ಉಡುಪಿ: ಸೈಂಟ್ ಸಿಸಿಲೀಸ್ ಮತ ಎಣಿಕಾ ಕೇಂದ್ರಕ್ಕೆ 3 ಹಂತದ ಭದ್ರತೆ

Update: 2024-04-27 14:55 GMT

ಉಡುಪಿ: ಶುಕ್ರವಾರ ಮತದಾನ ನಡೆದ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ವಿದ್ಯುನ್ಮಾನ ಮತ ಯಂತ್ರಗಳನ್ನು ವಿವಿಪ್ಯಾಟ್ ಸಮೇತ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಪದವಿ ಪೂರ್ವ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಇರಿಸಲಾಗಿದ್ದು, ಇದರ ಸುತ್ತ ಮೂರು ಹಂತದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಯಂತ್ರಗಳನ್ನು ನಿನ್ನೆ ಸಂಜೆ ಆಯಾ ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ನಂತರ ಅಲ್ಲಿಂದ ಮತ ಎಣಿಕೆ ಕೇಂದ್ರವಾದ ಉಡುಪಿಗೆ ಜಿಪಿಎಸ್ ಅಳವಡಿಸಿದ ಕಂಟೈನರ್‌ನಲ್ಲಿ ಬಿಗಿ ಭದ್ರತೆಯೊಂದಿಗೆ ತರಲಾಯಿತು.

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಯಂತ್ರಗಳನ್ನು ಇಂದು 11ಗಂಟೆಯ ಸುಮಾರಿಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ತರಲಾಯಿತು.

ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾ ಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಚುನಾವಣಾ ವೀಕ್ಷಕ ಹಿತೇಶ್ ಕೋಯಾ, ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಹಾಗೂ ಎಡಿಸಿ ಮಮತಾ ದೇವಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಿದರು. ಕೇಂದ್ರದ ಒಳ ಆವರಣದಲ್ಲಿರುವ ಕೆಳ ಅಂತಸ್ತು ಹಾಗೂ ಒಂದನೆ ಮಹಡಿಯಲ್ಲಿನ ಎಲ್ಲಾ ಮತಯಂತ್ರಗಳ ಭದ್ರತಾ ಕೊಠಡಿಗಳಿಗೆ ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಉಡುಪಿಯ ನಾಲ್ಕು ಹಾಗೂ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಿಂದ ತರಲಾದ ಎಲ್ಲಾ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸಿ ಸೀಲ್ ಮಾಡಿ ಸಂಜೆ 5:30ರ ಸುಮಾರಿಗೆ ಮತಗಳ ಎಣಿಕೆ ನಡೆಯುವ ಜೂ.4ರವರೆಗೆ ಭದ್ರತೆ ಒದಗಿಸಲು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಎರಡರಂತೆ ಕಾಲೇಜಿನ ಒಟ್ಟು 18 ರೂಮ್‌ಗಳಲ್ಲಿ ಮತಯಂತ್ರಗಳನ್ನು ಇರಿಸಿ ಸೀಲ್ ಮಾಡಲಾಗಿದೆ. ಅಲ್ಲದೇ ಮತ ಎಣಿಕೆ ಕೇಂದ್ರದ ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 160 ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ.

ಮತಗಟ್ಟೆಗಳಿಂದ ತರಲಾಗಿರುವ 17ಸಿ ಫಾರ್ಮ್, ಡಿಕ್ಲರೇಷನ್ ಫಾರ್ಮ್ ಹಾಗೂ ಅಣಕ ಮತಗಳನ್ನು ಹಾಕಲಾದ ಕವರ್‌ಗಳನ್ನು ಸಹ ಪ್ರತಿಯೊಂದು ರೂಮಿನಲ್ಲಿ ಆಯಾ ಮತಯಂತ್ರಗಳ ಮೇಲೆ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

ಮತಯಂತ್ರಗಳನ್ನು ಇರಿಸಿದ ರೂಮಿನಲ್ಲಿ ಯಾವುದೇ ಕಾರಣಕ್ಕಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗದಂತೆ ಆ ಕೋಣೆ ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಬಲ್ಲಮೂಲವೊಂದು ತಿಳಿಸಿದೆ. ಪಾಸ್ ಇದ್ದವರನ್ನು ಹೊರತು ಪಡಿಸಿ ಉಳಿದಂತೆ ಯಾರಿಗೂ ಕೇಂದ್ರದ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ. ಶಾಲಾ ಆವರಣದಲ್ಲಿ ಅಗ್ನಿಶಾಮಕ ವಾಹನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಸ್ಟ್ರಾಂಗ್ ರೂಮ್‌ಗಳ ಉಸ್ತುವಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ ವಹಿಸಲಾಗಿದೆ. ಒಟ್ಟು ಮೂರು ಹಂತದ ಭದ್ರತೆ ಇಡೀ ಕೇಂದ್ರಕ್ಕೆ ಇರಲಿದೆ. ಸಿಆರ್‌ಪಿಎಫ್ ಸಿಬ್ಬಂದಿಗಳು ಸ್ಟ್ರಾಂಗ್ ರೂಮಿಗೆ ಭದ್ರತೆ ಒದಗಿಸಿದರೆ, ಎರಡನೇ ಹಂತದಲ್ಲಿ ಮಧ್ಯಭಾಗದಲ್ಲಿ ಕೆಎಸ್‌ಆರ್‌ಪಿಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮೂರನೇ ಹಂತದಲ್ಲಿ ಕೇಂದ್ರದ ಹೊರ ಆವರಣದಲ್ಲಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ಮತಎಣಿಕೆ ಕೇಂದ್ರಕ್ಕೆ ಸಂಪೂರ್ಣ ಭದ್ರತೆ ಒದಗಿಸಲಿದ್ದಾರೆ. ನಿಯೋಜಿತ ಸಿಬ್ಬಂದಿಗಳು ನಿರಂತರವಾಗಿ ಸರದಿ ಪ್ರಕಾರ ಭದ್ರತಾ ಕಾರ್ಯದಲ್ಲಿ ನಿರತರಾಗಲಿದ್ದಾರೆ. ಇವರು ಮತ ಎಣಿಕೆ ನಡೆಯುವ ಜೂ.4ರವರೆಗೆ ನಿರಂತರವಾಗಿ ಕೇಂದ್ರದ ಭದ್ರತಾ ಕಾರ್ಯವನ್ನು ನಿರ್ವಹಿಸಲಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಬೈಂದೂರಿನಲ್ಲಿ ಡಿಮಸ್ಟರಿಂಗ್ ಬಳಿಕ ಎಲ್ಲಾ ಮತಯಂತ್ರಗಳನ್ನು ವಿವಿಪ್ಯಾಟ್ ಸಮೇತ ಅದೇ ದಿನ ರಾತ್ರಿ ಶಿವಮೊಗ್ಗಕ್ಕೆ ಕಳುಹಿಸಲಾಗುತ್ತದೆ.

ಡಿಮಸ್ಟರಿಂಗ್ ಕೇಂದ್ರದಲ್ಲಿ ಮತಯಂತ್ರಗಳು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ದಾನ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಲ್ಲಿನ ಮತಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಕಳೆದ ರಾತ್ರಿಯೇ ಉಡುಪಿ ಸೈಂಟ್ ಸಿಸಿಲೀಸ್ ಶಾಲೆಯಲ್ಲಿರುವ ಡಿಮಸ್ಟರಿಂಗ್ ಕೇಂದ್ರಕ್ಕೆ ತರಲಾಯಿತು.

ತಡರಾತ್ರಿಯವರೆಗೂ ಜಿಲ್ಲೆಯ ಮೂಲೆಮೂಲೆಗಳಿಂದ ಮತಯಂತ್ರಗಳು ಕೇಂದ್ರಕ್ಕೆ ಬರುತ್ತಿದ್ದು, ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸ ಲಾಗಿತ್ತು. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳು ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಇಲ್ಲಿಗೆ ಆಗಮಿಸಿದವು ಎಂದು ಮೂಲಗಳು ತಿಳಿಸಿವೆ.







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News