ಮಂಗಳೂರು: ʼ29ನೇ ಪ್ರೊಫ್‌ಕಾನ್ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನʼ ಸಮಾರೋಪ
ರಾಷ್ಟ್ರಮಟ್ಟದಲ್ಲಿ ವೃತ್ತಿಪರ ಕೋರ್ಸ್ ಗಳಿಗೆ ಏಕೀಕೃತ ಪ್ರವೇಶ ಪ್ರಕ್ರಿಯೆ ನಡೆಸಲು ಆಗ್ರಹ
ಮಂಗಳೂರು: ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಏಕೀಕೃತ ಪ್ರವೇಶ ಪ್ರಕ್ರಿಯೆ ನಡೆಸುವಂತೆ 29ನೇ ಜಾಗತಿಕ ವೃತ್ತಿಪರ ವಿದ್ಯಾರ್ಥಿಗಳ ಸಮ್ಮೇಳನ - ‘ಪ್ರೊಫ್‌ಕಾನ್’ ಸರಕಾರವನ್ನು ಆಗ್ರಹಿಸಿದೆ.
ಕರ್ನಾಟಕ ಸಲಫಿ ಅಸೋಸಿಯೇಶನ್ ಮತ್ತು ವಿಸ್ಡಮ್ ಇಸ್ಲಾಮಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನವು ಈ ಬಗ್ಗೆ ಸರಕಾರವನ್ನು ಆಗ್ರಹಿಸಿ ನಿರ್ಣಯ ಅಂಗೀಕರಿಸಿದೆ.
ವಿವಿಧ ಹಂತಗಳಲ್ಲಿ ನಡೆಯುವ ವಿವಿಧ ಸ್ಟ್ರೀಮ್ ಪ್ರವೇಶ ಪ್ರಕ್ರಿಯೆಗಳು ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡುತ್ತಿವೆ ಮತ್ತು ಪ್ರಕ್ರಿಯೆಗಳಲ್ಲಿ ದೀರ್ಘ ವಿಳಂಬವನ್ನು ಉಂಟುಮಾಡುತ್ತಿವೆ. ಇದನ್ನು ಸರಿಯಾಗಿ ಸಮನ್ವಯಗೊಳಿಸಿ ಏಕೀಕೃತ ಶೈಕ್ಷಣಿಕ ಕ್ಯಾಲೆಂಡರ್‌ನ್ನು ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.
ವೈದ್ಯಕೀಯ ಸೇರಿದಂತೆ ಕೋರ್ಸುಗಳ ಪ್ರವೇಶ ಪ್ರಕ್ರಿಯೆಗಳು ಇನ್ನೂ ಪೂರ್ಣಗೊಳ್ಳದ ಪ್ರಸ್ತುತ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಈ ವಿಷಯದಲ್ಲಿ ಅಧಿಕಾರಿಗಳು ತುರ್ತು ಆದ್ಯತೆಯೊಂದಿಗೆ ಮಧ್ಯಪ್ರವೇಶಿಸಿ ಪರಿಹಾರ ಕಾಣಬೇಕು ಎಂದು ಸಮ್ಮೇಳನ ಸರಕಾರವನ್ನು ಒತ್ತಾಯಿಸಿತು.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಎದುರಿಸಲು ಅಧಿಕಾರಿಗಳು ಸಮಗ್ರ ಕ್ರಿಯಾ ಯೋಜನೆಗಳನ್ನು ತಯಾರಿಸಬೇಕು. ಸಾಮಾಜಿಕ ಮಾಧ್ಯಮಗಳ ಹೆಚ್ಚಿದ ಬಳಕೆ ವಿದ್ಯಾರ್ಥಿಗಳಲ್ಲಿ ಉಂಟುಮಾಡುವ ಪ್ರಭಾವವನ್ನು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಭಯಾನಕವಾಗಿವೆ. 2024ರಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಏಳು ರಾಷ್ಟ್ರಗಳಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಗೆ ಸಂಪೂರ್ಣ ನಿಷೇಧ ಮತ್ತು ಇತರರಿಗೆ ಪೋಷಕರ ಒಪ್ಪಿಗೆಯೊಂದಿಗೆ ನಿರ್ಬಂಧವನ್ನು ಜಾರಿಗೊಳಿಸಿದ ಕ್ರಮಗಳನ್ನು ಮಾದರಿಯನ್ನಾಗಿ ಮಾಡಬೇಕು ಎಂದು ಸಮ್ಮೇಳನ ಕರೆ ನೀಡಿತು.
ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಭಾರತದಾದ್ಯಂತ ವಯಸ್ಸಿನ ಮಿತಿಯನ್ನು ನಿಗದಿಪಡಿಸುವುದನ್ನು ಸಹ ಪರಿಗಣಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು.
ರವಿವಾರ ನಡೆದ ವಿವಿಧ ಅಧಿವೇಶನಗಳಲ್ಲಿ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅಶ್ರಫ್, ಫೈಸಲ್ ಮೌಲವಿ ಪುದುಪ್ಪರಂಬ್, ಲಜ್ನತುಲ್ ಬುಹೂಸುಲ್ ಇಸ್ಲಾಮಿಯ್ಯ ಕಾರ್ಯದರ್ಶಿ ಶಮೀರ್ ಮದನಿ, ಮುಹಮ್ಮದ್ ಸ್ವಾದಿಕ್ ಮದನಿ, ವಿಸ್ಡಮ್ ಯೂತ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿ. ಮುಹಮ್ಮದ್ ಅಜ್ಮಲ್, ಯಾಸಿರ್ ಅಲ್ ಹಿಕಮಿ, ಮುಹಮ್ಮದ್ ಬಿನ್ ಶಾಕಿರ್, ಶೇಖ್ ಅಬ್ದುಸ್ಸಲಾಮ್ ಮದನಿ, ಶಫೀಖ್ ಬಿನ್ ರಹೀಮ್, ಹಂಝ ಶಾಕಿರ್ ಅಲ್ ಹಿಕಮಿ, ಅಜ್ವದ್ ಚೆರುವಾಡಿ, ಮತ್ತು ಡಾ. ಮುಹಮ್ಮದ್ ಮುಬಶೀರ್ ಟಿ.ಸಿ. ವಿಷಯ ಮಂಡಿಸಿದರು.
‘ಪ್ರೊಫ್ಲುಮಿನಾ ಅವಾರ್ಡ್ ಫಾರ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಎನ್‌ಐಟಿ. ಕಾಲಿಕಟ್‌ನ ಚಿನ್ನದ ಪದಕ ವಿಜೇತ ಮುಹಮ್ಮದ್ ಅಮೀನ್ ಅವರಿಗೆ ಪ್ರೊಫ್‌ಕಾನ್ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎ ಬಿ. ಇಬ್ರಾಹೀಂ ಪ್ರದಾನ ಮಾಡಿದರು.
ಸಮಾರೋಪ ಸಮ್ಮೇಳನವನ್ನು ಪ್ರಮುಖ ವಿದ್ವಾಂಸ ಮತ್ತು ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯ ಉಪಾಧ್ಯಕ್ಷ ಅಬೂಬಕ್ಕರ್ ಸಲಫಿ ಉದ್ಘಾಟಿಸಿದರು.
ವಿಸ್ಡಮ್ ಇಸ್ಲಾಮಿಕ್ ಸ್ಟ್ಟೂಡೆಂಟ್ಸ್ ಆರ್ಗನೈಸೇಶನ್ ಪ್ರಧಾನ ಕಾರ್ಯದರ್ಶಿ ಟಿ. ಮುಹಮ್ಮದ್ ಶಮೀಲ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಶನಲ್ ಅಲೈಡ್ ಹೆಲ್ತ್ ಕೌನ್ಸಿಲ್‌ನ ರಾಜ್ಯ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್ ಫರೀದ್ ಮುಖ್ಯ ಅತಿಥಿಗಳಾಗಿದ್ದರು.
ಹುಸೈನ್ ಸಲಫಿ ಶಾರ್ಜಾ ಮುಖ್ಯ ಭಾಷಣ ಮಾಡಿದರು.
ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ರಾಜ್ಯ ಕೋಶಾಧಿಕಾರಿ ಕೆ. ಸಜ್ಜಾದ್, ಕರ್ನಾಟಕ ಸಲಫಿ ಅಸೋಸಿಯೇಶನ್‌ನ ಮಂಗಳೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಅಲ್ ಹಿಕಮಿ ಶುಭ ಹಾರೈಸಿದರು.
ಕರ್ನಾಟಕ ಸಲಫಿ ಎಸೊಶಿಯೇಷನ್ ಇದರ ನಾಯಕರಾದ ಇಝಾಝ್ ಸ್ವಲಾಹಿ, ಸಿರಾಜ್ ಸಜಿಪ, ನಝೀರ್ ಸಲಫಿ, ಹಂಝ ಪುತ್ತೂರು, ಅಝಾಮ್ ದಮ್ಮಾಮ್, ಶಾಹುಲ್ ಹಮೀದ್ ಖತಾರ್ ಇಂಜಿನಿಯರ್ ರಶೀದ್ ಮತ್ತು ಸಯ್ಯದ್ ಶಾಝ್ ವೇದಿಕೆಯಲ್ಲಿದ್ದರು. ವಿಸ್ಡಮ್ ಸ್ಟೂಡೆಂಟ್ಸ್ ರಾಜ್ಯ ಕಾರ್ಯದರ್ಶಿಗಳಾದ ಕಾಬಿಲ್ ಸಿ.ವಿ. ಸ್ವಾಗತಿಸಿದರು , ಅಬ್ದುಲ್ ಮಜೀದ್ ಚುಂಗತ್ತರ ವಂದಿಸಿದರು.
ಕೇರಳದ ವಿವಿಧ ಜಿಲ್ಲೆಗಳಿಂದ, ಬೆಂಗಳೂರು, ಹೈದರಾಬಾದ್, ಚೆನ್ನೈ, ದಿಲ್ಲಿ ಮುಂತಾದ ದೇಶದ ಪ್ರಮುಖ ನಗರಗಳು ಮತ್ತು ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಂದ ನೂರಾರು ವೃತ್ತಿಪರ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.