×
Ad

ಮುಸ್ಲಿಂ ಮಹಿಳೆಯರು ಹಲವು ಪ್ರಥಮಗಳನ್ನು ಸ್ಥಾಪಿಸಿದ್ದೇವೆ: ಡಾ. ಶರೀಫಾ ಕೆ.

ಅನುಪಮ ಬೆಳ್ಳಿ ಹಬ್ಬ ಸಂಭ್ರಮ; ವಿಶೇಷ ಸಂಚಿಕೆ ಬಿಡುಗಡೆ

Update: 2026-01-15 14:53 IST

ಮಂಗಳೂರು, ಜ.15: ಮುಸ್ಲಿಂ ಮಹಿಳೆಯರು ಹಲವಾರು ಸಾಧನೆಗಳ ಜತೆಗೆ ಕನ್ನಡ ಸಾಹಿತ್ಯವನ್ನು ಒಳಗೊಂಡು ಹಲವು ಪ್ರಥಮಗಳನ್ನು ಸ್ಥಾಪಿಸಿದ್ದೇವೆ ಎಂದು ಖ್ಯಾತ ಸಾಹಿತಿ ಡಾ. ಶರೀಫಾ ಕೆ. ಅಭಿಪ್ರಾಯಿಸಿದ್ದಾರೆ.

ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ಅನುಮಪ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದ ಮುಸ್ಲಿಂ ಮಹಿಳೆಯರು ಕೆಲ ವರ್ಷಗಳ ಹಿಂದೆ ನಡೆದ ಎನ್‌ಆರ್‌ಸಿ- ಸಿಎಎ ಹೋರಾಟದಲ್ಲಿಯೂ ತಮ್ಮ ಮಹತ್ವವನ್ನು ಪ್ರದರ್ಶಿಸಿದ್ದರು. ಆದರೂ ಪತ್ರಿಕೆಯನ್ನು ನಡೆಸು ವುದು ಸುಲಭದ ಕೆಲಸವಲ್ಲ. ನಮ್ಮ ಕಣ್ಣೆದುರೇ ಅದೆಷ್ಟೋ ಪತ್ರಿಕೆಗಳು ನೆಲಕಚ್ಚಿರುವುದನ್ನು ನೋಡಿದ್ದೇವೆ. ಅಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಮನೆಯಿಂದ ಹೊರ ಬರಲು ಅವಕಾಶಗಳೇ ಕಡಿಮೆ ಇದ್ದ ಸಂದರ್ಭ ಹಿಜಾಬ್‌ಧಾರಿ ಮಹಿಳೆಯ ನೇತೃತ್ವದಲ್ಲಿ, ಹಲವು ಎಡರು ತೊಡರುಗಳ ನಡುವೆ ಅನುಮಪ ಮಾಸಿಕ 25 ವರ್ಷಗಳನ್ನು ಪೂರೈಸಿ ರುವುದು ಪ್ರಶಂಸನಾರ್ಹ. ಪತ್ರಿಕೆಯು ನೈತಿಕತೆಯನ್ನು ಅನುಸರಿಕೊಂಡು ಅಕ್ಷರದ ಬಳಕೆಯ ಗೌರವ ಉಳಿಸಿ ಕೊಂಡು ಬರುತ್ತಿದೆ ಎಂದು ಅವರು ಬಣ್ಣಿಸಿದರು.

ಪತ್ರಕರ್ತೆ ಗೌರಿ, ಬಿಲ್ಕೀಸ್ ಬಾನು ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯನ್ನು ಉಲ್ಲೇಖಿಸಿದ ಡಾ. ಶರೀಫಾ, ನಮ್ಮ ಹೋರಾಟಗಳೇಕೆ ಹೀಗಾಗುತ್ತಿವೆ ಎಂದೆನೆಸುವಾಗ ಆತಂಕವಾಗುತ್ತದೆ. ಕರಾವಳಿಯಲ್ಲಿ ಹಿಜಾಬ್ ಪ್ರಕರಣ ದಿಂದಾಗಿ ಹಲವು ಮಹಿಳೆಯರ ಶಿಕ್ಷಣಕ್ಕೆ ಹಿನ್ನಡೆ ಆಗಿದೆ. ಕೋಮು ದ್ವೇಷದ ಭಾಷಣ ಮಾಡಬಾರದು ಎಂಬ ಕಾರಣಕ್ಕೆ ಮಸೂದೆ ತಂದರೆ ಅದನ್ನು ವಿರೋಧಿಸುವ ಕೋಮುವಾದಿಗಳ ಕಾಲದಲ್ಲಿ ನಾವಿದ್ದೇವೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಪೊಲೀಸ್ ಎಸಿಪಿ ನಜ್ಮಾ ಫಾರೂಕಿ ಮಾತನಾಡಿ, ಅನುಪಮ ಕೇವಲ ಪತ್ರಿಕೆಯಲ್ಲ ಅದು ಮಹಿಳೆಯರ ಧ್ವನಿ, ಶಕ್ತಿ ಹಾಗೂ ಸೃಜನಶೀಲತೆಯನ್ನು ತೋರಿಸುವ ವೇದಿಕೆ ಎಂದರು.

ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಅವರದ್ದೇ ಆದ ಛಾಪು ಮೂಡಿಸಿ ದ್ದಾರೆ. ಹಾಗಿದ್ದರೂ ಹಲವು ಪತ್ರಿಕೆಗಳು ಹುಟ್ಟಿ ಅಳಿದು ಹೋಗಿರುವ ಸಂದರ್ಭದಲ್ಲಿ 25 ವರ್ಷಗಳಿಂದ ಸರಳ ಧ್ವನಿಯಲ್ಲಿ ಮಹಿಳೆಯರ ಬದುಕಿನ ಬಗ್ಗೆ ಮಾತನಾಡುವ ಅನುಪಮದ ಕೀರ್ತಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಶಾಸಕಿ, ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಬೆಥನಿ ಸೈಂಟ್ ತೆರೆಸಾ ಕಾಲೇಜಿನ ಪ್ರಾಂಶುಪಾಲರಾದ ಭ. ಲೂರ್ಡ್ಸ್, ಆಪ್ತ ಸಮಾಲೋಚಕಿ ಹಾಗೂ ತರಬೇತುದಾರರಾದ ಡಾ. ರುಕ್ಸಾನ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ., ಹಿರಿ ಓದುಗರಾದ ಆಯಿಶಾ ಇ. ಶಾಫಿ ಅವರನ್ನು ಸನ್ಮಾನಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯೆ ಸಮೀನಾ ಅಫ್ಶಾನ್ ಅಧ್ಯಕ್ಷತೆ ವಹಿಸಿದ್ದರು. ಅನುಮಪ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಹಿಳಾ ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಅನುಪಮಾ ಬಳಗದ ಸಾಜಿದಾ ಮುಮಿನ್, ಶಹೀದಾ ಉಮರ್, ಕುಲ್ಸುಮ್ ಅಬೂಬಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಓದುಗರ ಪರವಾಗಿ ವೈ.ಎಫ್. ಕಳವಡ, ಸಿಹಾನ ಬಿ.ಎಂ., ಶಮೀಮಾ ಕುತ್ತಾರ್, ಸುಖಾಲಾಕ್ಷಿ ಅನಿಸಿಕೆ ಹಂಚಿಕೊಂಡರು.

ಉಪ ಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿದರು. ಸಮೀನಾ ಉಪ್ಪಿನಂಗಡಿ ವಂದಿಸಿದರು. ಅಸ್ಮತ್ ವಗ್ಗ, ಲುಬ್ನಾ ಝಕಿಯ್ಯ ಕಾರ್ಯಕ್ರಮ ನಿರೂಪಿಸಿದರು.

‘ನಮ್ಮಲ್ಲಿರುವುದು ಕೇವಲ ಹೆಣ್ಣು ಮತ್ತು ಗಂಡು ಎಂಬ ಎರಡು ಜಾತಿಗಳು ಮಾತ್ರ. ಸೂರ್ಯನ ಬೆಳಕು, ಗಾಳಿ, ನೀರು ಯಾವುದೇ ಬೇಧ ಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗುವಾಗ ಯಾವುದೇ ರೀತಿಯ ಬೇಧಭಾವ ಸರಿಯಲ್ಲ. ಮಹಿಳೆಯರಲ್ಲಿ ಅದ್ಭುತ ಶಕ್ತಿ ಇದೆ. ಮಂಗಳೂರಿನವಳಾಗಿದ್ದರೂ ಮುಂಬೈಯಲ್ಲೇ 45 ವರ್ಷಗಳ ಕಾಲ ಕಳೆದಿರುವ ಕಾರಣ ಇಲ್ಲಿನ ಹಲವು ಸಂಗತಿಗಳ ಬಗ್ಗೆ ನನಗೆ ಅರಿವಿಲ್ಲ. ಆದರೆ 25 ವರ್ಷಗಳ ಕಾಲ ಮಹಿಳೆಯೊಬ್ಬರು ಅನುಪಮ ಪತ್ರಿಕೆಯನ್ನು ಮಂಗಳೂರಿನಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಎಂದಾಗ ನಿಜಕ್ಕೂ ಅಚ್ಚರಿ ಹಾಗೂ ಖುಷಿ ಆಗುತ್ತಿದೆ’ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ನ್ಯಾಯ ವಾದಿ, ಎನ್‌ಐಎಯ ಮಾಜಿ ವಿಶೇಷ ಸರಕಾರಿ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಹೇಳಿದರು.

 

 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News