×
Ad

ಅಕ್ರಮವಾಸಿಗಳೆಂದು ಅನುಮಾನಿಸಿ ದಾಳಿ ನಡೆಸಿದರೆ ಕಾನೂನು ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ

'ಅಕ್ರಮವಾಗಿ ವಾಸಿಸುವರ ವಿರುದ್ಧವೂ ಕ್ರಮ'

Update: 2026-01-15 11:11 IST

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು, ಜ.15: ಅಕ್ರಮವಾಗಿ ವಾಸಿಸುವ ಯಾರನ್ನಾದರೂ ಕಾನೂನುಬಾಹಿರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಕಾನೂನು ಪ್ರಕಾರ ಗಡೀಪಾರು ಮಾಡಲಾಗುತ್ತದೆ. ಅದೇ ವೇಳೆ ಯಾರ ಮೇಲಾದರೂ ಅನುಮಾನದ ಆಧಾರದ ಮೇಲೆ ದಾಳಿ ನಡೆಸುವವರ ವಿರುದ್ಧವೂ ಕಾನೂನು ಕ್ರಮ ವಹಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

"ನಗರದ ರಾವ್ ಆಂಡ್ ರಾವ್ ಸರ್ಕಲ್ ರಿಕ್ಷಾ ಸ್ಟ್ಯಾಂಡ್ ಹಿಂಬದಿ 'ಬಂಗಾಳಿ ಕ್ಯಾಂಟೀನ್' ಅಂತ ಬೋರ್ಡ್ ಹಾಕಿ ಅದರ ಅಕ್ಕಪಕ್ಕ ಕೆಲವು ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಪೊಲೀಸ್ ಇಲಾಖೆ ನೋಡಿಯೂ ಕಣ್ಣು ಮುಚ್ಚಿ ಕುಳಿತಿದೆ. ಹಿಂದೂ ಸಂಘಟನೆಯವರಿಗೆ ತಿಳಿಯುವ ಹಾಗೆ ಇದನ್ನು ಶೇರ್ ಮಾಡಿ" ಎಂಬುದಾಗಿ 'ಹಿಂದೂ ಗೆಳೆಯರ ಬಳಗ' ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಪ್ರಚೋದನಕಾರಿ ಬರಹವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿರುವ ಪೊಲೀಸ್ ಆಯುಕ್ತ, ಇಂತಹ ಸಂದೇಶಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಈಗಾಗಲೇ ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಮೇಲಿನ ಸಂದೇಶವನ್ನು ಯಾವುದೋ ಗುಂಪಿನಲ್ಲಿ ಪೋಸ್ಟ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ.

ಈ ಕುಟುಂಬದ ಹಿನ್ನೆಲೆಯನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಅವರ ಹೆಸರಿನಲ್ಲಿ 2014ರಲ್ಲಿ ಖರೀದಿಸಲಾದ ಆಸ್ತಿ ಇದೆ. ಅವರು ಭಾರತೀಯರಲ್ಲ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಕೆಲವು ಜನರು ವಾಟ್ಸ್ ಆ್ಯಪ್ ನಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಇದು ಅಮಾಯಕರ ಮೇಳೆ ದಾಳಿಗೆ ಕಾರಣವಾಗಬಹುದು. ಮಂಗಳೂರಿನಲ್ಲಿ ಭಾರತೀಯ ವಲಸೆ ಕಾರ್ಮಿಕರ ಮೇಲೆ ನಡೆದಿರುವ ಇಂತಹ ದಾಳಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಬಾಂಗ್ಲಾದೇಶದಿಂದ ಬಂದವರೆಂದು ಶಂಕಿಸಲಾಗಿರುವ ಯಾರ ಬಗ್ಗೆಯಾದರೂ ಯಾವುದೇ ಮಾಹಿತಿ ಇದ್ದರೆ, ಅವರು ಠಾಣೆಗಳಲ್ಲಿ ಅಥವಾ ಎಸಿಪಿಗಳಿಗೆ ಅಥವಾ ಪೊಲೀಸ್ ಕಮಿಷನರ್ ಕಚೇರಿಗೆ ನೀಡಬಹುದು. ಪೂರ್ವಾಪರ ಪರಿಶೀಲನೆಯ ನಂತರ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಮತ್ತು ಕಾನೂನಿನ ಪ್ರಕಾರ ಗಡೀಪಾರು ಮಾಡುವುದನ್ನು ನಾವು ಖಾತರಿಪಡಿಸುತ್ತೇವೆ.

ಯಾರಾದರೂ ಅನುಮಾನದ ಆಧಾರದ ಮೇಲೆ ಅಥವಾ ಯಾವುದೇ ಕಾರಣಗಳಿಗಾಗಿ ತಾನು ಬಾಂಗ್ಲಾದೇಶಿ ಎಂದು ಹೇಳುವ ಯಾವುದೇ ಭಾರತೀಯನ ವಿವರಗಳನ್ನು ಹಂಚಿಕೊಂಡರೆ ಅಥವಾ ಕೆಲವು ಜನರ ಮೇಲೆ ದಾಳಿ ಮಾಡುವ ರೀತಿಯಲ್ಲಿ ಸಂದೇಶಗಳನ್ನು ಹರಡಿದರೆ, ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಯಾರ ಮೇಲಾದರೂ (ಅಕ್ರಮವಾಗಿ ವಾಸಿಸುವವರು ಸೇರಿದಂತೆ) ಯಾರೇ ಆಗಲಿ ದಾಳಿ ಮಾಡುವುದು ಕಾನೂನಿನಡಿಯಲ್ಲಿ ಅಪರಾಧವಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಕಾನೂನು ಸ್ಪಷ್ಟವಾಗಿದೆ ಮತ್ತು ಇಲ್ಲಿ ಕಾನೂನಿಗೆ ಬೆಲೆ ಕೊಡದ ಜನರೂ ಇದ್ದಾರೆ. ಅವರ ಮೇಲೆ ಕೂಡಾ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News