ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ದೀಪಕ್ ಸಹಿತ ಮೂವರು ಪೊಲೀಸ್ ವಶಕ್ಕೆ
ಅಬ್ದುಲ್ ರಹ್ಮಾನ್
ಮಂಗಳೂರು: ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಅಬ್ದುಲ್ ರಹ್ಮಾನ್ ಅವರನ್ನು ಕೊಲೆಗೈದ ಆರೋಪದ ಮೇರೆಗೆ ಸ್ಥಳೀಯನೇ ಆದ ಪರಿಚಯದ ದೀಪಕ್ ಸಹಿತ ಮೂವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.
ಕೊಲೆಕೃತ್ಯದಲ್ಲಿ ಸುಮಾರು 15 ಮಂದಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಕೃತ್ಯ ನಡೆದ ಬಳಿಕ ಇವರು ಪರಾರಿಯಾಗಿದ್ದಾರೆ. ಆ ಪೈಕಿ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸುತ್ತಿದ್ದಾರೆ. ಅಬ್ದುಲ್ ರಹ್ಮಾನ್ ಹತ್ಯೆ ಮತ್ತು ಖಲಂದರ್ ಶಾಫಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಪೈಕಿ ದೀಪಕ್ ಎಂಬಾತ ಅಬ್ದುಲ್ ರಹ್ಮಾನ್‌ರ ಪರಿಚಯಸ್ಥ ಎನ್ನಲಾಗಿದೆ.
ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ಕೋಮುದ್ವೇಷದ ಭಾವನೆಯಿಂದ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಜ್ಪೆಯಲ್ಲಿ ಜನಾಗ್ರಹ ಸಮಾವೇಶದಲ್ಲಿ ಉದ್ರೇಕಕಾರಿ ಭಾಷಣ, ಕೋಮುಭಾವನೆಯನ್ನು ಕೆರಳಿಸಿ ಸೇಡು ತೀರಿಸಿಕೊಳ್ಳಲು ನೀಡಿದ ಕರೆಯ ಬಳಿಕ ಅಮಾಯಕ ಅಬ್ದುಲ್ ರಹ್ಮಾನ್‌ರ ಕೊಲೆಯಾಗಿದೆ. ಈ ಹಿಂದೆ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತಿಕಾರವಾಗಿ ಸುರತ್ಕಲ್‌ನ ಫಾಝಿಲ್‌ನ ಹತ್ಯೆಯ ರೀತಿಯಲ್ಲೇ ಅಬ್ದುಲ್ ರಹ್ಮಾನ್‌ರನ್ನು ದುಷ್ಕರ್ಮಿಗಳು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಬ್ದುಲ್ ರಹ್ಮಾನ್‌ರ ಹತ್ಯೆಯ ಬೆನ್ನಲ್ಲೆ ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂಬ ಆಗ್ರಹ ಕೂಡಾ ಕೇಳಿ ಬಂದಿದೆ.