×
Ad

BELTHANGADY | ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆ ಪ್ರಕರಣ: ಸುಮಂತ್ ತಲೆಗೆ 3 ಪೆಟ್ಟು ಬಿದ್ದಿರುವುದು ಪತ್ತೆ ?

ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ ಚುರುಕು

Update: 2026-01-15 11:48 IST

ಸುಮಂತ್

ಬೆಳ್ತಂಗಡಿ, ಜ.15: ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15)ನ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಈ ವೇಳೆ ಬಾಲಕನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವ ಗುರುತು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದಾರೆ.

 

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಕುರಿತ ಮಾಹಿತಿಗಳು ಲಭ್ಯವಾಗುತ್ತಿದ್ದು, ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೋ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿವೆ. ಅರೆಪ್ರಜ್ಞಾವಸ್ಥೆಯಲ್ಲಿ ಆತ ಕೆರೆಗೆ ಬಿದ್ದಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ಶ್ವಾಸಕೋಶದಲ್ಲಿ ನೀರು ತುಂಬಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿರುವುದಾಗಿ ತಿಳಿದು ಬಂದಿದೆ.

ಇದೊಂದು ಕೊಲೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿವಿಧ ತಂಡಗಳು ತಡ ರಾತ್ರಿಯಿಂದಲೇ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

 

ಎಫ್.ಎಸ್.ಎಲ್. ತಂಡ, SOCO ತಂಡ ಮತ್ತು ಪೊಲೀಸರ ತಂಡವು ಸುಮಂತ್ ಮೃತದೇಹ ಸಿಕ್ಕ ಸುತ್ತಮುತ್ತಲು ಹಾಗೂ ರಕ್ತದ ಕಲೆಗಳು ಬಿದ್ದಿರುವ ಜಾಗಗಳಲ್ಲಿ ಕೆಮಿಕಲ್ ಮೂಲಕ ಗುರುತಿಸುವ 'ಲುಮಿನೀಯಲ್ ಟೆಸ್ಟ್' ಮಾಡಿದೆ.

ಮೃತದೇಹ ಪತ್ತೆಯಾದ ತೋಟದ ಕೆರೆಯ ಪ್ರದೇಶದ ಸುತ್ತಮುತ್ತ ಸಾಕ್ಷ್ಯಾಧಾರಕ್ಕಾಗಿ ಪೊಲೀಸರು ಗುರುವಾರ ಬೆಳಗ್ಗೆ 7 ಗಂಟೆಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರ ಒಂದು ತಂಡ ಇಂದು ಬೆಳಗ್ಗೆ ಕೆರೆಯ ನೀರನ್ನು ಪಂಪ್ ಬಳಸಿ ಹಿಂಗಿಸುವ ಕಾರ್ಯ ನಡೆಸುತ್ತಿದೆ.

ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ ಸಿ.ಕೆ. ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಇನ್ ಸ್ಪೆಕ್ಟರ್ ಸುಬ್ಬಪುರ್ ಮಠ ನೇತೃತ್ವದಲ್ಲಿ ವೇಣೂರು, ಬೆಳ್ತಂಗಡಿ, ಪುಂಜಾಲಕಟ್ಟೆ, ಧರ್ಮಸ್ಥಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ಮಧ್ಯೆ ಸುಮಂತ್ ಮೃತದೇಹ ಮನೆಗೆ ತಲುಪಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News