರಾ ಕೂಡ ಬಾಲಿವುಡ್‌ನವರೇ. ಅನಿಲ್ ಸರ್ ಅವರು ಕಥೆ ಹೇಳಿದಾಗ ಕುನಾಲ್ ಕಪೂರ್ ಕೂಡ ಖುಷಿಯಾಗಿದ್ದರು. ಅವರು ಈ ಚಿತ್ರಕ್ಕಾಗಿಯೇ ಕನ್ನಡ ಕಲಿಯಲು ಮುಂದಾದರು. ಬಾಲಿವುಡ್ ನಟರು ಅಂದರೆ ಕ್ಯಾರವಾನ್‌ನಲ್ಲೇ ಇರುತ್ತಾರೆ ಎನ್ನುವ ಆಪಾದನೆ ಸುಳ್ಳು ಅಂತ ಸಾಬೀತು ಮಾಡಿದ್ದಾರೆ. ಅವರು ನಮ್ಮ ಜೊತೆಯಲ್ಲೇ ಇದ್ದು ಶೂಟಿಂಗ್‌ಗೆ ಸಪೋರ್ಟ್ ಮಾಡಿದ್ದಾರೆ. ಕಲಾವಿದರು ಎಲ್ಲಿಯವರು ಅನ್ನುವುದಕ್ಕಿಂತ ಅವರು ಎಷ್ಟರ ಮಟ್ಟಿಗೆ ಡೆಡಿಕೇಟ್ ಆಗಿ ಇರ್ತಾರೆ ಅನ್ನೋದೇ ಫೈನಲಿ ಪ್ರಾಜೆಕ್ಟ್‌ಗೆ ಮುಖ್ಯವಾಗಿರುತ್ತದೆ.

ಪ್ರಶ್ನೆ: ನಿಮ್ಮ ಮತ್ತು ಶಿವರಾಜ್ ಕುಮಾರ್ ಸಿನೆಮಾ ಯಾವಾಗ ಬರುತ್ತದೆ ಎಂದು ಕಾಯುತ್ತಿರುವವರಿಗೆ ನಿಮ್ಮ ಪ್ರತಿಕ್ರಿಯೆ?

► ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ನನ್ನ, ಶಿವಣ್ಣನ ಸಿನೆಮಾ ಬರಬೇಕಿತ್ತು. ‘ಮನಮೋಹಕ’ ಎನ್ನುವ ಶೀರ್ಷಿಕೆ ಘೋಷಿಸಿದ್ದು ಬಿಟ್ಟರೆ ಆನಂತರ ಅದು ಮುಂದುವರಿಯಲೇ ಇಲ್ಲ. ಪಾತ್ರಕ್ಕಾಗಿ ಕಲಾವಿದರನ್ನು ಹುಡುಕುವುದು ಒಂದು ರೀತಿಯಾದರೆ, ಶಿವಣ್ಣನಂಥ ನಟನಿಗೆ ನಾವೇ ಕಥೆ ಬರೆಯಬೇಕು ಅನಿಸುತ್ತದೆ. ಇದು ಅವರಿಗೆಂದೇ ಸಿದ್ಧವಾದ ಕಥೆ. ಹಾಗಾಗಿ ಆ ಕಥೆಯನ್ನು ನಾನು ಶಿವರಾಜ್ ಕುಮಾರ್ ಅವರಿಗೆಂದೇ ಕಾಯ್ದಿರಿಸಿದ್ದೇನೆ. ಸದ್ಯದಲ್ಲೇ ಆ ಕನಸು ಈಡೇರಬಹುದು ಎನ್ನುವ ನಿರೀಕ್ಷೆ ಇದೆ.

(ಅಂಕಣಕಾರರು: ಪತ್ರಕರ್ತರು ಮತ್ತು ಸಿನೆಮಾ ವಿಮರ್ಶಕರು)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಶಿಕರ ಪಾತೂರು

contributor