×
Ad

ಮಂಗಳೂರು: ಹೆಚ್ಚಿನ ದರ ವಸೂಲಿ ಪ್ರಕರಣ; ಆಸ್ಪತ್ರೆಯ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ

Update: 2024-02-22 22:18 IST

ಮಂಗಳೂರು, ಫೆ.22: ಮಹಿಳೆಯೊಬ್ಬರ ಹೆರಿಗೆಗೆ ಮಂಗಳೂರು ನರ್ಸಿಂಗ್ ಹೋಮ್ ಆಸ್ಪತ್ರೆಯು ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿರುವ ಆರೋಪ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿರುವ ಘಟನೆ ವರದಿಯಾಗಿದೆ.

ಗರ್ಭಿಣಿಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಮಂಗಳೂರು ನರ್ಸಿಂಗ್ ಹೋಮ್ ಗೆ ದಾಖಲಾಗಿದ್ದು, ಅದೇ ದಿವಸ ಸಹಜ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ  ಜನ್ಮ ನೀಡಿದ್ದರು. ಅವಳಿ ಮಕ್ಕಳ ತೂಕ ಕಡಿಮೆಯಾಗಿರುವುದರಿಂದ ಎನ್‌ಐಸಿಯು(ನವಜಾತ ಶಿಶುಗಳ ತೀವ್ರ ನಿಗಾ ಘಟಕ)ಗೆ ದಾಖಲಿಸುವಂತೆ ಹೆರಿಗೆ ವೈದ್ಯರಾದ ನಳಿನಿ ಪೈ ಹಾಗೂ ಮಕ್ಕಳ ವೈದ್ಯ ಮಾರಿಯೋ ಜೆ. ಬುಕೆಲೋ ಸಲಹೆ ನೀಡಿದ್ದರು ಎನ್ನಲಾಗಿದೆ. ಅದರಂತೆ ಮೇ 29ರಿಂದ ಜೂ.15ರವರೆಗೆ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿತ್ತು.

ಜೂ.15ರಂದು ಮಹಿಳೆ 5,34,791ರೂ. ಪಾವತಿ ಮಾಡಿದ್ದಾರೆ. 1.80ಲಕ್ಷ ರೂ. ವೈದ್ಯ ಮಾರಿಯೊ ಜೆ. ಬುಕೆಲೊ, ರೂ.25ಸಾವಿರ ರೂ. ನಳಿನಿ ಪೈಗೆ ಸಂದಾಯ ಮಾಡಲಾಗಿತ್ತು. ಈ ಬಗ್ಗೆ ಮಹಿಳೆಯ ಗಂಡ ನ್ಯಾಯವಾದಿ ರೋಶನ್‌ ರಾಜ್ ಆಸ್ಪತ್ರೆಯಲ್ಲಿ ಅಧಿಕ ವೆಚ್ಚ ವಸೂಲಿ ಮಾಡಿರುವ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರನ್ನು ನೀಡಿದ್ದರು.

ಆರೋಗ್ಯಾಧಿಕಾರಿ ತಾಲೂಕು ವೈದ್ಯಾಧಿಕಾರಿಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು. ಅದರಂತೆ ವರದಿ ಯನ್ನು ಡಿಎಚ್‌ಒಗೆ ನೀಡಿದ್ದರು. ಇದರಿಂದ ಸಮಾಧಾನವಾಗದ ರೋಶನ್‌ ರಾಜ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆಗಿನ ರಾಜ್ಯ ಆರೋಗ್ಯ ಸಚಿವ ರಾಮುಲು ಅವರಿಗೆ ದೂರನ್ನು ನೀಡಿದ್ದರು. ಕೇಂದ್ರ ಸರಕಾರವು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ ಕಾಯಿದೆ 2017 ಕಲಂ 10ಪ್ರಕಾರ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಇದರಿಂದ ನ್ಯಾಯ ಸಿಗದ ಹಿನ್ನೆಲೆಯಲ್ಲಿ ರೋಶನ್‌ ರಾಜ್ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಕೇಸನ್ನು ದಾಖಲಿಸಿದ್ದರು.

ಜಿಲ್ಲಾ ಗ್ರಾಹಕರ ನ್ಯಾಯಾಲಯವು ಮಹಿಳೆ,ರೋಶನ್‌ ರಾಜ್ ಹಾಗೂ ವೈದ್ಯರುಗಳ ಅರ್ಜಿಯನ್ನು ಪರಿಶೀಲಿಸಿದೆ. ಬಳಿಕ ದೂರುದಾರರ ಮತ್ತು ಪ್ರತಿವಾದಿಗಳ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶ ಪ್ರಕಾಶ್ ಕೆ. 5ಲಕ್ಷ ರೂ. ಹಣವನ್ನು 6 ವಾರದೊಳಗೆ ನೀಡಬೇಕೆಂದು ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News